ರಾಜ್ಯಕ್ಕೆ ಜಿಎಸ್‌ಟಿ ತಾರತಮ್ಯ, ಅಭಿವೃದ್ಧಿಗೆ ಅನುದಾನದಲ್ಲಿ ವಿಳಂಬ ಮತ್ತು ಅನ್ಯಾಯ ವಿರೋಧಿಸಿ, ಸಿಪಿಐನಿಂದ ಕೇಂದ್ರ ಸರ್ಕಾರದ ವಿರುದ್ಧ ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿದರು.
ಅನುದಾನ, ತೆರಿಗೆ ಹಣ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದ ಅನ್ಯಾಯ ಖಂಡಿಸಿ ಸಂಸತ್ ಸದಸ್ಯರ ಜವಾಬ್ದಾರಿಯನ್ನು ಪ್ರಶ್ನಿಸಿ, ಜಿಎಸ್‌ಟಿ ತೆರಿಗೆ ಹಣ ಪರಿಹಾರ ಸೇರಿದಂತೆ ಹಲವು ಅನುದಾನಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಎಸಗುತ್ತಿರುವ ಅನ್ಯಾಯ ಮತ್ತು ತಾರತಮ್ಯ ನೀತಿಯನ್ನು ಖಂಡಿಸಿ ಸಿಪಿಐ ದಾವಣಗೆರೆ ಜಿಲ್ಲಾ ಮಂಡಳಿ ಕಾರ್ಯದರ್ಶಿ ಆವರಗೆರೆ ಚಂದ್ರು ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆ ಲೋಕಸಭಾ ಸದಸ್ಯ ಜಿ ಎಂ ಸಿದ್ದೇಶ್ವರ ಅವರ ಸಂಸತ್ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಸಂಸದರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು.
“ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ ಭಾರತ, ಸಂವಿಧಾನ ಆಶಯದಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸೇರಿ ದೇಶದ ಜನತೆಯ ಪರವಾಗಿ ಆಡಳಿತವನ್ನು ನಡೆಸಬೇಕಾಗಿದೆ. ದೇಶ ಮುನ್ನಡೆಸಲು ಹಾಗೂ ರಾಜ್ಯಗಳನ್ನು ಸರ್ವ ವ್ಯಾಪಿಯಾಗಿ ಸಫಲಗೊಳಿಸಲು ಭಾರತದ ಒಕ್ಕೂಟದ ವ್ಯವಸ್ಥೆಯೊಳಗಿರುವ ರಾಜ್ಯಗಳ ಮೂಲಕ ಸಂಗ್ರಹವಾಗುವ ವಸ್ತುಗಳು, ಆಸ್ತಿಗಳು, ವಾಹನಗಳು ಇತ್ಯಾದಿ ಮೇಲಿನ ತೆರಿಗೆ ಸೆಸ್ ರೂಪದಲ್ಲಿ ಸಂಗ್ರಹಿಸುವ ಹಣವನ್ನು ಕೇಂದ್ರ ಮತ್ತು ರಾಜ್ಯಗಳಿಗೆ ಹಂಚಿಕೆಯಾಗಬೇಕೆಂದು ಹಣಕಾಸು ಆಯೋಗವನ್ನು ರಚಿಸಲಾಗಿದ್ದರೂ, ಕೇಂದ್ರ ಸರ್ಕಾರ ರಾಜ್ಯಗಳಿಗೆ ತೆರಿಗೆ ವಿಷಯದಲ್ಲಿ ಅನ್ಯಾಯ ಮಾಡಿದೆ” ಎಂದು ಆರೋಪಿಸಿದರು.
ಸಹಕಾರ್ಯದರ್ಶಿ ಎಚ್ ಜಿ ಉಮೇಶ್ ಆವರಗೆರೆ ಮಾತನಾಡಿ, “ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಲ್ಲಬೇಕಾದ ತೆರಿಗೆ ಹಣದಲ್ಲಿ ತಾರತಮ್ಯ ಮಾಡುವುದನ್ನು ಕೈ ಬಿಟ್ಟು ರಾಜ್ಯಗಳ ಅಭಿವೃದ್ಧಿಗೆ ಸಹಕರಿಸಬೇಕು. ಇದನ್ನು ಸರಿಪಡಿಸಲು ಸಂಸತ್ ಸದಸ್ಯರು ಲೋಕಸಭೆಯಲ್ಲಿ ಒತ್ತಾಯಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಬಜೆಟ್ ಅಧಿವೇಶನ; ರೈತ ಮುಖಂಡರೊಂದಿಗೆ ಪೂರ್ವಭಾವಿ ಸಭೆ
ಸಿಪಿಐ ಪಕ್ಷದ ಆವರಗೆರೆ ವಾಸು, ಜಿಲ್ಲಾ ಖಜಾಂಚಿ ಆನಂದರಾಜ್, ಮುಖಂಡರುಗಳಾದ ಷಣ್ಮುಖ ಸ್ವಾಮಿ, ಸಿ ರಮೇಶ್, ಎಸ್ ಎಂ ಮೋಹಿಸ್ಸೀನ್, ಶೇಖರ ನಾಯಕ್, ಸಾವಿತ್ರಮ್ಮ, ಕೃಷ್ಣಪ್ಪ, ನಿಟ್ಟುವಳ್ಳಿ ಬಸವರಾಜ್, ವಿ ಲಕ್ಷ್ಮಣ, ನಾಗಮ್ಮ, ಭಾಗ್ಯ, ಸುರೇಶ್, ಎಚ್ ಪಿ ಉಮಾಪತಿ, ತಿಪ್ಪೇಶ್ ಸೇರಿದಂತೆ ಇತರರು ಇದ್ದರು.