ಅಂಗನವಾಡಿ ಕೇಂದ್ರಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಬಡ ಮಕ್ಕಳ ತಾಣ ಅನ್ನೋರಿಗೆ ಈ ಅಂಗನವಾಡಿ ಅಪವಾದ, ಎಲ್ಲವೂ ಅವ್ಯವಸ್ಥೆಯಿಂದ ಕೂಡಿದೆ ಎಂಬ ಆರೋಪ ಎಲ್ಲ ಕಡೆ ಕೇಳುವುದು ಸಹಜ. ಆದರೆ, ಗಡಿನಾಡು ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನಲ್ಲಿರುವ ಈ ಅಂಗನವಾಡಿ ಕೇಂದ್ರ ಎಲ್ಲಾ ಅಂಗನವಾಡಿಗಳಿಗಿಂತ ಭಿನ್ನವಾಗಿ ಕಾಣಿಸುತ್ತದೆ.
ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಡಿಗ್ಗಿ ಗ್ರಾಮದ ಅಂಗನವಾಡಿ ಕೇಂದ್ರ-1ರ ಕಾರ್ಯಕರ್ತೆ ಸವಿತಾ ರಾಂಪುರೆ ಅವರು ತಮ್ಮ ಪರಿಶ್ರಮ ಹಾಗೂ ಅಪಾರ ಕಾಳಜಿಯಿಂದ ರೂಪಿಸಿದ ಕೇಂದ್ರ ಜಿಲ್ಲೆಯಲ್ಲಿ ಮಾದರಿ ಅಂಗನವಾಡಿ ಎಂದು ಸೈ ಎನಿಸಿಕೊಂಡಿದೆ.
ಶಿಕ್ಷಕಿ ಸವಿತಾ ರಾಂಪೂರೆ ಅವರು ಓದಿದ್ದು ಬಿ.ಎ, ಬಿ.ಇಡ್. ಕಳೆದ 21 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದಿಂದ ಬರುವ ಅಲ್ಪಸ್ವಲ್ಪ ಸಹಾಯಧನ ಜೊತೆಗೆ ತಮ್ಮ ಸಂಬಳದ ಹಣದಿಂದ ಅಂಗನವಾಡಿ ಮಕ್ಕಳಿಗೆ ಅಗತ್ಯವಾದ ಕಲಿಕೆಯ ಸಾಮಗ್ರಿಗಳು ಖರೀದಿಸಿದ್ದಾರೆ. ಪುಟಾಣಿಗಳಿಗೆ ಕಲಿಯಲು ಬೇಕಾದ ಎಲ್ಲ ಬಗೆಯ ಪಾಠೋಪಕರಣ, ಆಟಿಕೆಗಳಿಗೆ ಇಲ್ಲಿ ಕಮ್ಮಿಯಿಲ್ಲ. ಕಲರ್ ಕಲರ್ ಚಾರ್ಟ್ ಮೇಲೆ ಬರಹ, ಚಿತ್ರ ಬಿಡಿಸುವುದು ಕರಗತ ಮಾಡಿಕೊಂಡ ಶಿಕ್ಷಕಿ ಸವಿತಾ, ಅಂಗನವಾಡಿಗೆ ಹೊಸ ರೂಪ ನೀಡಿದ ಫಲವಾಗಿ ಇಂದು ಎಲ್ಲರ ಗಮನ ಸೆಳೆಯುತ್ತಿದೆ.
ಕಣ್ಮನ ಸೆಳೆಯುವ ಗೋಡೆ ಬರಹ :
ಕೇಂದ್ರವು ನಲಿ ಕಲಿ ಕೊಠಡಿಯಂತೆ ಸಿಂಗಾರಗೊಂಡಿದೆ. ಗೋಡೆಯ ಮೇಲೆ ಸುಂದರವಾದ ಕಾಡು, ಆನೆ, ಹುಲಿ, ಚಿರತೆ, ಮಂಗ ಇತರ ಪ್ರಾಣಿ ಪಕ್ಷಿಗಳ ಚಿತ್ರ, ಛೋಟಾ ಭೀಮ್, ಪುಟಾಣಿ ಗೊಂಬೆಗಳ ಚಿತ್ರಗಳು ಹೊರಗಿನಿಂದ ಸ್ವಾಗತ ಕೋರುತ್ತವೆ.
ಕನ್ನಡ, ಇಂಗ್ಲಿಷ್ ಅಕ್ಷರಗಳ ವರ್ಣಮಾಲೆ, ರಟ್ಟಿನ ಬಾಕ್ಸ್ಗಳಿಗೆ ಶೃಂಗರಿಸಿ ತಿಂಗಳು, ಹಬ್ಬ, ಹವಾಮಾನ ವರದಿ ಹೀಗೆ ಮಕ್ಕಳ ಜ್ಞಾನ ಹೆಚ್ಚಿಸಬಲ್ಲ ಎಲ್ಲ ಪ್ರಯತ್ನ ಮಾಡಲಾಗಿದೆ. ಅಷ್ಟೇ ಅಲ್ಲದೆ ಶಿಕ್ಷಕಿ ಮಕ್ಕಳಿಗೆ ಹಾಡು, ಕಥೆ, ಕುಣಿತ ಜತೆಗೆ ನಾನಾ ನಮೂನೆಯ ಬಣ್ಣ ಜೋಡಿಸಿ ಮಕ್ಕಳಿಗೆ ಕಲಿಕೆಗೆ ಪ್ರೋತ್ಸಾಹ ನೀಡುತ್ತಾರೆ.
“ಬಹುತೇಕ ಪೋಷಕರು ಖಾಸಗಿ ಶಾಲೆಗೆ ಸೇರಿಸುವ ಧಾವಂತದಲ್ಲಿರುವ ಇಂದಿನ ಕಾಲದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಜೊತೆಗೆ ಅಗತ್ಯ ಪಾಠ ಬೋಧನೆ ಮಾಡುವ ಅಪರೂಪ ಅಂಗನವಾಡಿ ನಮ್ಮೂರಲ್ಲಿದೆ. ಪುಟಾಣಿಗಳಿಗೆ ಇಲ್ಲಿನ ಕಾರ್ಯಕರ್ತೆಯರು ಉತ್ತಮ ರೀತಿಯಿಂದ ನೋಡಿಕೊಳ್ಳುವ ಕಾರಣಕ್ಕೆ ಮಕ್ಕಳು ದಿನನಿತ್ಯ ಹೋಗುತ್ತಾರೆ” ಎನ್ನುತ್ತಾರೆ ಗ್ರಾಮಸ್ಥರು.

“ಮೊದಲು ಅಂಗನವಾಡಿ ಕೇಂದ್ರಕ್ಕೆ ಹೋಗು ಅಂದರೆ ಮಕ್ಕಳು ಹಠ ಮಾಡ್ತಾ ಇದ್ದರು. ಈಗ ಒಂದಿನವೂ ತಪ್ಪದೇ ಕೇಂದ್ರಕ್ಕೆ ಓಡಿ ಹೋಗುತ್ತಾರೆ. ಅಂಗನವಾಡಿಯಲ್ಲಿ ಬರೀ ಊಟ ಕೊಟ್ಟು ಮನೆಗೆ ಕಳಿಸುತ್ತಾರೆ ಅಂತ ಕೇಳಿದ್ದೇವೆ. ಆದರೆ ನಮ್ಮೂರಿನ ಅಂಗನವಾಡಿಯ ಮಕ್ಕಳು ಪಾಠ, ಆಟದೊಂದಿಗೆ ಚೆನ್ನಾಗಿ ನಲಿಯುತ್ತಿದ್ದಾರೆ. ನಮ್ಮ ಮಗು ಮನೆಯಲ್ಲಿ ಊಟ ಮಾಡುವುದಿಲ್ಲ, ಆದರೆ ಅಂಗನವಾಡಿ ಬಂದರೆ ಚೆನ್ನಾಗಿ ಊಟ ಮಾಡ್ತಾನೆ” ಎಂದು ಪೋಷಕರಾದ ಜ್ಯೋತಿ ರಾಂಪೂರೆ ಈದಿನ.ಕಾಮ್ ಜತೆಗೆ ಮಾತನಾಡಿ ಖುಷಿ ಹಂಚಿಕೊಂಡರು.
“ನನಗೆ ಮೊದಲಿನಿಂದಲೂ ಮಕ್ಕಳಿಗೆ ಕ್ರಿಯಾತ್ಮಕವಾಗಿ ರೂಪಿಸಬೇಕೆಂಬ ಆಸಕ್ತಿಯಿದೆ. ಎಲ್ಲೇ ಹೋದರೂ ಮಕ್ಕಳಿಗೆ ಅಗತ್ಯವಾದ ಆಟಿಕೆ ಸಾಮಾನು, ಕಲಿಕೆಗೆ ಬೇಕಾದ ಸಾಮಗ್ರಿ ಖರೀದಿಸುತ್ತೇನೆ. ಇದಕ್ಕೆ ಇಲಾಖೆಯವರ ಪ್ರೋತ್ಸಾಹವೂ ಇದೆ. ಮಕ್ಕಳಿಗೆ ಗಣಿತ ಚಟುವಟಿಕೆ, ಗೊಂಬೆ ಮನೆ, ಕ್ರಿಯಾತ್ಮಕ ಚಟುವಟಿಕೆ, ಹೊರಾಂಗಣ – ಒಳಾಂಗಣ ಆಟ, ಅಭಿನಯ ಗೀತೆ, ಪ್ರಾರ್ಥನೆ ಸೇರಿದಂತೆ ಶಾಲಾ ಹಂತದ ಶಿಕ್ಷಣ ನೀಡುತ್ತೇವೆ” ಎಂದು ಅಂಗನವಾಡಿ ಕಾರ್ಯಕರ್ತೆ ಸವಿತಾ ರಾಂಪೂರೆ ಈದಿನ.ಕಾಮ್ ಜೊತೆಗೆ ಮಾತನಾಡಿ ಹೇಳಿದರು.
ಅಂಗನವಾಡಿ ಶಿಕ್ಷಕಿ ಸವಿತಾ ಅವರ ಅತ್ಯುತ್ತಮ ಕೆಲಸ ಗುರುತಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಜಿಲ್ಲಾ, ತಾಲೂಕು ಮಟ್ಟದ ವಿವಿಧ ಕಾರ್ಯಕ್ರಮಗಳಲ್ಲಿ ಅವರನ್ನು ಸನ್ಮಾನಿಸಿ, ಗೌರವಿಸಿದ್ದಾರೆ.
ಅಂಗನವಾಡಿಗೆ ಮೂಲ ಸೌಕರ್ಯದ ಕೊರತೆ :
ಮಕ್ಕಳ ಕಲಿಕೆಗೆ ಪೂರಕದ ವಾತಾವರಣ ನಿರ್ಮಿಸಿರುವ ಈ ಅಂಗನವಾಡಿಯಲ್ಲಿ ಸದ್ಯ 20 ಮಕ್ಕಳು ಓದುತ್ತಿದ್ದಾರೆ. ಇಲ್ಲಿಯ ಅಂಗನವಾಡಿ ಶಿಕ್ಷಕಿ ಚಿಣ್ಣರ ಜ್ಞಾನವೃದ್ಧಿಗೆ ಬೇಕಾದ ವ್ಯವಸ್ಥೆ ಮಾಡಿದ್ದು, ಅಲ್ಲದೆ ಮಕ್ಕಳನ್ನು ತುಂಬಾ ಆಸಕ್ತಿಯಿಂದ ಕಲಿಸುತ್ತಾರೆ. ಆದರೆ ಈ ಅಂಗನವಾಡಿಗೆ ಸ್ವಂತ ಕಟ್ಟಡವೇ ಇಲ್ಲದಿರುವುದು ವಿಪರ್ಯಾಸ.
ಈ ಹಿಂದೆ ಗ್ರಾಮದ ಮಧ್ಯೆ ಭಾಗದ ಮಡಿವಾಳೆಶ್ವರ ಕಲ್ಯಾಣ ಮಂಟಪದ ಆವರಣದ ಬಳಿ ಸ್ವಂತ ಕೋಣೆಯಲ್ಲಿ ಅಂಗನವಾಡಿ ನಡೆಸುತ್ತಿದ್ದರು. ಆದರೆ ಕಟ್ಟಡ ಹಳೆಯದಾದ ಕಾರಣಕ್ಕೆ ಕಳೆದ ಮೂರು ತಿಂಗಳಿಂದ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದ ಒಂದು ಕೋಣೆಯಲ್ಲಿ ತಾತ್ಕಾಲಿಕವಾಗಿ ನಡೆಸಲಾಗುತ್ತಿದೆ.

ಮಕ್ಕಳಿಗೆ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿ, ಅಗತ್ಯ ವ್ಯವಸ್ಥೆಯಿದೆ. ಅಲ್ಲದೆ ಚಿಣ್ಣರಿಗೆ ಉತ್ಸಾಹದಿಂದ ಕಲಿಸುವ ಕಾರ್ಯಕರ್ತೆರೂ ಇದ್ದಾರೆ. ಆದರೆ ಮಕ್ಕಳ ಕಲಿಕೆಗೆ ಸುಸಜ್ಜಿತ ಕಟ್ಟಡ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಇಕ್ಕಟಾದ ಒಂದೇ ಕೊಠಡಿಯಲ್ಲಿ ಮಕ್ಕಳಿಗೆ ಪಾಠ ಮಾಡುವುದು, ಅಡುಗೆ ಮಾಡುವುದು ಅನಿವಾರ್ಯ ಎಂಬಂತಾಗಿದೆ.
“ನಮ್ಮೂರಿನ ಅಂಗನವಾಡಿ ಮಕ್ಕಳ ಕಲಿಕೆಗೆ ಹೇಳಿ ಮಾಡಿಸಿದಂತಿದೆ. ಇಲ್ಲಿನ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿಯರು ಮಕ್ಕಳನ್ನು ಸ್ವಂತ ಮಕ್ಕಳಂತೆ ನೋಡುತ್ತಾರೆ. ಇಂತಹ ಪೂರಕ ವಾತಾವರಣ ಎಲ್ಲ ಕಡೆಗೂ ಸಿಕ್ಕರೆ ಮಕ್ಕಳ ಭವಿಷ್ಯವು ಉಜ್ವಲವಾಗುತ್ತದೆ. ಇಷ್ಟೆಲ್ಲ ಆಸಕ್ತಿಯಿಂದ ಕಲಿಸಿದರೂ ಅಂಗನವಾಡಿಗೆ ಸ್ವಂತ ಕಟ್ಟಡ, ಶೌಚಾಲಯ ಮತ್ತು ಕುಡಿಯುವ ನೀರಿಲ್ಲ. ಮಾದರಿ ಅಂಗನವಾಡಿಯಾಗಿ ರೂಪಿಸಿರುವ ಇಂತಹ ಅಪರೂಪದ ಶಿಕ್ಷಕರಿಗೆ ಇಲಾಖೆ ಹಾಗೂ ಜನಪ್ರತಿನಿಧಿಗಳು ಪ್ರೋತ್ಸಾಹಿಸಿ ಅಗತ್ಯ ಸೌಕರ್ಯ ಒದಗಿಸಿದರೆ ಇನ್ನಷ್ಟು ಉತ್ಸಾಹದಿಂದ ಸೇವೆ ಸಲ್ಲಿಸಬಹುದು” ಎಂದು ಗ್ರಾಮದ ಯುವಕ ಪರಮೇಶ್ವರ ಈದಿನ.ಕಾಮ್ ಜತೆಗೆ ಮಾತನಾಡಿ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾತು ತಪ್ಪಿದ ಮೋದಿ; ಮತ್ತೆ ಎದ್ದು ನಿಂತ ಅನ್ನದಾತರು
ಈ ಕುರಿತು ಡಿಗ್ಗಿ ಗ್ರಾಮ ಪಂಚಾಯತ್ ಪಿಡಿಒ ಪ್ರಶಾಂತ ಸುತಾರ್ ಈದಿನ.ಕಾಮ್ ಜೊತೆಗೆ ಮಾತನಾಡಿ,” “ಅಂಗನವಾಡಿ ಕೇಂದ್ರ-1ರ ಕಟ್ಟಡ ಹಾಳಾದ ಕಾರಣ ಸರ್ಕಾರಿ ಶಾಲೆಯ ಒಂದು ಕೋಣೆಯಲ್ಲಿ ನಡೆಸಲು ಸ್ಥಳಾಂತರಿಸಲಾಗಿದೆ. ಹೊಸ ಕಟ್ಟಡ ನಿರ್ಮಿಸಲು ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದ ಕೂಡಲೇ ಮನರೇಗಾ ಅಡಿಯಲ್ಲಿ ಕಟ್ಟಡ ನಿರ್ಮಿಸಲಾಗುವುದು” ಎಂದು ಹೇಳಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.
Visit once your nearest Jeerga anaganwadi which is state level highlighted super Anganwadi. introduced by creative foundation