ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಒಳಗುತ್ತಿಗೆ ಆಧಾರದ ಮೇಲೆ ಗ್ರಾಮೀಣ ಭಾಗದಲ್ಲಿ ಇರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಫೆ.15ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎನ್ಎಚ್ಎಂ ಗುತ್ತಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್ಎಚ್ಎಂ ಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ವಸಂತ್ ಕುಮಾರ್, ಕಳೆದ 7ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವವರ 11ಪ್ರಮುಖ ಬೇಡಿಕೆಗಳನ್ನು ಇಡೇರಿಸುವಂತೆ ಆಗ್ರಹಿಸಿದರು.
ಆರೋಗ್ಯ ಇಲಾಖೆಯ ಕಾರ್ಯಕ್ರಮದ ಸಂಬಂಧಪಟ್ಟ ಅಧಿಕಾರಿಗಳು, ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರಿಗೆ ಮತ್ತು ಆರೋಗ್ಯ ಸಚಿವರಿಗೆ ಹಲವು ಬಾರಿ ನಮ್ಮ ನೌಕರರ ಬೇಡಿಕೆಗಳು ಮತ್ತು ಕುಂದು ಕೊರತೆಗಳ ಬಗ್ಗೆ ಪತ್ರದ ಮೂಲಕ ಮನವರಿಕೆ ಮಾಡಿದ್ದರೂ ಇಲ್ಲಿವರೆಗೂ ಯಾವುದೇ ರೀತಿಯಾ ಪರಿಹಾರ ದೊರಕಿರುವುದಿಲ್ಲ ಎಂದು ದೂರಿದರು.
ನಮ್ಮ ಬೇಡಿಕೆಗಳನ್ನು ಫೆ.15ರೊಳಗೆ ಈಡೇರಿಸದಿದ್ದರೆ, ಫೆ.15ರಂದು ಬೆಳಿಗ್ಗೆ ಕಾಲ್ನಡಿಗೆ ಮೂಲಕ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು. ನಂತರ ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಮನವಿ ನೀಡಿ, ಜಿಲ್ಲಾಧಿಕಾರಿಗಳಿಗೂ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಗುವುದು ಎಂದರು.
ನಂತರ 15ರಂದು ತುಮಕೂರು ಸಿದ್ದಗಂಗಾ ಮಠದಲ್ಲಿ ಎಲ್ಲರೂ ಸೇರಲಿದ್ದು, ಸಿದ್ದಗಂಗಾ ಶ್ರೀಗಳು ಕಾಲ್ನಡಿಗೆ ಜಾಥಾದಲ್ಲಿ ನಮ್ಮೊಂದಿಗೆ ಹೆಜ್ಜೆ ಹಾಕುವ ಮೂಲಕ ನಮ್ಮ ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ. ಅಲ್ಲಿಂದೆ ಬೆಂಗಳೂರಿಗೆ ಕಾಲ್ನಡಿಗೆಯಲ್ಲೇ ತೆರಳಿ ಫ್ರೀಡಂಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ರಾಜ್ಯದ 6,192 ಸಮುದಾಯ ಆರೋಗ್ಯ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಮುಖ ಒತ್ತಾಯಗಳು
- ಸಿಪಿಹೆಚ್ ಯುಎಚ್‌ಸಿ ಮಾರ್ಗಸೂಚಿಗಳ ಅನ್ವಯ 6 ವರ್ಷಸೇವೆ ಪೂರೈಸಿದ ಎಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಸೇವೆಯನ್ನು ಖಾಯಂಗೊಳಿಸಬೇಕು.
- ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಇತರೆ ನೌಕರರಿಗೆ ನೀಡಿದೆ ಶೇ. 15 ವೇತನ ಹೆಚ್ಚಳವನ್ನು ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಕೂಡ ಅನ್ವಯಿಸಬೇಕು.
- ತಡೆಹಿಡಿದಿರುವ 5 % ವಾರ್ಷಿಕ ವೇತನ ಮತ್ತು ಶೇ.10 ಲಾಯಲ್ಟಿ ಬೋನಸ್ ಕೂಡಲೆ ಬಿಡುಗಡೆ ಮಾಡಬೇಕು.
- ವಿನಾಕಾರಣ ವಜಾಗೊಳಿಸಿದ ಎಲ್ಲಾ ಎಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಕೂಡಲೇ ವಾಪಸ್ ಕೆಲಸಕ್ಕೆ ತೆಗೆದುಕೊಳ್ಳಬೇಕು.
- ಮಾಸಿಕ ಪ್ರೋತ್ಸಾಹಧನ 15000 ರೂ. ಪಾವತಿಸಬೇಕು.
- ಸಮುದಾಯ ಆರೋಗ್ಯ ಅಧಿಕಾರಿಗಳ ಕುಟುಂಬಕ್ಕೆ ಆರೋಗ್ಯ ವಿಮೆ ಹಾಗೂ ಪಿಎಫ್ ಒದಗಿಸಬೇಕು.
- ಸಮುದಾಯ ಆರೋಗ್ಯ ಅಧಿಕಾರಿಗಳ ನೇಮಕಾತಿ ಷರತ್ತು ಹಾಗೂ ಕೇಂದ್ರ ಸರ್ಕಾರ 33 ಕಾರ್ಯನಿರ್ವಹಣೆ ಹಾಗೂ ಎಚ್ ಡಬ್ಲ್ಯೂ ಸಿ ಆಡಳಿತಕ್ಕೆ ಮಾತ್ರ ಸೀಮಿತಗೊಳಿಸಬೇಕು.
- ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ ಮಾಡುವ ಅವಕಾಶ ಕಲ್ಪಿಸಬೇಕು ಸೇರಿದಂತೆ 11ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ.
ಸುದ್ದಿಗೋಷ್ಠಿಯಲ್ಲಿ ದಿನೇಶ್, ನಾಗರಾಜ್, ರುದ್ರೇಶ್, ರಾಜೇಶ್ವರಿ, ಪ್ರಮೋದ್, ರಾಜೇಶ್ವರಿ, ಅಮೃತ, ಪವಿತ್ರ, ಕರಿಬಸಪ್ಪ, ಸುನೀಲ್ ಇತರೆ ಸದಸ್ಯರು ಹಾಜರಿದ್ದರು.