ತೆಲಂಗಾಣ ವಿಧಾನಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪೊನ್ನಂ ಪ್ರಭಾಕರ್ ಜಾತಿವಾರು ಜಾತಿಗಣತಿ ನಡೆಸುವ ನಿರ್ಣಯ ಮಂಡಿಸಿದ್ದಾರೆ. ನಿರ್ಣಯದ ನಗ್ಗೆ ಸದನದಲ್ಲಿ ಚರ್ಚೆ ನಡೆಯುತ್ತಿದ್ದು, ಪ್ರತಿಪಕ್ಷ ಬಿಆರ್‌ಎಸ್ ಕೂಡ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿದೆ.
“ಸದನವು ಇಡೀ ತೆಲಂಗಾಣ ರಾಜ್ಯದ ವಿವಿಧ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಮಗ್ರ ಮನೆ-ಮನೆ ಸಮೀಕ್ಷೆಯನ್ನು (ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಉದ್ಯೋಗ, ರಾಜಕೀಯ ಮತ್ತು ಜಾತಿ ಸಮೀಕ್ಷೆ) ತೆಗೆದುಕೊಳ್ಳಲು ನಿರ್ಧರಿಸುತ್ತದೆ” ಎಂದು ಸದನದಲ್ಲಿ ಸಚಿವ ಪ್ರಭಾಕರ್ ಹೇಳಿದ್ದಾರೆ.
“ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಜಾಗೂ ಪರಿಶಿಷ್ಟ ಪಂಗಡಗಳ ಸುಧಾರಣೆಗಾಗಿ ಸಾಮಾಜಿಕ ಶೈಕ್ಷಣಿಕ, ಉದ್ಯೋಗ ಹಾಗೂ ರಾಜಕೀಯ ಅವಕಾಶಗಳನ್ನು ಭಾರತ ಸಂವಿಧಾನದ ಅನುಚ್ಛೇದ 15ರ (4) ಮತ್ತು (5), ಅನುಚ್ಛೇದ 16ರ ಕಲಂ (4), ಅನುಚ್ಛೇದ 38, 39 , 243ಡಿ (6) ಮತ್ತು 243ಟಿ (6)ರ ಅಡಿಯಲ್ಲಿ ಕಡ್ಡಾಯಗೊಳಿಸಲಾಗಿದೆ” ಎಂದು ನಿರ್ಣಯದಲ್ಲಿ ಹೇಳಲಾಗಿದೆ.
ನಿರ್ಣಯದ ಕುರಿತು ಮಾತನಾಡಿದ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ, “ಜಾತಿ ಗಣತಿ ನಡೆಸುವ ಬಗ್ಗೆ ಎಲ್ಲ ಸದಸ್ಯರು ತಮ್ಮ ಸಲಹೆಗಳನ್ನು ನೀಡಬೇಕು” ಎಂದು ಮನವಿ ಮಾಡಿದರು.
ಉಪಮುಖ್ಯಮಂತ್ರಿ ಮಲ್ಲು ಬ್ಯಾಹಟ್ಟಿ ವಿಕ್ರಮಾರ್ಕ ಮಾತನಾಡಿ, “ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಜಾತಿಗಣತಿ ಮಾಡುತ್ತಿದ್ದೇವೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಜಾತಿ ಗಣತಿ ಅಡಿಗಲ್ಲು ಇದ್ದಂತೆ” ಎಂದರು.
ನಿರ್ಣಯವನ್ನು ಸ್ವಾಗತಿಸಿದ ಬಿಆರ್‌ಎಸ್ ಸದಸ್ಯ ಕೆ ಶ್ರೀಹರಿ, “ಜಾತಿ ಗಣತಿ ಬದಲು ಹಿಂದುಳಿದ ವರ್ಗಗಳ ಜನಗಣತಿ ಎಂದು ನಿರ್ಣಯದಲ್ಲಿ ನಮೂದಿಸಬೇಕಿತ್ತು. ಜಾತಿ ಗಣತಿ ಎಂಬ ಪದ ಗೊಂದಲ ಮೂಡಿಸಿದೆ” ಎಂದರು.
ಶ್ರೀಹರಿಗೆ ಉತ್ತರಿಸಿದ ವಿಕ್ರಮಾರ್ಕ, “ಯಾವುದೇ ಗೊಂದಲವಿಲ್ಲ, ಗಣತಿ ಎಲ್ಲರಿಗೂ ಸಹಕಾರಿಯಾಗಲಿದೆ” ಎಂದರು.