ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿದ್ದ ಸಿಎಎ ಮತ್ತು ಎನ್‍ಆರ್‌ಸಿ ವಿರೋಧಿಸಿ 2020ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ಬೃಹತ್ ಪ್ರತಿಭಟನೆಯ ವೇಳೆ, ‘ಪೋಡಾ ಪುಲ್ಲೇ ಪೊಲೀಸೇ’ ಹೇಳಿಕೆ ನೀಡಿದ್ದ ಆರೋಪಿಗಳನ್ನು ನ್ಯಾಯಾಲಯವು ದೋಷಮುಕ್ತಗೊಳಿಸಿದೆ.
ಮಂಗಳೂರಿನ ಕಣ್ಣೂರಿನಲ್ಲಿ ನಡೆದಿದ್ದಂತಹ ಎನ್ ಆರ್ ಸಿ, ಸಿಎಎ (NRC, CAA) ಪ್ರತಿಭಟನೆ ಸಂದರ್ಭದಲ್ಲಿ ಮಹೇಶ್ ಬಸ್ಸಿನ ಮೇಲೆ ರಾಷ್ಟ್ರೀಯ ನಾಯಕರ ಹಾಗೂ ರಾಜ್ಯ ನಾಯಕರ ವಿರುದ್ಧ ಅದೇ ರೀತಿ ಪೊಲೀಸರ ವಿರುದ್ಧ ‘ಪೋಡಾ ಪುಲ್ಲೇ ಪೊಲೀಸೇ’ ಎಂಬ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಯನ್ನು ಮಾಡಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಅದರ ವಿರುದ್ಧ ಕಂಕನಾಡಿ ಪೊಲೀಸರು ಪ್ರಕರಣವನ್ನು ದಾಖಲಿಸಿ, ಉಸ್ಮಾನ್ ಮತ್ತು ಸಿರಾಜ್ ಎಂಬುವವರ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿತ್ತು.
ಇದರ ತನಿಖೆಯನ್ನು ಕೈಗೊಂಡ ಮಂಗಳೂರಿನ ಏಳನೇ ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಧೀಶರಾದ ಎಚ್ ಜೆ ಶಿಲ್ಪಾ ಆರೋಪಿತರ ವಿರುದ್ಧ ದೋಷಾರೋಪಣವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಸಂಪೂರ್ಣ ವಿಫಲವಾಗಿದೆ ಎಂದು ಉಲ್ಲೇಖಿಸಿ ಆರೋಪಿತರನ್ನು ದೋಷ ಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ.
ಇದನ್ನು ಓದಿದ್ದೀರಾ? ರಾಜಕೀಯ ಅಜೆಂಡಾ ಬೇಯಿಸಿಕೊಳ್ಳಲು ವಿದ್ಯಾರ್ಥಿಗಳ ದುರುಪಯೋಗ ಆಘಾತಕಾರಿ: ಎಸ್‌ಐಓ ದಕ್ಷಿಣ ಕನ್ನಡ ಖಂಡನೆ
ಆರೋಪಿತರ ಪರ ಮಂಗಳೂರಿನ ಲೆಕ್ಸ್ ಜೂರಿಸ್ ಲಾ ಚೇಂಬರ್ ಇದರ ವಕೀಲರಾದಂತಹ ಓಮರ್ ಫಾರೂಕ್ ಮುಲ್ಕಿ, ಐ.ಎಂ ಇಜಾಝ್ ಅಹ್ಮದ್ ಉಳ್ಳಾಲ, ಹೈದರ್ ಅಲಿ ಕಿನ್ನಿಗೋಳಿ, ತೌಸಿಫ್ ಸಚರಿಪೇಟೆ ಇವರುಗಳು ವಾದಿಸಿದ್ದರು.