ಕಮಲನಗರ ಪಟ್ಟಣದಲ್ಲಿ ಪ್ರಸಕ್ತ ಸಾಲಿನಲ್ಲಿ ಕನ್ನಡ ಮಾಧ್ಯಮ ಪ್ರೌಢ ಶಾಲೆ ಆರಂಭ ಮತ್ತು ಕನ್ನಡ ಭವನ ನಿರ್ಮಾಣಕ್ಕೆ ಸರಕಾರ ಅನುದಾನ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ತಾಲೂಕು ಕಸಾಪ ಪದಾಧಿಕಾರಿಗಳಿಗೆ ಆಗ್ರಹಿಸಿದರು.
ಪಟ್ಟಣದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಜನಸ್ಪಂದನ ಹಾಗೂ ಗ್ಯಾರಂಟಿ ಸಮಾವೇಶದಲ್ಲಿ ಕಸಾಪ ತಾಲೂಕಾಧ್ಯಕ್ಷ ಪ್ರಶಾಂತ ಮಠಪತಿ ನೇತೃತ್ವದಲ್ಲಿ ಸಚಿವ ಈಶ್ವರ ಖಂಡ್ರೆ ಅವರಿಗೆ ಹಕ್ಕೋತಾಯ ಪತ್ರ ಸಲ್ಲಿಸಿದರು.
ಕಮಲನಗರ ತಾಲೂಕು ಕೇಂದ್ರವಾಗಿದೆ, ಕನ್ನಡ ಜಂಗಮರೆಂದು ಖ್ಯಾತನಾಮರಾದ ಲಿಂಗೈಕ್ಯ ಡಾ. ಪಟ್ಟದ್ದೇವರ ಜನ್ಮಸ್ಥಳ ಇದಾಗಿದೆ. ಆದರೆ ಪಟ್ಟಣದಲ್ಲಿ ಸರ್ಕಾರಿ ಮಾಧ್ಯಮ ಪ್ರೌಢ ಶಾಲೆ ಇಲ್ಲ. ಇದರಿಂದ ಸುತ್ತಲಿನ ಗ್ರಾಮಗಳ ಬಡ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ಬಡ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಪ್ರೌಢ ಶಾಲೆ ಆರಂಭಿಸಬೇಕು” ಎಂದು ಒತ್ತಾಯಿಸಿದರು.
ಕನ್ನಡ ಭವನ ನಿರ್ಮಾಣಕ್ಕೆ ಪಟ್ಟಣದಲ್ಲಿ ಗ್ರಾಮ ಪಂಚಾಯಿತಿಯಿಂದ ನಿವೇಶನ ದೊರೆತಿದೆ. ಹೀಗಾಗಿ ಸರಕಾರ ಭವನ ನಿರ್ಮಾಣಕ್ಕೆ ಸೂಕ್ತ ಅನುದಾನ ಬಿಡುಗಡೆ ಮಾಡುವಂತೆ” ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರೈತರ ಖಾತೆಗೆ ₹628 ಕೋಟಿ ಅನುದಾನ ಬಿಡುಗಡೆ : ಸಚಿವ ಕೃಷ್ಣ ಬೈರೇಗೌಡ
ಈ ಸಂದರ್ಭದಲ್ಲಿ ಪ್ರಮುಖರಾದ ಜನಾರ್ಧನ ಸಾವರಗೇಕರ್ ಯಶವಂತ ಬಿರಾದಾರ, ಧನರಾಜ ಭವರಾ, ಸಂತೋಷ ಸುಲಾಕೆ, ಡಾ.ಎಸ್ ಎಸ್ ಮೈನಾಳೆ, ಸಂತೋಷ ಬಿರಾದಾರ, ಸಾಯಿನಾಥ ಕಾಂಬಳೆ ಸೇರಿದಂತೆ ಕನ್ನಡಾಭಿಮಾನಿಗಳು ಇದ್ದರು.