ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಕಾಂಗ್ರೆಸ್ ತೊರೆದಿದ್ದು, ಇಂದು ಸ್ಪೀಕರ್ ಅವರನ್ನು ಭೇಟಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರಾದ ಬಾಬಾ ಸಿದ್ದಿಕಿ ಹಾಗೂ ಮಿಲಿಂದ್ ದಿಯೋರಾ ಅವರು ಪಕ್ಷ ತೊರೆದ ನಂತರ 65 ವರ್ಷದ ಹಿರಿಯ ನಾಯಕ ಕೂಡ ಪಕ್ಷ ತೊರೆದಿದ್ದಾರೆ.
ಇದೇ ಬೆಳವಣಿಗೆ ಹಿನ್ನೆಲೆ ಭಾನುವಾರದಂದು (ಫೆ.12) ಮಹಾರಾಷ್ಟ್ರದ ಕಾಂಗ್ರೆಸ್ ಉಸ್ತುವಾರಿ ರಮೇಶ್ ಚೆನ್ನಿತಾಲಾ ಅವರು ಚವಾಣ್ ಅವರೊಂದಿಗೆ ಚರ್ಚಿಸಿದ್ದರು.
ಊಹಾಪೋಹಗಳ ನಡುವೆ ಚವಾಣ್ ಮುಂದಿನ ನಡೆಗಳು ಏನು ಎಂಬುದರ ಬಗ್ಗೆ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಕಾದು ನೋಡುವ ತಂತ್ರ ಅನುಸರಿಸುವುದಾಗಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಯ ಚುನಾವಣಾ ಬಾಂಡ್ ಮತ್ತು ಕಾರ್ಪೊರೇಟ್ ಕಪ್ಪು ಹಣ
“ಮಾಧ್ಯಮಗಳಿಂದ ಈ ಬಗ್ಗೆ ತಿಳಿದುಕೊಂಡೆ. ಕಾಂಗ್ರೆಸ್‌ನ ಹಲವು ಒಳ್ಳೆಯ ನಾಯಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ. ಜನಸಾಮಾನ್ಯರೊಂದಿಗೆ ಸಂಪರ್ಕ ಹೊಂದಿರುವ ಈ ನಾಯಕರಿಗೆ ಕಾಂಗ್ರೆಸ್‌ನಲ್ಲಿ ಉಸಿರುಕಟ್ಟುವ ವಾತಾವರಣವಿದೆ. ದೊಡ್ಡ ಮುಖಗಳು ಬಿಜೆಪಿ ಸೇರುವ ಬಗ್ಗೆ ನನಗೆ ಆತ್ಮವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ” ಎಂದು ದೇವೇಂದ್ರ ಫಡ್ನವಿಸ್ ಹೇಳಿದರು.
ಚವಾಣ್ ಅವರು 2008 ಡಿಸೆಂಬರ್‌ನಿಂದ 2010ರ ನವೆಂಬರ್‌ವರೆಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದರು. ಇವರು ಮಹಾರಾಷ್ಟ್ರ ಕಾಂಗ್ರೆಸ್‌ನ ಅತೀ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದರು ಎಂದು ಪರಿಗಣಿಸಲಾಗಿತ್ತು. ಇವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶಂಕರ್‌ರಾವ್ ಚವಾಣ್ ಅವರ ಪುತ್ರ. ಮುಖ್ಯಮಂತ್ರಿ ಅಲ್ಲದೆ ಮಹಾರಾಷ್ಟ್ರ ಕಾಂಗ್ರೆಸ್‌ನಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿದ್ದರು.