ಬರಪೀಡಿತ ದಾವಣಗೆರೆ ಜಿಲ್ಲೆಯಲ್ಲಿ ಈ ವರ್ಷ ಬರೋಬ್ಬರಿ 119 ಕೋಟಿ ರೂಪಾಯಿ ಮೌಲ್ಯದ ಅಡಕೆ ಬೆಳೆ ನಾಶವಾಗಿದ್ದು, ಇತರೆ ಬೆಳೆಗಳೂ ಒಣಗಿ ಹೋಗಿ ರೈತರು ಕಂಗಾಲಾಗಿದ್ದಾರೆ.
ಜಿಲ್ಲೆಯಲ್ಲಿ 1 ಲಕ್ಷ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬಹುತೇಕ ನಾಶವಾಗಿದೆ. ಮುಂಗಾರು ವೇಳೆ 2 ಲಕ್ಷದ 27 ಸಾವಿರ ಹೇಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಮಳೆ ಕೈಕೊಟ್ಟ ಕಾರಣ 1 ಲಕ್ಷದ 50 ಸಾವಿರ ಹೇಕ್ಟರ್ ಪ್ರದೇಶದ ಬೆಳೆಗೆ ಸಂಪೂರ್ಣ ಹಾನಿಯಾಗಿದೆ. ಮೆಕ್ಕೆಜೋಳ, ರಾಗಿ, ಈರುಳ್ಳಿ ಹೀಗೆ ಎಲ್ಲವೂ ಒಣಗಿ ಹೋಗಿವೆ.
ಇತ್ತೀಚಿಗೆ ಕೇಂದ್ರದ ಬರ ಅಧ್ಯಯನ ತಂಡ ಜಿಲ್ಲೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತ್ತು. ದಾವಣಗೆರೆ ಜಿಲ್ಲೆಯಲ್ಲಿ 47 ಸಾವಿರ ರೈತರು ಈಗಾಗಲೇ ಬೆಳೆ ವಿಮೆ ಮಾಡಿಸಿದ್ದಾರೆ.
ಜಿಲ್ಲೆಯಲ್ಲಿ ಅಡಕೆ ತೋಟವೂ ಒಣಗುತ್ತಿದ್ದು ಬೆಳೆ ಕೈಗೆ ಬಾರದೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದಿಂದ ಸೂಕ್ತ ಬರ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
ಅಂತರ್ಜಲ ಮಟ್ಟ ಕುಸಿದಿದ್ದು, ಬೋರ್ವೆಲ್ಗಳಲ್ಲಿ ನೀರು ಪಾತಾಳ ತಲುಪಿದೆ. ಕೆರೆ-ಕಟ್ಟೆಗಳು ಬತ್ತಿದ್ದು, ಹನಿ ನೀರಿಗೂ ಜನರು ಪರದಾಡುವ ಸ್ಥಿತಿಯಿದೆ. ಮೊದಲು ಬಾವಿ ಕೊರೆದರೆ 180ರಿಂದ 250 ಅಡಿಯಲ್ಲಿ ನೀರು ಸಿಗುತ್ತಿತ್ತು. ಆದರೆ, ಈಗ ಬರೋಬ್ಬರಿ 600ರಿಂದ 800 ಅಡಿ ಬೋರ್‌ವೆಲ್ ಕೊರೆದರೂ ನೀರು ಸಿಗುತ್ತಿಲ್ಲ ಎನ್ನುತ್ತಿದ್ದಾರೆ ಜಿಲ್ಲೆಯ ರೈತರು.
ದಾವಣಗೆರೆ, ಹೊನ್ನಾಳಿ, ಹರಿಹರ, ಜಗಳೂರು, ಚನ್ನಗಿರಿ ಹಾಗೂ ನ್ಯಾಮತಿಯ ಒಟ್ಟು 6 ತಾಲೂಕುಗಳನ್ನು ಬರಪೀಡಿತ ಪ್ರದೇಶದ ಪಟ್ಟಿಗೆ ಸೇರಿಸಲಾಗಿದೆ. ಕಳೆದ 25 ವರ್ಷಗಳಲ್ಲಿ 16 ವರ್ಷ ಜಗಳೂರು ತಾಲೂಕು ಬರದಿಂದ ನಲುಗಿದೆ. ಬರದ ಹೊಡೆತ ಜಾನುವಾರುಗಳು, ಪ್ರಾಣಿ, ಪಕ್ಷಿಗಳಿಗೂ ತಟ್ಟಿದ್ದು ನೀರಿಲ್ಲದೇ ನಲುಗುತ್ತಿವೆ. ಜಾನುವಾರುಗಳಿಗಾಗಿ ಗೋ ಶಾಲೆಗಳನ್ನು ಆರಂಭಿಸಿ ಮೇವು ಪೂರೈಸುವಂತೆ ಜಿಲ್ಲೆಯ ರೈತರು ಆಗ್ರಹಿಸುತ್ತಿದ್ದಾರೆ.