ಬೆಂಗಳೂರಿನ ಸರ್ಜಾಪುರ ರಸ್ತೆಯ ವಿಪ್ರೋ ಗೇಟ್ ಬಳಿ ಭಾನುವಾರ ಆರು ಮಂದಿಯ ತಂಡದಿಂದ ಥಳಿತಕ್ಕೊಳಗಾಗಿದ್ದ ಕೇರಳದ ಇಬ್ಬರು ವ್ಯಕ್ತಿಗಳು ಮಾದಕ ವಸ್ತು ದಂಧೆಕೋರರು ಎಂದು ತಿಳಿದುಬಂದಿದೆ.
ಎಸ್ ಶಿಜು (25) ಮತ್ತು ತ್ರಿಶೂರ್‌ನ ಡೊನಾಲ್ ವಿಲ್ಸನ್ (27) ಈ ಇಬ್ಬರು ಮಾದಕ ವಸ್ತು ದಂಧೆಕೋರರು. ಮಾದಕವಸ್ತು ಎಂಡಿಎಂಎ ಕ್ರಿಸ್ಟಲ್ ಮಾರಾಟ ಮಾಡುತ್ತಿದ್ದರು. ಇವರು ಮಾರಾಟ ಮಾಡಿದ ಎಂಡಿಎಂಎ ಮಾದಕ ವಸ್ತುವಿನ ಹಣವನ್ನು ಗ್ಯಾಂಗ್ ಇವರಿಗೆ ಕೊಡುವುದು ಬಾಕಿ ಇತ್ತು. ಹಣ ಕೊಡುವಂತೆ ಕೇಳಿದ್ದಕ್ಕೆ ಗ್ಯಾಂಗ್ ಇಬ್ಬರ ಮೇಲೆ ಹಲ್ಲೆ ನಡೆಸಿದೆ.
ದಾಳಿಯ ಬಗ್ಗೆ ಸುಳಿವು ಪಡೆದ ಪೊಲೀಸರು ವಿಚಾರಣೆ ವೇಳೆ, ಕೊಲ್ಲಂ ಮೂಲದ ಎಸ್ ಶಿಜು (25) ಮತ್ತು ತ್ರಿಶೂರ್‌ನ ಡೊನಾಲ್ ವಿಲ್ಸನ್ (27) ಮಾದಕ ದ್ರವ್ಯ ದಂಧೆಕೋರರು ಎಂದು ಪತ್ತೆ ಮಾಡಿದರು. ವರ್ತೂರಿನ ಮುತ್ತಾನಲ್ಲೂರು ಕ್ರಾಸ್ ಬಳಿ ಎಂಡಿಎಂಎ ಕ್ರಿಸ್ಟಲ್‌ಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ.
ದಂಧೆಕೋರರ ಮೇಲೆ ಹಲ್ಲೆ ಮಾಡಿದ ಗ್ಯಾಂಗ್‌ನವರ ವಿರುದ್ಧ ಪೊಲೀಸರು ಅವರಿಂದ ದೂರು ಪಡೆದಿದ್ದಾರೆ. ಗ್ಯಾಂಗ್‌ನಲ್ಲಿರುವವರು ಡ್ರಗ್ಸ್ ದಂಧೆಕೋರರೂ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಶಿಜು ಮತ್ತು ವಿಲ್ಸನ್ ಉದ್ಯೋಗ ಅರಸಿ ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ನಗರದ ವರ್ತೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಅವರು ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ಕೆಲಸಕ್ಕೆ ಸೇರಿಕೊಂಡರು. ಜೀವನ ನಿರ್ವಹಣೆ ಮಾಡಲಾಗದೆ, ಮಾರತ್ತಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾದಕ ವಸ್ತು ಮಾರಾಟ ಆರಂಭಿಸಿದ್ದರು.
ವಿಚಾರಣೆ ವೇಳೆ, ಶಿಜು ಮತ್ತು ವಿಲ್ಸನ್ ತಮ್ಮ ಸ್ನೇಹಿತ ಸಂಜು ಮತ್ತು ಇತರ ಐವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ವಿಪ್ರೋ ಗೇಟ್ ಬಳಿ ಡ್ರಗ್ಸ್ ಮಾರಾಟ ಮಾಡಲು ತೆರಳಿದ್ದ ಶಿಜು ಮತ್ತು ವಿಲ್ಸನ್, ಸಂಜು ಅವರನ್ನು ನೋಡಿ ತಮ್ಮಿಂದ ಖರೀದಿಸಿದ ಎಂಡಿಎಂಎ ಕ್ರಿಸ್ಟಲ್‌ಗೆ ಹಣ ನೀಡುವಂತೆ ಕೇಳಿದ್ದಾರೆ. ಇದರಿಂದ ಕುಪಿತಗೊಂಡ ಸಂಜು ಮತ್ತು ಆತನ ಸಹಚರರು ಶಿಜು ಮತ್ತು ವಿಲ್ಸನ್ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? 5,059 ಇವಿ ಚಾರ್ಜಿಂಗ್ ಸ್ಟೇಷನ್‌ಗಳೊಂದಿಗೆ ದೇಶದಲ್ಲಿಯೇ ಅಗ್ರಸ್ಥಾನಕ್ಕೇರಿದ ಕರ್ನಾಟಕ
ರವಿವಾರ ಸಂಜೆ ಸರ್ಜಾಪುರ–ಮಾರತ್ತಹಳ್ಳಿ ರಸ್ತೆಯ ಮುತ್ತಾನಲ್ಲೂರು ಕ್ರಾಸ್ನಲ್ಲಿರುವ ಹೋಟೆಲ್ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶಿಜು ಮತ್ತು ವಿಲ್ಸನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ₹35,000 ಮೌಲ್ಯದ ಎರಡು ಗ್ರಾಂ ಎಂಡಿಎಂಎ ಕ್ರಿಸ್ಟಲ್‌ಗಳು ಮತ್ತು ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಸಂಜು ಮತ್ತು ಇತರ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.