ಚುನಾವಣಾ ಬಾಂಡ್‌ಗಳ ಬಗ್ಗೆ ಸುಪ್ರೀಂ ಕೋರ್ಟ್ ಸರ್ವಾನುಮತದ ತೀರ್ಪು ನೀಡಿದ್ದು, ರಾಜಕೀಯ ಪಕ್ಷಕ್ಕೆ ನೀಡುವ ಅನಾಮಧೇಯ ಕಾರ್ಪೋರೇಟ್ ಕೊಡುಗೆಗಳು ಸಂವಿಧಾನದ 19(1)(ಎ) ವಿಧಿಯ ಮಾಹಿತಿ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧಿಶರ ಪೀಠ ಐಟಿ ಕಾಯ್ದೆ ಹಾಗೂ ಜನಪ್ರತಿನಿಧಿ ಕಾಯ್ದೆಯ ತಿದ್ದುಪಡಿಗಳನ್ನು ರದ್ದುಗೊಳಿಸಿದೆ. ಚುನಾವಣಾ ಬಾಂಡ್‌ಗಳ ಮೂಲಕ ಕೊಡುಗೆ ನೀಡಲು ಇದನ್ನು ಜಾರಿಗೊಳಿಸಲಾಗಿರುವುದನ್ನು ಅಸಂವಿಧಾನಿಕ ಎಂದು ಕೋರ್ಟ್ ಹೇಳಿದೆ.
ಕಪ್ಪು ಹಣ ನಿಯಂತ್ರಣಕ್ಕೆ ಚುನಾವಣಾ ಬಾಂಡ್ ಪ್ರಮುಖ ಆಯ್ಕೆಯಲ್ಲ. ಇದು ಅಸಂವಿಧಾನಿಕವಾಗಿದ್ದು, ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತದೆ. ಮುಖ್ಯವಾಹಿನಿಯಲ್ಲಿ ಪ್ರತಿನಿಧಿಸದ ಪಕ್ಷಗಳಿಗೆ ಕೊಡುಗೆ ನೀಡಲಾಗುತ್ತದೆ. ಕೊಡುಗೆಯು ಪಕ್ಷಗಳಿಗೆ ನೀಡುವ ಕೊಂಡು ತೆಗೆದುಕೊಳ್ಳುವ ನಿಯಮದಂತೆ ತೋರಿಸುವುದಿಲ್ಲ.ಬಾಂಡ್ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಟ್ಟವರ ಹೆಸರು ಸಾರ್ವತ್ರಿಕಗೊಳ್ಳುವುದಿಲ್ಲ. ಆದ ಕಾರಣ ಈ ರೀತಿ ದುರುಪಯೋಗವಾಗುವುದಕ್ಕೆ ಸಂವಿಧಾನಿಕವು ಕಣ್ಣುಮುಚ್ಚಿ ಕೂರುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
2018ರಲ್ಲಿ ಜಾರಿಗೆ, 16 ಸಾವಿರ ಕೋಟಿ ಸಂಗ್ರಹ
ಯಾವುದೇ ಸಾರ್ವಜನಿಕರು ಅಥವಾ ಕಂಪನಿಗಳು ಅನಾಮಧೇಯರಾಗಿದ್ದುಕೊಂಡು ರಾಜಕೀಯ ಪಕ್ಷಗಳಿಗೆ ಬಾಂಡ್ ಮೂಲಕ ದೇಣಿಗೆ ನೀಡುವುದನ್ನು ಚುನಾವಣಾ ಬಾಂಡ್ ಎನ್ನಲಾಗುತ್ತದೆ. ಕೇಂದ್ರ ಸರ್ಕಾರ 2018ರಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ಜಾರಿಗೆ ತಂದಿತ್ತು.
ಈ ಬಾಂಡ್‌ಗಳನ್ನು ವ್ಯಕ್ತಿಗಳು ಅಥವಾ ಕಂಪನಿಗಳು ಖರೀದಿಸಬಹುದು ಮತ್ತು ರಾಜಕೀಯ ಪಕ್ಷಗಳಿಗೆ ಹಣವನ್ನು
ನೀಡುವ ಉದ್ದೇಶಕ್ಕಾಗಿ ಪ್ರತ್ಯೇಕವಾಗಿ ನೀಡಲಾಗುತ್ತದೆ. ಈ ಬಾಂಡ್‌ಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ವಿತರಿಸುತ್ತದೆ ಮತ್ತು ಆರಂಭಿಕ ಬೆಲೆ 1,000 ರೂ. ಗಳಿಂದ 10,000, 1 ಲಕ್ಷ, 10 ಲಕ್ಷ ಮತ್ತು 1
ಕೋಟಿರೂ.ಗಳ ಗುಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಎಸ್‌ಬಿಐ ಬ್ಯಾಂಕ್ನಲ್ಲಿ ಮಾತ್ರವೇ ಈ ಬಾಂಡ್ ವಿತರಣೆಗೆ ಅವಕಾಶ ನೀಡಲಾಗಿತ್ತು.
ಎಸ್ಬಿಐನಲ್ಲಿ ಇಲ್ಲಿಯವರೆಗೆ ಸಂಗ್ರಹವಾದ ಎಲೆಕ್ಟೋರಲ್ ಬಾಂಡ್ ಮೊತ್ತ 16 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿದೆ. 2018ರಿಂದ ಇಲ್ಲಿಯವರೆಗೆ 30 ಕಂತುಗಳಲ್ಲಿ ಎಸ್‌ಬಿಐ ಚುನಾವಣಾ ಬಾಂಡ್‌ಗಳನ್ನು ವಿತರಿಸಿದೆ. ಈವರೆಗೆ 16,518 ಕೋಟಿ ರೂ ಮೌಲ್ಯದ ಬಾಂಡ್‌ಗಳನ್ನು ಖರೀದಿಸಲಾಗಿದೆ. ಅಂದರೆ ಇಷ್ಟು ಮೊತ್ತದ ದೇಣಿಗೆಗಳು ರಾಜಕೀಯ ಪಕ್ಷಗಳಿಗೆ ಸಿಕ್ಕಿವೆ. ಈ ಅಂಕಿ ಅಂಶ ವಿವರವನ್ನು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಇತ್ತೀಚೆಗೆ ಲೋಕಸಭೆಯಲ್ಲಿ ನೀಡಿದ್ದರು.
ಸುಪ್ರೀಂನಿಂದ ಸಂಪೂರ್ಣ ನಿಷೇಧ : ಪ್ರಶಾಂತ್ ಭೂಷಣ್
ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ ಎಂದು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಆದಾಯ ತೆರಿಗೆ, ಕಂಪನಿ ಕಾಯ್ದೆಗಳು ಹಾಗೂ ಇತರೆ ಕಾಯ್ದೆಗಳಲ್ಲೂ ಚುನಾವಣಾ ಬಾಂಡ್‌ನ ನಿಯಮಗಳನ್ನು ಜಾರಿಗೊಳಿಸಲಾಗುವ ನಿಬಂಧನೆಗಳಲ್ಲೂ ರದ್ದುಗೊಳಿಸಲಾಗುತ್ತದೆ. ರಾಜಕೀಯ ಪಕ್ಷಗಳಿಗೆ ನೀಡುವ ಹಣವನ್ನು ಸಾರ್ವಜನಿಕರು ತಿಳಿದುಕೊಳ್ಳುವ ಮೂಲಭೂತ ಹಕ್ಕುಗಳನ್ನೆ ಇದು ಉಲ್ಲಂಘಿಸುತ್ತದೆ. ಕಂಪನಿಗಳು ರಾಜಕೀಯ ಪಕ್ಷಗಳಿಗೆ ಅನಿಯಮಿತವಾಗಿ ರಾಜಕೀಯ ನೆರವು ನೀಡುವುದನ್ನು ಅನುಮತಿಸಿದ ತಿದ್ದುಪಡಿಯನ್ನು ಕೋರ್ಟ್ ತೆರವುಗೊಳಿಸಿದೆ” ಎಂದು ತಿಳಿಸಿದರು.
ಮೋದಿಯ ಭ್ರಷ್ಟ ನೀತಿಯೆಂದು ಸಾಬೀತಾಗಿದೆ : ರಾಹುಲ್ ಗಾಂಧಿ
ಚುನಾವಣಾ ಬಾಂಡ್‌ಅನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರ ಭ್ರಷ್ಟ ನೀತಿಗಳ ಮತ್ತೊಂದು ಪುರಾವೆ ನಿಮ್ಮ ಮುಂದಿದೆ. ಬಿಜೆಪಿಯು ಚುನಾವಣಾ ಬಾಂಡ್‌ಅನ್ನು ಲಂಚ ಹಾಗೂ ವಸೂಲಿ ಮಾಡುವ ಮಾಧ್ಯಮವನ್ನಾಗಿ ಮಾಡಿಕೊಂಡಿತ್ತು. ಇಂದು ಈ ವಿಷಯ ಸಮಾಪ್ತಿಗೊಂಡಿದೆ ಎಂದು ತಿಳಿಸಿದ್ದಾರೆ.
ಮೋದಿ ರಾಜೀನಾಮೆ ನೀಡಬೇಕು: ಸುಬ್ರಮಣಿಯಂ ಸ್ವಾಮಿ
ಹುಚ್ಚು ಯೋಜನೆಯನ್ನು ಜಾರಿಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು ಎಂದು ರಾಜ್ಯಸಭೆಯ ಮಾಜಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಅವರು, ಚುನಾವಣಾ ಬಾಂಡ್‌ಗಳು ಮೋದಿ ಅವರ ಹುಚ್ಚು ಕಲ್ಪನೆ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಬಿಜೆಪಿಯ ನೀತಿಗೆ ನೋವುಂಟು ಮಾಡುವ ದೊಡ್ಡ ಹಗರಣವಾಗಿದ್ದರಿಂದ ಮೋದಿ ಅವರು ರಾಜೀನಾಮೆ ಕೇಳಬೇಕು ಎಂದು ನಾನು ಭಾವಿಸುತ್ತೇನೆ. ಪಕ್ಷದ ಹಿತದೃಷ್ಟಿಯಿಂದ ಮೋದಿ ರಾಜೀನಾಮೆ ನೀಡಬೇಕು ಎಂದಿದ್ದಾರೆ.