ಬರ ಹಾಗೂ ಬೇಸಿಗೆ ಆರಂಭವಾಗಿದ್ದು ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳಾಗದಂತೆ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಲು ಜಿಲ್ಲೆಯ ಎಲ್ಲಾ ತಾಲ್ಲೂಕಿನ ತಹಶೀಲ್ದಾರರು, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಕರೆದ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರು, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕೆಲಸ ಮಾಡಿದರೆ ಜಿಲ್ಲೆಯಲ್ಲಿ ಯಾವುದೇ ಗ್ರಾಮಗಳಲ್ಲಿ ನೀರಿನ ಸಮಸ್ಯೆಗಳಾಗುವುದಿಲ್ಲ. ತಹಶಿಲ್ದಾರರು ಈ ಕುರಿತು ತಮ್ಮ ತಾಲ್ಲೂಕಿನ ಶಾಸಕರ ಅಧ್ಯಕ್ಷತೆಯಲ್ಲಿ ಒಂದು ಸಭೆ ನಡೆಸಿ ಯಾವ ಯಾವ ಗ್ರಾಮಗಳಲ್ಲಿ ನೀರಿನ ಸಮಸ್ಯೆಗಳಿಗೆ ಮುಂದೆ ಸಮಸ್ಯೆಗಳು ಆಗಬಹುದು ಎಂಬುದರ ಕುರಿತು ಮಾಹಿತಿ ಸಂಗ್ರಹಿಸಬೇಕು” ಎಂದರು.
ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ವಾಟರ್‌ಮ್ಯಾನ್‌ಗಳ ಸಭೆ ಕರೆದು ಅವರಿಗೆ ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಸಮಯಕ್ಕೆ ಗ್ರಾಮಗಳಲ್ಲಿ ನೀರು ಬಿಡುವುದರ ಕುರಿತು ತಿಳಿಸಬೇಕು ಹಾಗೂ ಗ್ರಾಮ ಸೇವಕರು ಮತ್ತು ಪಿಡಿಓಗಳು ನೀರಿನ ಸಮಸ್ಯೆಗಳಿರುವ ಗ್ರಾಮಗಳ ಮಾಹಿತಿಯನ್ನು ತಮ್ಮ ಮೇಲಧಿಕಾರಿಗಳಿಗೆ ತಿಳಿಸಬೇಕೆಂದರು.
ಕುಡಿಯುವ ನೀರಿಗೆ ಹಣದ ಕೊರತೆಯಿಲ್ಲ:
“ಅಧಿಕಾರಿಗಳು ಖುದ್ದಾಗಿ ಯಾವ ಗ್ರಾಮಗಳಲ್ಲಿ ನೀರಿನ ಸಮಸ್ಯೆಗಳಿಗೆ ಎಂಬುದರ ನಿಖರ ಮಾಹಿತಿ ಕೊಡಬೇಕು. ಸಮಸ್ಯೆಗಳಿರುವ ಗ್ರಾಮಗಳಲ್ಲಿ ಹೇಗೆ ಜನರಿಗೆ ನೀರು ಒದಗಿಸಬೇಕು, ಖಾಸಗಿ ಬೋರವೆಲ್ ಅಥವಾ ನೀರಿನ ಟ್ಯಾಂಕರ್‌ಗಳ ಮೂಲಕ, ತೆರೆದ ಬಾವಿಗಳ ಮೂಲಕ ಜನರಿಗೆ ನೀರು ಒದಗಿಸಬೇಕಾ ಎಂಬ ಮಾಹಿತಿಯನ್ನು ಅಧಿಕಾರಿಗಳು ಮುಂಚಿತವಾಗಿ ಸಂಗ್ರಹಿಸಬೇಕು ಮತ್ತು ಯಾವುದೇ ಕಾರಣಕ್ಕೆ ನೆಪ ಹೇಳುವಹಾಗಿಲ್ಲ. ಕುಡಿಯುವ ನೀರಿಗೆ ಹಣದ ಕೊರತೆಯಿಲ್ಲ” ಎಂದರು.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನೀರಿನ ಸಮಸ್ಯೆ ವಿಶೇಷವಾಗಿ ಔರಾದ ಮತ್ತು ಭಾಲ್ಕಿ ತಾಲೂಕುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹಾಗಂತ ಇತರೆ ತಾಲ್ಲೂಕಿನ ಅಧಿಕಾರಿಗಳು ಸುಮ್ಮನಿರುವ ಹಾಗಿಲ್ಲ. ತಮ್ಮ ತಮ್ಮ ತಾಲೂಕಿನಲ್ಲಿ ನೀರಿನ ಸಮಸ್ಯೆಗಳಿರುವ ಗ್ರಾಮಗಳ ನಿಖರವಾದ ಮಾಹಿತಿಯನ್ನು ನೀಡುವುದರ ಜೊತೆಗೆ ಬೀದರ ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು” ಎಂದು ಹೇಳಿದರು.
“ನೀರಿನ ಮೂಲ ಇಲ್ಲದ ಕಡೆ ಖಾಸಗಿ ಬೋರವೆಲ್ ಮತ್ತು ತೆರೆದ ಭಾವಿಗಳ ಮಾಹಿತಿಯನ್ನು ಮುಂಚಿತವಾಗಿ ಸಂಗ್ರಹಿಸಿ ಮತ್ತು ಟ್ಯಾಂಕರಗಳ ಮೂಲಕ ನೀರು ಒದಗಿಸಿ ತಾಲೂಕು ಮಟ್ಟದಲ್ಲಿ ತಹಶೀಲ್ದಾರರಿಗೆ 5 ಲಕ್ಷದವರೆಗೆ ಹಣ ಖರ್ಚು ಮಾಡಬಹುದಾಗಿದೆ ಮತ್ತು ಕುಡಿಯುವ ನೀರಿಗೆ ತುರ್ತು 2 ಲಕ್ಷ ರೂ.ಗಳವರೆಗೆ ಖರ್ಚು ಮಾಡಬಹುದು” ಎಂದರು.
“ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವಾಗ ಅವುಗಳಿಗೆ ಜಿಪಿಎಸ್ ಅಳವಡಿಸಿ ಅದರಿಂದ ಯಾವ ಯಾವ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗಿದೆ ಎಂಬ ಮಾಹಿತಿ ಸಿಗುತ್ತದೆ. ಗುತ್ತಿಗೆ ಪಡೆದ ಖಾಸಗಿ ಬೋರವೆಲ್, ತೆರೆದ ಬಾವಿಗಳು ಮತ್ತು ಟ್ಯಾಂಕರಗಳ ಮಾಲೀಕರಿಗೆ ಹದಿನೈದು ದಿನಗಳಿಗೊಮ್ಮೆ ಅವರಿಗೆ ಹಣ ಪಾವತಿಸಬೇಕು ಹಾಗೂ ಎಷ್ಟು ಬೋರವೆಲ್, ಬಾವಿ, ಟ್ಯಾಂಕರಗಳ ಮೂಲಕ ವಿವಿಧ ಗ್ರಾಮಗಳಲ್ಲಿ ನೀರು ಒದಗಿಸಲಾಗುತ್ತಿದೆ ಎಂಬ ಮಾಹಿತಿಯನ್ನು ನೀಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ಬೇಸಿಗೆ ಆರಂಭವಾಗಿರುವುದರಿಂದ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಅಂದಾಗ ಮಾತ್ರ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬಜೆಟ್ ಅಧಿವೇಶನ | ನಿಮ್ಮ ಗೂಂಡಾಗಿರಿಗೆಲ್ಲ ಹೆದರಲ್ಲ; ಬಿಜೆಪಿ ಸದಸ್ಯರಿಗೆ ಸಿದ್ದರಾಮಯ್ಯ ತಿರುಗೇಟು
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ದಿಲೀಪ್ ಬದೋಲೆ, ಜಿಲ್ಲೆಯ ವಿವಿಧ ತಾಲೂಕಿನ ತಹಶೀಲ್ದಾರರು, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.