ಫೆ.27, 28ರಂದು ರಾಜ್ಯ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಹಾಗೂ ಪ್ರಜಾಸ್ನೇಹಿ ಕಾರ್ಯಾಗಾರ ಫೆಬ್ರವರಿ 27ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಹಾಗಾಗಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು ನೌಕರರಿಗೆ ಫೆ.27ರಂದು ರಜೆ ನೀಡಿದರೆ, ಇತರೆ ಬೇರೆ–ಬೇರೆ ಜಿಲ್ಲೆಗಳಿಂದ ಬರುವ ನೌಕರರಿಗೆ ಎರಡು ದಿನ – ಫೆ.27 ಮತ್ತು 28 – ರಜೆ ನೀಡಲಾಗಿದೆ.
ಫೆ. 27ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ನೌಕರರು ಭಾಗಿಯಾಗುವ ನಿರೀಕ್ಷೆಯಿದೆ. ಈ ಸಮ್ಮೇಳನದಲ್ಲಿ ನೌಕರರು ಭಾಗವಹಿಸಲು ಅನುಕೂಲವಾಗಲು ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲಾಗಿದೆ.
ಸಮ್ಮೇಳನದಲ್ಲಿ ಭಾಗವಹಿಸುವ ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತಗೊಳಿಸಿ ಬೆಂಗಳೂರು ನಗರ ಜಿಲ್ಲೆಯ ಅಧಿಕಾರಿ, ನೌಕರರಿಗೆ ಫೆ. 27ರಂದು ಒಂದು ದಿನ ಹಾಗೂ ಇತರೆ ಜಿಲ್ಲೆಗಳ ಅಧಿಕಾರಿ, ನೌಕರರಿಗೆ ಪ್ರಯಾಣ ದಿನ ಸೇರಿದಂತೆ ಫೆ.27 ಮತ್ತು 28ರಂದು 2 ದಿನಗಳ ವಿಶೇಷ ಸಾಂದರ್ಭಿಕ ರಜೆಯನ್ನು ಷರತ್ತುಗಳನ್ವಯ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಪರಿಷತ್ ಉಪಚುನಾವಣೆ | ಅರ್ಹ ಶಿಕ್ಷಕ ಮತದಾರರಿಗೆ ಫೆ.16 ರಂದು ವಿಶೇಷ ಸಾಂದರ್ಭಿಕ ರಜೆ
ಈ ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವ ಸರ್ಕಾರಿ ನೌಕರರು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ನಂತರ ಸಮ್ಮೇಳನದಲ್ಲಿ ಭಾಗವಹಿಸಿದ ಬಗ್ಗೆ ಅಧಿಕೃತ ಹಾಜರಾತಿ ಪತ್ರವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಅಥವಾ ಅವರಿಂದ ನಾಮನಿರ್ದೇಶನ ಹೊಂದಿದ ಅಧಿಕಾರಿಗಳಿಂದ ಪಡೆದು ಒದಗಿಸಬೇಕು. ಈ ಆಧಾರದ ಮೇಲೆ ಸಂಬಂಧಪಟ್ಟ ಅಧಿಕಾರಿಗಳು, ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡತಕ್ಕದ್ದು ಎಂದು ಸೂಚನೆ ನೀಡಲಾಗಿದೆ.