ಪಂಜಾಬ್ ಹರಿಯಾಣ ಗಡಿಯಲ್ಲಿ ಪ್ರತಿಭಟನಾನಿರತ ರೈತರನ್ನು ನಿನ್ನೆ(ಫೆ.13) ಪೊಲೀಸರು ಬಲವಂತವಾಗಿ ತಡೆದ ನಂತರ ಒಂದು ದಿನದ ಮಟ್ಟಿಗೆ ತಾತ್ಕಾಲಿಕವಾಗಿ ವಿರಾಮ ಘೋಷಿಸಲಾಗಿತ್ತು. ಇಂದು ಮತ್ತೆ ದೆಹಲಿ ಚಲೋ ಪುನರಾರಂಭಗೊಂಡಿದೆ.
ನಿನ್ನೆ ಪಂಜಾಬ್ – ಹರಿಯಾಣದ ಶಂಭೂ ಗಡಿಯಲ್ಲಿ ಪೊಲೀಸರು ನಿರ್ಮಿಸಿದ್ದ ಬ್ಯಾರಿಕೇಡ್‌ಗಳನ್ನು ಭೇದಿಸಿ ಪ್ರತಿಭಟನಾನಿರತಾ ರೈತರು ದೆಹಲಿಯತ್ತ ಸಾಗಲು ನಿರ್ಧರಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ರೈತರ ಮೇಲೆ ಬಲವಂತವಾಗಿ ಅಶ್ರುವಾಯು, ಸ್ಮೋಕ್ ಬಾಂಬ್, ಜಲ ಪಿರಂಗಿಗಳನ್ನು ಬಳಸಿದರು.
ಪೊಲೀಸರು ನಡೆಸಿದ ಅಶ್ರುವಾಯು ಶೆಲ್ ಸಿಡಿತದಲ್ಲಿ 70ಕ್ಕೂ ಹೆಚ್ಚು ಮಂದಿ ರೈತರು ಗಾಯಗೊಂಡಿದ್ದಾರೆ. ಅಲ್ಲದೆ ಅಂಬಾಲಾ ಗಡಿಯಲ್ಲಿ ಕೆಲ ರೈತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಈ ನಡುವೆ ತಾತ್ಕಾಲಿಕವಾಗಿ ಪ್ರತಿಭಟನಾ ಮೆರವಣಿಗೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ರೈತರು ಮಂಗಳವಾರ ಸಂಜೆ ಪ್ರಕಟಿಸಿದರು.
ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನಿನ ಖಾತರಿ’ ಒದಗಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶದ 200ಕ್ಕೂ ಹೆಚ್ಚು ರೈತ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಅಧಿಕಾರಕ್ಕೆ ಬಂದರೆ ಎಂಎಸ್‌ಪಿ ಜಾರಿ: ಕಾಂಗ್ರೆಸ್
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನಿನ ಖಾತರಿ ಸೇರಿದಂತೆ ಸ್ವಾಮಿನಾಥನ್ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವುದಾಗಿ ಒಕ್ಕೂಟದ ಪ್ರಮುಖ ಪಕ್ಷವಾದ ಕಾಂಗ್ರೆಸ್ ತಿಳಿಸಿದೆ.
ಈ ಬಗ್ಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಪಕ್ಷ ಕೈಗೊಂಡಿರುವ ಈ ನಿರ್ಧಾರದಿಂದ 15 ಕೋಟಿ ರೈತ ಕುಟುಂಬಗಳ ಅಭಿವೃದ್ಧಿಯಾಗಿ, ಅವರ ಜೀವನವೇ ಬದಲಾಗುವುದು. ರೈತರಿಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್ ನೀಡುವ ಮೊದಲ ಗ್ಯಾರಂಟಿ ಇದು. ‘ಪ್ರತಿಭಟನೆ ನಡೆಸುತ್ತಿರುವ ರೈತ ರೊಂದಿಗೆ ನೇರವಾಗಿ ಮಾತುಕತೆ ನಡೆಸಿ, ಅವರಿಗೆ ನ್ಯಾಯ ಒದಗಿಸಿ ಕೊಡಬೇಕು’ ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
किसान भाइयों आज ऐतिहासिक दिन है!
कांग्रेस ने हर किसान को फसल पर स्वामीनाथन कमीशन के अनुसार MSP की कानूनी गारंटी देने का फैसला लिया है।
यह कदम 15 करोड़ किसान परिवारों की समृद्धि सुनिश्चित कर उनका जीवन बदल देगा।
न्याय के पथ पर यह कांग्रेस की पहली गारंटी है।#KisaanNYAYGuarantee
— Rahul Gandhi (@RahulGandhi) February 13, 2024
ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದು, ‘ತಾವು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಪಡೆಯುವುದು ರೈತರ ಹಕ್ಕಾಗಿದೆ. ರೈತರು ಗೌರವಯುತವಾದ ಆದಾಯ ಬಯಸುತ್ತಾರೆಯೇ ಹೊರತು, ಅಶ್ರುವಾಯು ಪ್ರಯೋಗ, ಗುಂಡೇಟು, ಹಿಂಸಾಚಾರವನ್ನಲ್ಲ. ನ್ಯಾಯಯುತ ಬೇಡಿಕೆಗಳಿಗೆ ಹೋರಾಡುತ್ತಿರುವ ರೈತರೊಂದಿಗೆ ಕಾಂಗ್ರೆಸ್ ನಿಲ್ಲುತ್ತದೆ’ ಎಂದೂ ಹೇಳಿದ್ದಾರೆ.
ಛತ್ತೀಸಗಢದ ಅಂಬಿಕಾಪುರದಲ್ಲಿ ಭಾರತ ಜೋಡೊ ನ್ಯಾಯ ಯಾತ್ರೆ ಅಂಗವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಮುಂಬರುವ ಲೋಕಸಭಾ ಚುನಾವಣೆಗಳ ನಂತರ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಎಂಎಸ್‌ಪಿಗೆ ಕಾನೂನು ಖಾತ್ರಿ ನೀಡಲಿದೆ’ ಎಂದಿದ್ದಾರೆ.