ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಿಗ್ಗೆ 10.15ಕ್ಕೆ 2024-25ನೇ ಸಾಲಿನ ಬಜೆಟ್ ಮಂಡಿಸಲಿದ್ದು, ಹಣಕಾಸು ಮಂತ್ರಿಯಾಗಿ ದಾಖಲೆಯ 15ನೇ ಆಯವ್ಯಯ ಇದಾಗಲಿದೆ.
ಬಜೆಟ್ ಗಾತ್ರ 3.80 ಲಕ್ಷ ಕೋಟಿ ರೂ. ಗಾತ್ರ ಮುಟ್ಟುವ ಸಾಧ್ಯತೆಯಿದೆ. 2023-24ನೇ ಸಾಲಿನ ಬಜೆಟ್ 3.27 ಲಕ್ಷ ಲೋಟಿ ರೂ. ಇತ್ತು. ಐದು ಗ್ಯಾರಂಟಿಗಳನ್ನು ಮೀರಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಬಂಡವಾಳ ಕ್ರೋಡಿಕರಿಸಲು ಮುಖ್ಯಮಂತ್ರಿಗಳ ಇಂದಿನ ಬಜೆಟ್ ಪ್ರಮುಖ ಪಾತ್ರ ಪಡೆದುಕೊಂಡಿದೆ.
ಕೆಲವೇ ತಿಂಗಳುಗಳಲ್ಲಿ ನಡೆಯುವ ಲೋಕಸಭಾ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಈ ಸಾಲಿನ ಬಜೆಟ್ ಮಹತ್ವ ಹೊಂದಿದೆ.
ಐದು ಗ್ಯಾರಂಟಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 55 ಸಾವಿರ ಕೋಟಿ ರೂ. ಹಣ ಮೀಸಲಿಡುವ ಸಾಧ್ಯತೆಯಿದೆ. ಮುಂಬರುವ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಐದು ಗ್ಯಾರಂಟಿ ಯೋಜನೆಗಳು ಫಲಾನುಭವಿಗಳನ್ನು ಹೇಗೆ ತಲುಪಿವೆ ಎಂಬುದನ್ನು ಬಜೆಟ್ನಲ್ಲಿ ವಿವರಿಸಬಹುದು.
ಕಾಂಗ್ರೆಸ್ ಪ್ರತಿಪಾದಿಸಿಕೊಂಡು ಬಂದಿರುವ ‘ಅಹಿಂದ’ ವರ್ಗದ ಕಲ್ಯಾಣಕ್ಕೂ ಹೊಸ ಯೋಜನೆಗಳ ಘೋಷಣೆಯ ಸಾಧ್ಯತೆ ಇದೆ. ಸರ್ಕಾರ ಮೊದಲ 10 ತಿಂಗಳಲ್ಲಿ ಗ್ಯಾರಂಟಿ ಜಾರಿಗಷ್ಟೇ ಒತ್ತು ನೀಡಿದೆ ಎಂಬ ಭಾವನೆ ಜನರಲ್ಲಿದೆ. ಹಾಗಾಗಿ ಈ ಆಯವ್ಯಯದಲ್ಲಿ ಗ್ಯಾರಂಟಿ ಹೊರತಾಗಿ ದೊಡ್ಡ ಜನಸಮೂಹಕ್ಕೆ ನೆರವಾಗುವಂತಹ ಕಾರ್ಯಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆಯೂ ಇದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರೈತಸ್ನೇಹಿ- ಚುನಾವಣಾ ಸಮಯದ ಗಿಮಿಕ್ ಆಗದಿರಲಿ
ಗ್ಯಾರಂಟಿಗಳನ್ನು ಹೊರತುಪಡಿಸಿ ಮುಖ್ಯಮಂತ್ರಿಗಳು ವಿವಿಧ ವಲಯಗಳಲ್ಲಿನ ಹೂಡಿಕೆಗಳನ್ನು ಆಕರ್ಷಿಸಲು ಕೆಲವು ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆಯಿದೆ. ಬಜೆಟ್ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಬ್ರಾಂಡ್ ಬೆಂಗಳೂರು ಕಾರ್ಯಕ್ರಮಗಳಿಗೂ ಹಣ ಮೀಸಲಿಡುವ ಸಾಧ್ಯತೆಯಿದೆ.
ಗ್ಯಾರಂಟಿ ಹೊರತಾಗಿ ಬದ್ಧತೆಯ ಬಜೆಟ್: ಡಿಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನರಿಗೆ ಶಕ್ತಿ ತುಂಬುವ ಜತೆಗೆ ಅವರನ್ನು ಸಶಕ್ತರನ್ನಾಗಿಸುವ ಬಜೆಟ್ ಮಂಡನೆ ಮಾಡಲಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ ಆಶಾಭಾವ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ಸಾಲಿನ ಬಜೆಟ್ ಸಾಕಷ್ಟು ವಿಶೇಷತೆಯಿಂದ ಕೂಡಿದ್ದು, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ದಿಕ್ಸೂಚಿಯಾಗಲಿದೆ. ಈಗಾಗಲೇ ಗ್ಯಾರಂಟಿಗಳನ್ನು ಈಡೇರಿಸಲಾಗಿದೆ. ಈಗ ಅದೇ ಬದ್ಧತೆಯೊಂದಿಗೆ ಬಜೆಟ್ ಮಂಡನೆ ಆಗಲಿದೆ. ವಿಶೇಷವಾಗಿ ಉದ್ಯಮ, ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು’ ಎಂದು ಹೇಳಿದ್ದಾರೆ.