ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಬಾಲಕೃಷ್ಣರವರು ಮತದಾರರಿಗೆ ನೀಡಿದ ಗಿಫ್ಟ್ ಕಾರ್ಡ್‌ಗಳನ್ನು ನಮಗೆ ನೀಡಿದರೆ, ಜೆಡಿಎಸ್ ಮತ್ತು ಬಿಜೆಪಿ ವತಿಯಿಂದ ಗಿಫ್ಟ್ ನಾವೇ ನೀಡಲು ಸಿದ್ಧರಿದ್ದೇವೆ ಎಂದು ಮಾಜಿ ಶಾಸಕ ಎ ಮಂಜುನಾಥ್ ಹೇಳಿದರು.
ಮಾಗಡಿ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಜೆಡಿಎಸ್, ಬಿಜೆಪಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಬಾಲಕೃಷ್ಣರವರು ಮತದಾರರಿಗೆ ಗಿಫ್ಟ್ ಕಾರ್ಡುಗಳನ್ನು ನೀಡಿ ಮತವನ್ನು ಪಡೆದು ಜಯಶೀಲರಾಗಿದ್ದಾರೆ. ನಂತರ ಕಾರ್ಡ್‌ಗಳಿಗೆ ಯಾವುದೇ ರೀತಿಯ ಗಿಫ್ಟ್‌ಗಳನ್ನು ನೀಡದೆ ಮತದಾರರಿಗೆ ವಂಚಿಸಿದ್ದಾರೆ. ಮತದಾನ ನಡೆದು ಇಲ್ಲಿಯವರೆಗೂ ಯಾವುದೇ ರೀತಿಯ ಗಿಫ್ಟ್‌ಗಳನ್ನು ನೀಡಿಲ್ಲ ಎಂದು ಆರೋಪಿಸಿದರು.
ಈಗ ನಮ್ಮ ಕಾರ್ಯಕರ್ತರಿಗೆ ತಿಳಿಸಿ ಗಿಫ್ಟ್ ಕಾರ್ಡ್‌ಗಳನ್ನು ನಮಗೆ ನೀಡಿ ತಮ್ಮ ಹೆಸರು ಮತ್ತು ಫೋನ್ ನಂಬರ್ ಬರೆಸಿದರೆ ನಾವೇ ಗಿಫ್ಟ್‌ಗಳನ್ನು ತಮಗೆ ಕೊಡುತ್ತೇವೆ ಎಂದರು.
10ರಿಂದ 15 ಸಾವಿರ ಬೆಲೆಬಾಳುವ ಗಿಫ್ಟ್ ಗಳನ್ನು ಕೊಡುತ್ತೇವೆ ಎಂದು ಶಾಸಕ ಬಾಲಕೃಷ್ಣ ಮತದಾರರಿಗೆ ವಂಚಿಸಿದ್ದರು. ಈಗ ಗಿಫ್ಟ್ ಕಾರ್ಡ್ ಗಳು ಹಾಳಾಗುತ್ತಿದ್ದು ಕಾರ್ಡ್ ಒಳಗೆ ಇರುವ ಬಾರ್ ಕೋಡ್ ಗಳ ಅವಧಿ ಮುಗಿಯುತ್ತಿರುವುದರಿಂದ ನಾವೇ ಗಿಫ್ಟ್ ಕೊಡಲು ಮುಂದಾಗಿದ್ದೇವೆ ಎಂದರು.
ಗಿಫ್ಟ್ ಕಾರ್ಡ್ ಗಳ ಮೂಲಕ ಗೆದ್ದಿರುವ ಅಭ್ಯರ್ಥಿಯನ್ನು ಮತ್ತೇ ಈ ಗಿಫ್ಟ್ ಕಾರ್ಡ್ ಮೂಲಕವೇ ಸೋಲಿಸುವ ಗುರಿಯನ್ನು ಇಟ್ಟುಕೊಂಡಿದ್ದು, ಜೆಡಿಎಸ್ ಮತ್ತು ಬಿಜೆಪಿ ಒಗ್ಗೂಡಿ ಮುಂಬರುವ ಚುನಾವಣೆಯನ್ನು ಎದುರಿಸುತ್ತೇವೆ ಎಂಬುದು ಗೊತ್ತಿದೆ. ಚುನಾವಣೆ ಬರಲಿ ನಮ್ಮ ಹತ್ತಿರವು ಸಾಕಷ್ಟು ಬಾಣಗಳಿದ್ದು ಎಲ್ಲದಕ್ಕೂ ಸರಿಯಾದ ಉತ್ತರ ಕೊಡುತ್ತೇವೆ ಎಂದು ಎ.ಮಂಜುನಾಥ್ ತಿಳಿಸಿದರು.
ಇದೆ ವೇಳೆ ಬಿಜೆಪಿ ಯುವ ಮುಖಂಡ ಪ್ರಸಾದ್ ಗೌಡ, ರಾಜೇಶ್, ಬಾಲಾಜಿ, ಹನುಮಂತೇಗೌಡ, ಜೆಡಿಎಸ್ ಮುಖಂಡರಾದ ಗುಡ್ಡೆಗೌಡ, ನಯಾಜ್, ಶಿವರಾಮ, ಪುರಸಭಾ ಸದಸ್ಯ ಕೆ.ವಿ.ಬಾಲು, ಎಂ.ಎನ್. ಮಂಜು, ಕೆಂಪೇಗೌಡ, ಕೆಂಪಸಾಗರ ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.