ಮಂಗಳೂರಿನ ಸೈಂಟ್ ಜೆರೋಸಾ ಶಾಲೆಯಲ್ಲಿ ನಡೆದ ಘಟನೆಯನ್ನು ರಾಜಕೀಯಗೊಳಿಸಿ ಅಮಾಯಕ ಮಕ್ಕಳನ್ನು ನಾಚಿಕೆಗೇಡಿತನದಿಂದ ಕೋಮುದ್ವೇಷಕ್ಕೆ ಬಳಸಿಕೊಳ್ಳುತ್ತಿರುವ ಶಾಸಕ ವೇದವ್ಯಾಸ್ ಕಾಮತ್ ಅವರ ಕ್ರಮವನ್ನು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ(SIO) ದಕ್ಷಿಣ ಕನ್ನಡ ಜಿಲ್ಲೆ ಖಂಡಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವಿದ್ಯಾರ್ಥಿ ಸಂಘಟನೆ, “ಮಂಗಳೂರಿನ ಸೈಂಟ್ ಜೆರೋಸಾ ಶಾಲೆಯ ಶಿಕ್ಷಕಿ, ಹಿಂದೂ ಧರ್ಮವನ್ನು ಅವಮಾನಿಸಿದ ಆರೋಪಗಳು ಕೇಳಿಬಂದಿದೆ. ಈ ಸಮಸ್ಯೆಯನ್ನು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಸರಿಯಾದ ಮಾರ್ಗಗಳ ಮೂಲಕ ಪರಿಹರಿಸಬೇಕಾಗಿತ್ತು. ಅದನ್ನು ಬಿಟ್ಟು ಶಾಸಕ ವೇದವ್ಯಾಸ್ ಕಾಮತ್ ಅವರು ಶಾಲೆಗೆ ಮುತ್ತಿಗೆ ಹಾಕಿ ಧರಣಿ ನಡೆಸಿರುವುದು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿದೆ” ಎಂದು ಹೇಳಿದೆ.
“ಶಾಸಕ ವೇದವ್ಯಾಸ್ ಕಾಮತ್ ಅವರು ತಮ್ಮ ರಾಜಕೀಯ ಅಜೆಂಡಾವನ್ನು ಬೇಯಿಸಿಕೊಳ್ಳಲು ಅಮಾಯಕ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳನ್ನು ಉಪಯೋಗಿಸಿರುವುದು ಆಘಾತಕಾರಿಯಾಗಿದೆ. ರಾಜಕೀಯ ಆಟದಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದು ಅನೈತಿಕ ಮಾತ್ರವಲ್ಲ ಖಂಡನೀಯ. ಶಾಲೆಗಳು ಕಲಿಕೆ ಮತ್ತು ಬೆಳವಣಿಗೆಗೆ ಸುರಕ್ಷಿತ ಸ್ಥಳವಾಗಿರಬೇಕೇ ಹೊರತು, ರಾಜಕೀಯ ಪ್ರಚಾರಕ್ಕಾಗಿ ಯುದ್ಧಭೂಮಿಗಳಲ್ಲ” ಎಂದು ಎಸ್ಐಓ ತಿಳಿಸಿದೆ.
ಇದಲ್ಲದೆ, ಕಾಮತ್ ಅವರ ವರ್ತನೆಯು ಜವಾಬ್ದಾರಿಯ ಕೊರತೆಯನ್ನು ಪ್ರದರ್ಶಿಸುತ್ತದೆ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕಡೆಗಣಿಸುತ್ತದೆ. ಶಾಸಕ ವೇದವ್ಯಾಸ್ ಕಾಮತ್ ಅವರು ತಮ್ಮ ವಿಭಜಕ ವರ್ತನೆಯನ್ನು ತಕ್ಷಣವೇ ನಿಲ್ಲಿಸಿ ಏಕತೆ ಮತ್ತು ಸೌಹಾರ್ದತೆಯ ತತ್ವಗಳನ್ನು ಎತ್ತಿ ಹಿಡಿಯಬೇಕು ಎಂದು ಎಸ್ಐಒ ಕರೆ ನೀಡಿದೆ.
ಇದನ್ನು ಓದಿದ್ದೀರಾ? ಬಜೆಟ್ ಅಧಿವೇಶನ | ಪರಶುರಾಮ ಮೂರ್ತಿ ಹಗರಣದ ನಿಜವಾದ ಕಳ್ಳರನ್ನು ಪತ್ತೆ ಹಚ್ಚುತ್ತೇವೆ: ಸಚಿವ ತಂಗಡಗಿ
ಸೂಕ್ಷ್ಮ ವಿಷಯಗಳನ್ನು ರಾಜಕೀಯಗೊಳಿಸುವುದು ಮತ್ತು ರಾಜಕೀಯ ಲಾಭಕ್ಕಾಗಿ ಮಕ್ಕಳನ್ನು ಬಳಸಿಕೊಳ್ಳುವುದು ಸ್ವೀಕಾರಾರ್ಹವಲ್ಲ ಮತ್ತು ಪ್ರಜಾಪ್ರಭುತ್ವ ಸಮಾಜದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದಿರುವ ಎಸ್ಐಓ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಶಾಸಕ ವೇದವ್ಯಾಸ್ ಕಾಮತ್ ಅವರ ಬೇಜವಾಬ್ದಾರಿ ವರ್ತನೆಯ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಕೂಡಲೇ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡಬೇಕೆಂದು ಒತ್ತಾಯಿಸಿದೆ. ಎಲ್ಲರೂ ಶಾಂತಿ ಮತ್ತು ಪರಸ್ಪರ ಗೌರವದಿಂದ ಬದುಕುವ ಸಮಾಜವನ್ನು ನಿರ್ಮಿಸಲು ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ತಿಳಿಸಿದೆ.