ಸಮಾಜದ ಸಮಾನತೆಗಾಗಿ ನಿರಂತರ ಹೋರಾಡುತ್ತಿರುವ, ಶೋಷಿತ ವರ್ಗಕ್ಕೆ ಬೆನ್ನೆಲುಬಾಗಿ ನಿಂತಿರುವ ಪ್ರೊ. ಬಿ ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ (ದಸಂಸ) 50 ವರ್ಷದ ಸುವರ್ಣ ಮಹೋತ್ಸವ ಸಂಭ್ರಮ ಆಚರಿಸಿಕೊಳ್ಳುತ್ತಿದೆ. ಫೆ.18ರಂದು ತುಮಕೂರಿನಲ್ಲಿ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ ಎಲ್ಲ ದಲಿತ ಮುಖಂಡರು ಬಣಗಳನ್ನು ಬದಿಗೊತ್ತಿ ಭಾಗಿಯಾಗಬೇಕು ಎಂಧು ದಸಂಸ ತಾಲೂಕು ಸಂಚಾಲಕ ಚೇಳೂರು ಶಿವನಂಜಪ್ಪ ಮನವಿ ಮಾಡಿದ್ದಾರೆ.
ಗುಬ್ಬಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಫೆ.18ರಂದು ತುಮಕೂರಿನ ಎಂಪ್ರೆಸ್ ಆಡಿಟೋರಿಯಂನಲ್ಲಿ ಸುವರ್ಣ ಮಹೋತ್ಸವ ಸಮಾರಂಭ ನಡೆಯಲಿದೆ. ಸಮಾರಂಭವನ್ನು ಸಹಕಾರ ಸಚಿವ ಕೆ.ಎನ್ ರಾಜಣ್ಣ ಉದ್ಘಾಟಿಸಲಿದ್ದಾರೆ. ದಸಂಸ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ‘ದಲಿತ ಚಳವಳಿಯ ತಾತ್ವಿಕ ನೆಲೆಗಳು’ ಎಂಬ ಪುಸ್ತಕವನ್ನು ದಸಂಸ ರಾಜ್ಯ ಸಂಚಾಲಕ ಎಂ ಗುರುಮೂರ್ತಿ ಬಿಡುಗಡೆಗೊಳಿಸಲಿದ್ದಾರೆ” ಎಂದು ತಿಳಿಸಿದರು.
“ರಾಜ್ಯದ ನಾನಾ ಭಾಗಗಳಲ್ಲಿ ದಲಿತರು ಅನುಭವಿಸಿದ ದೌರ್ಜನ್ಯ ಪ್ರಶ್ನಿಸುವ ವಿದ್ಯಮಾನವನ್ನು ಒಂದಡೆ ಸೇರಿಸಲು ಒಂದು ಸಾಂಸ್ಥಿಕ ವೇದಿಕೆ ಸೃಷ್ಟಿಸಿ ದಲಿತ ಸಂಘರ್ಷ ಸಮಿತಿ ರಚಿಸಿ ಅಂಬೇಡ್ಕರ ಹೇಳಿದ ಶಿಕ್ಷಣ, ಸಂಘಟನೆ ಮತ್ತು ಹೋರಾಟ ತತ್ವ ಅಳವಡಿಕೊಂಡು ಅನೇಕ ಹೋರಾಟದಲ್ಲಿ ನ್ಯಾಯ ದೊರಕಿಸಿ ಕೊಡುವ ಕೆಲಸ ಪ್ರೊ.ಬಿ.ಕೃಷ್ಣಪ್ಪ ಹಾಗೂ ಎನ್.ಗಿರಿಯಪ್ಪ ನಡೆಸಿದ್ದರು. ಇದರ ಫಲ ಇಂದು ದಲಿತರಿಗೆ ಹೋರಾಟದ ಶಕ್ತಿ ಬಂದಿದೆ. ಈ ಹಿಂದೆ ನಡೆದ ಬೆತ್ತಲೆ ಸೇವೆ, ಪಿಟಿಸಿಎಲ್ ಕಾಯಿದೆ, ಉಳುವವನೇ ಭೂಮಿ ಒಡೆಯ ಕಾನೂನು ಹಾಗೂ ದಲಿತ ಮಕ್ಕಳ ಶಿಕ್ಷಣಕ್ಕೆ ವಸತಿ ಶಾಲೆ ತೆರೆದ ಕೀರ್ತಿ ದಸಂಸ ಗೆ ಸಲ್ಲಲಿದೆ ಎಂದ ಅವರು ಈ ಅಭೂತ ಪೂರ್ವ ಕಾರ್ಯಕ್ರಮದಲ್ಲಿ ನಿರಂತರ ಹೋರಾಟ ನಡೆಸಿದ ತಾಲ್ಲೂಕು ಮತ್ತು ಜಿಲ್ಲಾ ದಲಿತ ಮುಖಂಡರಿಗೆ ಸನ್ಮಾನ ಮಾಡಲಾಗುವುದು” ಎಂದರು.
ದಸಂಸ ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಲಾವಣ್ಯ ಮಾತನಾಡಿ, “ಮಹಿಳಾ ದೌರ್ಜನ್ಯ ತಡೆ ಹಿಡಿಯಲು ಈ ಸಂಘಟನೆ ದೊಡ್ಡ ಶಕ್ತಿಯಾಗಿ ಹೊರ ಹೊಮ್ಮಿದೆ. ತುಳಿತಕ್ಕೆ ಒಳಗಾದ ಮಹಿಳೆಯರ ಬಗ್ಗೆ ಸಂಘರ್ಷ ಸಮಿತಿ ಕಾಳಜಿ ವಹಿಸಿ ಸಮಾನತೆ ನೀಡುವಲ್ಲಿ ಸಹ ಹೋರಾಟ ನಡೆಸಿದೆ. ಇಂತಹ ವೈಚಾರಿಕತೆಯ ದಸಂಸ 50 ವರ್ಷ ತುಂಬಿರುವುದು ಸಾರ್ಥಕ ಕ್ಷಣವಾಗಿದೆ. ಈ ಸಂಭ್ರಮಕ್ಕೆ ತಾಲೂಕಿನ ಎಲ್ಲಾ ದಲಿತರು ಆಗಮಿಸಿ ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಈಶ್ವರಯ್ಯ, ನರೇಂದ್ರ ಕುಮಾರ್, ಸುರೇಶ್, ರಾಮಕೃಷ್ಣ, ದೊಡ್ಡಮ್ಮ, ಶಿವಮ್ಮ, ರಮೇಶ್, ಮಧು, ಯೋಗೀಶ್, ನರಸಿಯಪ್ಪ, ಸಿದ್ದೇಶ್ ಇತರರು ಇದ್ದರು.