ಮದುವೆ ಮೆರವಣಿಗೆಯಲ್ಲಿ ಕುದುರೆ ಮೇಲೆ ಸಾಗುತ್ತಿದ್ದ ದಲಿತ ವರನನ್ನು ಸರ್ಣೀಯರು ಬಲವಂತವಾಗಿ ಕುದುರೆಯಿಂದ ಕೆಳಗಿಸಿರುವ ಜಾತಿ ದೌರ್ಜನ್ಯದ ಘಟನೆ ಗುಜರಾತ್‌ನ ಗಾಂಧಿನಗರ ಜಿಲ್ಲೆಯ ಚಡಸಾನಾ ಗ್ರಾಮದಲ್ಲಿ ನಡೆದಿದೆ. ಪ್ರಬಲ ಜಾತಿಯವರು ವರನಿಗೆ ಜಾತಿ ನಿಂದನೆ ಮಾಡಿ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ವರನ ಸೋದರ ಸಂಬಂಧಿ ಮತ್ತು ಸಹೋದರ ಗಾಂಧಿನಗರದ ಮಾನಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ನಾಲ್ವರ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರಿನ ಪ್ರಕಾರ, ಸೋಮವಾರ ಮಧ್ಯಾಹ್ನ ವರ ಸುಮಾರು 100 ಜನರೊಂದಿಗೆ ಮದುವೆ ಮೆರವಣಿಗೆಯಲ್ಲಿ ಕುದುರೆ ಮೇಲೆ ಸಾಗುತ್ತಿದ್ದರು. ಆಗ, ವ್ಯಕ್ತಿಯೊಬ್ಬ ಮೋಟಾರ್ ಸೈಕಲ್‌ನಲ್ಲಿ ಬಂದು ವರನಿಗೆ ಬೆದರಿಕೆ ಹಾಕಿದ್ದಾನೆ. ಬಲವಂತವಾಗಿ ವರನನ್ನು ಕುದುರೆಯಿಂದ ಕೆಳಗಿಳಿಯುವಂತೆ ಒತ್ತಾಯಿಸಿದ್ದಾನೆ. ಅಲ್ಲದೆ, ಜಾತಿ ನಿಂದನೆ ಮಾಡಿದ್ದಾನೆ.
ಈ ಸುದ್ದಿ ಓದಿದ್ದೀರಾ?: ಜಾತಿ ದೌರ್ಜನ್ಯ | ದಲಿತ ಮಹಿಳೆಯರಿಗೆ ತೆಂಗಿನ ಚಿಪ್ಪಿನಲ್ಲಿ ಚಹಾ ಕೊಟ್ಟ ಸವರ್ಣೀಯರು
“ನನ್ನ ಸಹೋದರನನ್ನು (ವರ) ಬಲವಂತವಾಗಿ ಕುದುರೆಯಿಂದ ಇಳಿಸಲಾಗಿದೆ. ನಂತರ, ನಮ್ಮ ಕುಟುಂಬ ಸದಸ್ಯರು ಆತನೊಂದಿಗೆ ಮಾತನಾಡಿ, ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದರು. ಆ ವೇಳೆ, ಇತರ ಮೂವರು ಸವರ್ಣೀಯರು ಬಂದು ನನ್ನ ಸಹೋದರನಿಗೆ ಜಾತಿ ನಿಂಧನೆ ಮಾಡಿದರು. ಅಲ್ಲದೆ, ಕುಟುಂಬದ ಸದಸ್ಯರೊಬ್ಬರಿಗೆ ಕಪಾಳಕ್ಕೆ ಹೊಡೆದಿದ್ದಾರೆ” ಎಂದು ವರನ ಸಹೋದರ ದೂರಿನಲ್ಲಿ ವಿವರಿಸಿದ್ದಾರೆ.
“ಕುದುರೆ ಸವಾರಿ ಮಾಡಲು ತಮ್ಮ ಅನುಮತಿ ಪಡೆಯಬೇಕೆಂದು ಸವರ್ಣೀಯರು ಹೇಳಿದರು. ಶಾಂತಿಯುತ ಮೆರವಣಿಗೆ ನಡೆಸಲು ನಾವು ಪ್ರಯತ್ನಿಸಿದೆವು. ಆದರೂ, ಸ್ಥಳದಿಂದ ಹೋಗುವಂತೆ ಅವರು ಕುದುರೆ ಮಾಲೀಕರು ಮತ್ತು ವಾದ್ಯದ ಸಿಬ್ಬಂದಿಗಳಿಗೆ ಬೆದರಿಕೆ ಹಾಕಿದರು” ಎಂದು ಆರೋಪಿಸಿದ್ದಾರೆ.
ಗಾಂಧಿನಗರ ಕಲೋಲ್ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಮನ್ವಾರ್ ಮಂಗಳವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ‘‘ಘಟನೆಯ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.
E Sule Makkalu Karnatakaddlli sikkiddare. Ivara Nara Nadi Kituu Nayige Eseyuttidde.