- ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್
- ಜಗದೀಶ್ ಶೆಟ್ಟರ್ ಅವರಿಗೆ ಕರೆ ಮಾಡಿದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ
ಶಾಸಕ ಸ್ಥಾನದಿಂದ ರಾಜೀನಾಮೆ ನೀಡಿ ಬಿಜೆಪಿಯಿಂದ ಹೊರಬಂದಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ತನ್ನತ್ತ ಸೆಳೆದುಕೊಳ್ಳಲು ಕಾಂಗ್ರೆಸ್ ತೆರೆ ಮರೆಯಲ್ಲಿ ಪ್ರಯತ್ನ ನಡೆಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಜಗದೀಶ್ ಶೆಟ್ಟರ್ ಅವರಿಗೆ ಕರೆ ಮಾಡಿ ಅವರಿಗೆ ಗಾಳ ಹಾಕಿದ್ದಾರೆ ಎನ್ನಲಾಗಿದೆ.
“ನೀವು ಕಾಂಗ್ರೆಸ್ಸಿಗೆ ಬನ್ನಿ. ನಿಮಗೆ ಸೂಕ್ತ ಸ್ಥಾನಮಾನ ನೀಡುತ್ತೇವೆ” ಎಂದು ಸುರ್ಜೇವಾಲ ಅವರು ಶೆಟ್ಟರ್ ಅವರಿಗೆ ಕರೆ ಮೂಲಕ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಸುರ್ಜೇವಾಲ ನೀಡಿರುವ ಆಫರ್ ಬಗ್ಗೆ ಶೆಟ್ಟರ್ ಪ್ರತಿಕ್ರಿಯಿಸಿ, “ನಾನು ಯಾವುದೇ ಸ್ಥಾನಮಾನದ ಆಕಾಂಕ್ಷಿಯಾಗಿಲ್ಲ. ನಮ್ಮ ಕ್ಷೇತ್ರಕ್ಕೆ ಸೂಕ್ತ ಅನುದಾನ ಕಲ್ಪಿಸಿದರೆ ಸಾಕು” ಎನ್ನುವ ಇಂಗಿತ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಈಗಾಗಲೇ ಜಗದೀಶ್ ಶೆಟ್ಟರ್ ಅವರನ್ನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕೆರೆ ತರಲು ಡಿ ಕೆ ಶಿವಕುಮಾರ್ ಹೆಸರಲ್ಲಿ ಎರಡು ಹೆಲಿಕಾಪ್ಟರ್ ಬುಕ್ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ತಮ್ಮ ಬೆಂಬಲಿಗರ ಜೊತೆಗೆ ಸಭೆ ನಡೆಸಿ ಕಾಂಗ್ರೆಸ್ ಸೇರುವುದು ಖಚಿತವಾದಲ್ಲಿ ಮಧ್ಯಾಹ್ನ ನಂತರ ಬೆಂಗಳೂರಿಗೆ ಶೆಟ್ಟರ್ ಆಗಮಿಸಲಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೋಲಾರಕ್ಕೆ ಆಗಮಿಸಿದ್ದು, ಶೆಟ್ಟರ್ ಅವರು ಕಾಂಗ್ರೆಸ್ ಆಯ್ಕೆ ಮಾಡಿಕೊಂಡಲ್ಲಿ ಈ ಎಲ್ಲ ನಾಯಕರ ಸಮ್ಮುಖದಲ್ಲಿ ಶೆಟ್ಟರ್ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ಸಿಗೆ ಬರುತ್ತಾರೆ ಎಂದರೆ ನಾವು ಸ್ವಾಗತಿಸುತ್ತೇವೆ” ಎಂದು ಹೇಳಿದ್ದಾರೆ.
ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿ, “ಜಗದೀಶ್ ಶೆಟ್ಟರ್ ಒಬ್ಬ ಪ್ರಾಮಾಣಿಕ ರಾಜಕಾರಣಿ. ಕಪ್ಪು ಚುಕ್ಕೆ ಇಲ್ಲದೇ ಮುಖ್ಯಮಂತ್ರಿ ಸ್ಥಾನ ನಿಭಾಯಿಸಿದ್ದಾರೆ. ಅವರು ಕಾಂಗ್ರೆಸ್ಸಿಗೆ ಬರುತ್ತಾರೆ ಎಂದರೆ ಸೂಕ್ತ ಸ್ಥಾನಮಾನ ನೀಡಿ ಬರಮಾಡಿಕೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.
“ಕಾಂಗ್ರೆಸ್ ಸೇರ್ಪಡೆ ವಿಚಾರ ಸೇರಿದಂತೆ ಎಲ್ಲ ಆಯ್ಕೆಗಳು ತೆರೆದಿವೆ. ಕಾಂಗ್ರೆಸ್ ನವರು ತಮ್ಮ ಪ್ರತಿನಿಧಿ ಕಳಿಸಿದ್ದಾರೆ.ಕಾಂಗ್ರೆಸ್ ಸೇರ್ಪಡೆ ಬಗ್ಗೆ ಹಿತೈಷಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ” ಎಂದು ಜಗದೀಶ್ ಶೆಟ್ಟರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.