ಇತ್ತೀಚಿಗಷ್ಟೆ ಮರಣೋತ್ತರ ಭಾರತ ರತ್ನ ಪ್ರಶಸ್ತಿಗೆ ಭಾಜನರಾದ ಕೃಷಿ ಕ್ರಾಂತಿಯ ಹರಿಕಾರ ಎಂ ಎಸ್ ಸ್ವಾಮಿನಾಥನ್ ಪುತ್ರಿ ರೈತರ ಪ್ರತಿಭಟನೆಗೆ ಸರ್ಕಾರ ನಡೆಸಿಕೊಳ್ಳುವ ರೀತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅರ್ಥಶಾಸ್ತ್ರಜ್ಞೆಯು ಆಗಿರುವ ಮಧುರಾ ಸ್ವಾಮಿನಾಥನ್, ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಅಪರಾಧಿಗಳಂತೆ ನಡೆಸಿಕೊಳ್ಳಬೇಡಿ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
“ಪಂಜಾಬಿನ ರೈತರು ಇಂದು ದೆಹಲಿಗೆ ಮೆರವಣಿಗೆ ಹೊರಟಿದ್ದಾರೆ. ಪತ್ರಿಕೆಗಳ ವರದಿಯಂತೆ ಹರಿಯಾಣದಲ್ಲಿ ಜೈಲುಗಳನ್ನು ಸಿದ್ದಪಡಿಸಲಾಗುತ್ತಿದೆ.ಬ್ಯಾರಿಕೇಡ್‌ಗಳಿವೆ, ರೈತರನ್ನು ತಡೆಯಲು ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ” ಎಂದು ತಿಳಿಸಿದರು.
“ಅವರು ರೈತರು, ಅಪರಾಧಿಗಳಲ್ಲ. ಮುಂಚೂಣಿಯಲ್ಲಿರುವ ಭಾರತದ ಎಲ್ಲ ವಿಜ್ಞಾನಿಗಳಿಗೆ ನಾನು ಮನವಿ ಮಾಡುವುದೇನೆಂದರೆ ನಾವು ಅನ್ನದಾತರೊಂದಿಗೆ ಮಾತನಾಡಬೇಕು. ನಾವು ಅವರನ್ನು ಅಪರಾಧಿಗಳಂತೆ ಪರಿಗಣಿಸಬಾರದು. ನಾವು ಇದಕ್ಕೆ ಪರಿಹಾರ ಹುಡುಕಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಶ್ನಿಸುವವರಿಗೆ ನೈತಿಕತೆ ಇದ್ದರೆ ಪ್ರಶ್ನೆಗೆ ಬೆಲೆ, ಅಲ್ಲವೇ?
“ದಯವಿಟ್ಟು ಇದು ನನ್ನ ಮನವಿ. ನಾವು ಎಂ ಎಸ್ ಸ್ವಾಮಿನಾಥನ್ ಅವರನ್ನು ಗೌರವಿಸಬೇಕೆಂದರೆ ಭವಿಷ್ಯತ್ತಿನಲ್ಲಿ ಯಾವುದಾದರೂ ಕಾರ್ಯತಂತ್ರದ ಯೋಜನೆಗಳನ್ನು ರೂಪಿಸಿದರೂ ನಮ್ಮೊಂದಿಗೆ ರೈತರನ್ನು ಕರೆದುಕೊಂಡು ಹೋಗಬೇಕು” ಎಂದು ಮಧುರಾ ಸ್ವಾಮಿನಾಥನ್ ಹೇಳಿದರು.
ಸಾಮಾನ್ಯ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಸೇರಿದಂತೆ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಪಂಜಾಬ್,ಹರಿಯಾಣ ಹಾಗೂ ಉತ್ತರ ಪ್ರದೇಶದ ಒಂದು ಲಕ್ಷಕ್ಕೂ ಅಧಿಕ ರೈತರು (ಫೆ.13ರಿಂದ) ದೆಹಲಿ ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ನಿನ್ನೆ ಪಂಜಾಬ್ – ಹರಿಯಾಣ ಗಡಿಯಲ್ಲಿ ಮೆರವಣಿಗೆ ಸಾಗುವಾಗ ರೈತರು ಪೊಲೀಸರು ನಿರ್ಮಿಸಿದ್ದ ಬ್ಯಾರಿಕೇಡ್‌ಗಳನ್ನು ಮುರಿಯಲು ನಿರ್ಧರಿಸಿದರು. ಈ ಸಂದರ್ಭದಲ್ಲಿ ಪೊಲೀಸರು ರೈತರ ಮೇಲೆ ಅಶ್ರುವಾಯು ಶೆಲ್, ಸ್ಮೋಕ್ ಬಾಂಬ್, ರಬ್ಬರ್ ಬುಲೆಟ್‌ಗಳು, ಜಲ ಪಿರಂಗಿಗಳನ್ನು ಬಳಸಿದರು. ಪೊಲೀಸರ ದಾಳಿಯಿಂದಾಗಿ ಹಲವು ರೈತರು ಗಾಯಗೊಂಡರು. ಕೆಲವರನ್ನು ಬಂಧಿಸಲಾಯಿತು.
ರೈತರನ್ನು ದೆಹಲಿಯತ್ತ ಬರುವುದನ್ನು ತಡೆಯುವ ಸಲುವಾಗಿಯೆ ಮುಳ್ಳುತಂತ್ತಿಗಳ ಬ್ಯಾರಿಕೇಡ್‌ಗಳು, ಚೂಪಾದ ಬಾಣದ ರೀತಿಯ ಸಲಾಕೆಗಳು, ಸಿಮೆಂಟ್ ತಡೆಗೋಡೆ ಮುಂತಾದ ಕ್ರಮವನ್ನು ಪೊಲೀಸರು ಅಳವಡಿಸಿದ್ದಾರೆ.