ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಅವಕಾಶವಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಹಾಸನ ನಗರದ ತಾಲೂಕು ಕಚೇರಿ ಪಕ್ಕದ ಆವರಣದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಗೃಹ ಮಂಡಳಿ ಅಧ್ಯಕ್ಷ ಕೆ ಎಂ ಶಿವಲಿಂಗೇಗೌಡರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
“ಇಂದು ಜಿಲ್ಲೆಯ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಭಾಗವಹಿಸುವ ಮೂಲಕ ಉತ್ತಮ ಸಂದೇಶ ನೀಡಿದ್ದೇವೆ. ನಾವು ಒಗ್ಗಟ್ಟಿನಿಂದ ಮುನ್ನಡೆಯಲ್ಲಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಒಗ್ಗಟ್ಟಾಗಿದ್ದು, ಯಾವುದೇ ಪಕ್ಷದ ವಿರುದ್ಧ ದ್ವೇಷಕ್ಕಾಗಿ ಅಲ್ಲ” ಎಂದು ಸ್ಪಷ್ಟಪಡಿಸಿದರು.
“ಈ ಬಾರಿ ಕಾಂಗ್ರೆಸ್ ಗೆಲ್ಲದಿದ್ದರೆ ಮತ್ತೆ ಜಿಲ್ಲೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಉತ್ತಮ ನಾಯಕತ್ವದಲ್ಲಿ ಸರ್ಕಾರ ಮುನ್ನಡೆಯುತ್ತಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ಖಚಿತ” ಎಂದು ಹೇಳಿದರು.
“ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಸಾಮಾನ್ಯ. ಹಿಂದೆ ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್ ನಡುವೆಯೇ ಭಿನ್ನಾಭಿಪ್ರಾಯವಿತ್ತು. ಆದರೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ಗುರಿಯನ್ನು ಮರೆಯಲಿಲ್ಲ. ಅಂತೆಯೇ ಜಿಲ್ಲೆಯಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ತರಲು ನಮ್ಮ ಗುರಿ ಇರಬೇಕು” ಎಂದು ಸಲಹೆ ನೀಡಿದರು.
“ಎಚ್ ಸಿ ಶ್ರೀಕಂಠಯ್ಯ ಅಜಾತಶತ್ರು ಆಗಿದ್ದರು. ಅವರ ಅವಧಿಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸದೃಢವಾಗಿತ್ತು. ನಂತರ ಒಗ್ಗಟ್ಟಿನ ಕೊರತೆಯಿಂದ ಪಕ್ಷ ದೃಢತೆ ಕಳೆದುಕೊಂಡಿತ್ತು. ಇಂದಿನಿಂದಲೇ ಎಲ್ಲರೂ ಸಂಕಲ್ಪ ಮಾಡಬೇಕು. ಭಿನ್ನಾಭಿಪ್ರಾಯವನ್ನು ಮರೆಯಬೇಕು. ಪಕ್ಷಕ್ಕೆ ಮಾರಕವಾಗದಂತೆ ಮುನ್ನಡೆದು ಲೋಕಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯ ಗೆಲುವಿಗೆ ಪಣತೊಡಬೇಕು” ಎಂದು ಹೇಳಿದರು.
ಶಿವಲಿಂಗೇಗೌಡರೇ ಮುಂದೆ ಹಾಸನ ಉಸ್ತುವಾರಿ
“ಶಿವಲಿಂಗೇಗೌಡರು ಗ್ರಾಮೀಣ ಭಾಷೆಯಲ್ಲಿ ಮಾತನಾಡುತ್ತ ಜನರ ಮನಸ್ಸಿಗೆ ಹತ್ತಿರವಾಗಿದ್ದಾರೆ. ಇಂದಿಗೂ ಉತ್ತಮ ಆಡಳಿತ ನೀಡುತ್ತಿದ್ದಾರೆ. ವಿಧಾನಸಭೆ ಅಧಿವೇಶನ ಇರಲಿ, ಸಾರ್ವಜನಿಕ ಸಭೆ ಇರಲಿ, ಅವರ ಗ್ರಾಮೀಣ ಭಾಷೆ ಜನರನ್ನು ತಲುಪುತ್ತದೆ” ಎಂದು ಹೇಳಿದರು.
“ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಅಂತಿಮ ಗಳಿಗೆಯಲ್ಲಿ ಕೈತಪ್ಪಿತು. ಮುಂದೆ ನೂರಕ್ಕೆ ನೂರು ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದು, ಹಾಸನ ಜಿಲ್ಲೆಯ ಉಸ್ತುವಾರಿಯಾಗಿ ಬರಲಿದ್ದಾರೆ. ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷರಾಗಿ ನೇಮಕವಾಗಿದ್ದು, ಜಿಲ್ಲೆಯ ಹಾಗೂ ತಾಲೂಕಿನ ಅಭಿವೃದ್ಧಿಗೆ ಮತ್ತಷ್ಟು ಉತ್ತಮ ಕೆಲಸ ಮಾಡಲಿದ್ದಾರೆಂಬ ವಿಶ್ವಾಸವಿದೆ” ಎಂದರು.
ಕೆ ಎಂ ಶಿವಲಿಂಗೇಗೌಡ ಮಾತನಾಡಿ, “ಗಂಡಸಿ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯನಾಗಿ, ಶಾಸಕನಾಗಿ ಮುನ್ನಡೆಯುತ್ತಿರುವ ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ನೀಡಿದ್ದಾರೆ. ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ ಅವರ ಸಹಕಾರವಿದೆ. ನನ್ನ ಕ್ಷೇತ್ರದ ಜನರು ನನ್ನನ್ನು ಶಾಸಕನಾಗಿ ಮುಂದುವರಿಯಲು ಅವಕಾಶ ನೀಡಿದ್ದು, ಅವರ ಋಣ ತೀರಿಸಲು ದೇವರು ನನಗೆ ಶಕ್ತಿ ಕೊಡಲಿ. ಪಕ್ಷ ಬದಲಾವಣೆ ಮಾಡಿದರೂ ಸಹ ಜನರು ನನ್ನನ್ನು ಮತ್ತೊಮ್ಮೆ ಆರಿಸಿ ಕಳಿಸಿದರು” ಎಂದರು.
“ಜಿಲ್ಲೆಯಲ್ಲಿ ಮಾಜಿ ಸಚಿವ ಬಿ ಶಿವರಾಂ ಅವರ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದ್ದು, ಕಳೆದ ಕೆಲವು ವಾರಗಳಿಂದ ಈ ಸುದ್ದಿ ವಿಪರೀತವಾಗಿದೆ. ಅಧಿಕಾರಕ್ಕೆ ಜಗಳ ಆಡೋಣ. ಆದರೆ ಚುನಾವಣೆ ವೇಳೆ ಜಗಳ ಬೇಡ. ಇದರಿಂದ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆ ಆಗಲಿದ್ದು ಪಕ್ಷದ ಹಿತಕ್ಕಾಗಿ ನಾವೆಲ್ಲ ಮುನ್ನಡೆಯಬೇಕಿದೆ” ಎಂದು ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ ಹೇಳಿದರು.
ಮಾಜಿ ಸಚಿವ ಬಿ ಶಿವರಾಂ ಮಾತನಾಡಿ, “ಜಿಲ್ಲೆಯ ಶಾಸಕರೇ ಉಸ್ತುವಾರಿ ವಹಿಸಿಕೊಂಡರೆ ಉತ್ತಮ ಕಾರ್ಯ ನಿರ್ವಹಣೆಗೆ ಸಹಕಾರಿಯಾಗಲಿದೆ. ಬೇರೆ ಜಿಲ್ಲೆಯ ಶಾಸಕರು ಮಂತ್ರಿಯಾದರೆ ಅವರ ಕಿವಿಗೆ ಇಲ್ಲಸಲ್ಲದ ಮಾತುಗಳನ್ನು ತುರುಕಿ ಅಲ್ಲೋಲಕಲ್ಲೋಲ ಸೃಷ್ಟಿ ಮಾಡುವಂತಹ ಘಟನೆಗಳೇ ಹೆಚ್ಚುತ್ತವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ನಾನು ಯಾವುದೇ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ಆಡಲಿಲ್ಲ. ನೋವಾದಾಗ ಮಾತನಾಡಿದ್ದೇನೆ. ಇದೀಗ ಸಮಸ್ಯೆ ಬಗೆಹರಿಸಿಕೊಂಡು ವಾತಾವರಣ ತಿಳಿಯಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸೋಣ. ಕಳೆದ ಬಾರಿ ಜಿಲ್ಲೆಯಲ್ಲಿ 6 ಮಂದಿ ಕಾಂಗ್ರೆಸ್ ಶಾಸಕರು ಸೋಲಲು ಇಂತಹ ಮೀರ್‌ಸಾದಿಕ್ ಕಾರಣರಾಗಿದ್ದು, ಅವರಿಗೆ ಕಟ್ಟೆಚ್ಚರ ನೀಡಬೇಕಾದ ಅನಿವಾರ್ಯತೆ ಇದೆ. ಶಿವಲಿಂಗೇಗೌಡರು ಉತ್ತಮ ರೀತಿಯಲ್ಲಿ ಆಡಳಿತ ನೀಡುತ್ತಿದ್ದು, ಗೃಹ ಮಂಡಳಿ ಅಧ್ಯಕ್ಷರಾಗಿ ಮತ್ತಷ್ಟು ಉನ್ನತ ಕೆಲಸ ಮಾಡಲಿ” ಎಂದು ಹೇಳಿದರು.
“ಕೆಲ ದಿನಗಳಿಂದ ಮಾಧ್ಯಮಕ್ಕೆ ನಾನೂ ಸೇರಿದಂತೆ ಕೆಲ ನಾಯಕರು ಮಾತನಾಡಿರುವುದರಿಂದ ಪಕ್ಷಕ್ಕೆ ಹಿನ್ನಡೆ ಆಯಿತು. ಇದಕ್ಕೆಲ್ಲ ಇಂದು ತೆರೆ ಎಳೆಯಲಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಗೆಲುವಿಗೆ ಪಣತೊಟ್ಟಿದ್ದೇವೆ” ಎಂದು ಗೃಹ ಮಂಡಳಿ ಅಧ್ಯಕ್ಷ ಕೆ ಎಂ ಶಿವಲಿಂಗೇಗೌಡ ಹೇಳಿದರು.
ಕೇಂದ್ರದಿಂದ ನಿರಂತರ ಅನ್ಯಾಯ
“ರಾಜ್ಯದಿಂದ ₹4.30 ಲಕ್ಷ ಕೋಟಿ ತೆರಿಗೆ ಪಾವತಿಸಿದರೂ ಕೇಂದ್ರ ಸರ್ಕಾರ ₹30,000 ಕೋಟಿ ಮಾತ್ರ ರಾಜ್ಯಕ್ಕೆ ನೀಡುತ್ತಿದೆ. ಈ ರೀತಿಯ ಅನ್ಯಾಯವನ್ನು ದಾಖಲೆ ಸಹಿತ ಸಿದ್ದರಾಮಯ್ಯ ತೋರಿಸಿದ್ದಾರೆ. ಇದಕ್ಕೆಲ್ಲ ಲೋಕಸಭೆ ಚುನಾವಣೆಯಲ್ಲಿ ಜನ ತಕ್ಕ ಉತ್ತರ ನೀಡಲಿದ್ದಾರೆ” ಎಂದು ಕೆ ಎಂ ಶಿವಲಿಂಗೇಗೌಡ ಹೇಳಿದರು.
“ರಾಜ್ಯದಲ್ಲಿ ಎರಡು ಬಾರಿ ಬಿಜೆಪಿ ಹಿಂಬಾಗಿಲ ರಾಜಕೀಯದಿಂದ ಅಧಿಕಾರಕ್ಕೆ ಬಂದಿದೆ. ಬಸವರಾಜ ಬೊಮ್ಮಾಯಿ ಅವರ ಅಧಿಕಾರ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ₹30,000 ಕೋಟಿ ಕಾಮಗಾರಿ ಬಾಕಿ ಉಳಿಸಿಕೊಂಡಿದೆ. ಕಾಮಗಾರಿ ಮುಕ್ತಾಯಗೊಂಡಿರುವ ₹7.5 ಸಾವಿರ ಕೋಟಿ ಬಾಕಿ ಮಾಡಲಾಗಿದೆ” ಎಂದು ಟೀಕಿಸಿದರು.
“ಎನ್‌ಡಿಆರ್‌ಎಫ್ ಮಾನದಂಡದಂತೆ ಕೇಂದ್ರ ಸರ್ಕಾರ ಈವರೆಗೆ ಅನುದಾನ ಬಿಡುಗಡೆ ಮಾಡಿಲ್ಲ. ಮಂಗಳೂರು- ಬೆಂಗಳೂರು ಹೆದ್ದಾರಿ ಇಂದಿಗೂ ಪೂರ್ಣಗೊಂಡಿಲ್ಲ. ಹಾಸನ ನಗರದ ಮೇಲ್ಸೇತುವೆ ಕಾಮಗಾರಿಯೂ ಮುಕ್ತಾಯವಾಗಿಲ್ಲ. ಲೋಕಸಭೆ ಚುನಾವಣೆಯಲ್ಲಿ ಎಲ್ಲದಕ್ಕೂ ಉತ್ತರ ನೀಡಲಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರೈತರ ಖಾತೆಗೆ ₹628 ಕೋಟಿ ಅನುದಾನ ಬಿಡುಗಡೆ : ಸಚಿವ ಕೃಷ್ಣ ಬೈರೇಗೌಡ
“5 ಕೆಜಿ ಅಕ್ಕಿ ನೀಡದೆ ರಾಜಕೀಯ ಅನ್ಯಾಯ ಮಾಡಿದ್ದೀರಿ. ಕರ್ನಾಟಕದವರೇನು ಭಾರತೀಯರಲ್ಲವೇ? ಈ ಎಲ್ಲ ವಿಷಯಗಳನ್ನು ಜನರ ಮುಂದಿಟ್ಟು ಮುಂದಿನ ಚುನಾವಣೆಯಲ್ಲಿ ಜಾಲಾಡಲಿದ್ದೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರುಗಳಾದ ಎಂ ಎ ಗೋಪಾಲಸ್ವಾಮಿ, ಸಿ ಎಸ್ ಪುಟ್ಟೇಗೌಡ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಇ ಎಚ್ ಲಕ್ಷ್ಮಣ್, ಜತ್ತೇನಹಳ್ಳಿ ರಾಮಚಂದ್ರ, ಪಕ್ಷದ ವಕ್ತಾರ ದೇವರಾಜೇಗೌಡ, ಪ್ರಸನ್ನ, ಬಾಗೂರು ಮಂಜೇಗೌಡ, ರಾಮಚಂದ್ರ, ಮುನಿಸ್ವಾಮಿ, ರಾಜಣ್ಣ, ವಿನಯ್ ಗಾಂಧಿ, ತಾರಾ ಚಂದನ್, ಖಡಾ ಖಡಿ ಪೀರ್‌ಸಾಬ್, ಎಚ್ ಕೆ ಮಹೇಶ್, ಶ್ರೇಯಸ್ ಪಟೇಲ್, ಶಂಕರ್, ಬಾಬಣ್ಣ, ಮುರಳಿ ಮೋಹನ್, ಎಚ್ ಎಸ್ ವಿಜಯಕುಮಾರ್, ಬನವಾಸೆ ರಂಗಸ್ವಾಮಿ, ಬಿ ಕೆ ಮಂಜಣ್ಣ, ರಂಜಿತ್ ಗೊರೂರು, ಶ್ರೀನಿವಾಸ್, ಚಂದ್ರು, ಗ್ರಾನೈಟ್ ರಾಜಶೇಖರ್ ಇದ್ದರು.