ಕರ್ನಾಟಕ ವಿಧಾನ ಪರಿಷತ್‌ಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಫೆಬ್ರವರಿ 16ರಂದು ಉಪಚುನಾವಣೆ ನಡೆಯಲಿದೆ. ಹೀಗಾಗಿ, ಬುಧವಾರ (ಫೆ.14) ಸಂಜೆ ನಾಲ್ಕು ಗಂಟೆಯಿಂದ ಫೆ.16ರ ಮಧ್ಯರಾತ್ರಿರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತದಾನ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಎನ್ ಶಿವಶಂಕರ ಆದೇಶಿಸಿದ್ದಾರೆ.
ಉಪಚುನಾವಂಣೆ ಸಂಬಂಧ ದೇವನಹಳ್ಳಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಂತಿಮ ಸಭೆ ನಡೆಸಿ ಅವರು ಮಾತನಾಡಿದರು. “ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮತದಾನ ನಡೆಯುವ ಆರು ಮತದಾನ ಕೇಂದ್ರಗಳ ವ್ಯಾಪ್ತಿಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಬುಧವಾರ ಸಂಜೆ 4 ಗಂಟೆಯಿಂದ ನಿಷೇಧಾಜ್ಞೆ ಜಾರಿಯಾಗಲಿದೆ” ಎಂದರು.
“ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲಿ ಮತದಾರರಿಗೆ ಆಮಿಷವೊಡ್ಡುವುದು, ಬೆದರಿಸುವುದು ಹಾಗೂ ಮತಗಟ್ಟೆಗಳ ಹತ್ತಿರ ಪ್ರಚಾರ ಮಾಡುವಂತಿಲ್ಲ. ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮತದಾರರನ್ನು ಸಾರಿಗೆ ವ್ಯವಸ್ಥೆಗಳ ಮೂಲಕ ಮತಗಟ್ಟೆಗಳಿಗೆ ಕರೆತರುವಂತಿಲ್ಲ. ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಮತಗಟ್ಟೆಗಳ ಬಳಿ ನಿಷೇಧಾಜ್ಞೆ ವಿಧಿಸಲಾಗಿದೆ” ಎಂದು ಹೇಳಿದರು.
ಸಭೆಯಲ್ಲಿಅಪರ ಜಿಲ್ಲಾಧಿಕಾರಿ ಅಮರೇಶ್ ಎಚ್ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಇದ್ದರು.