ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಒಡೆತನದ ಕಾರ್ಖಾನೆಯಲ್ಲಿ ಕಬ್ಬು ಅರೆಯಲು ಪರವಾನಗಿ ಪಡೆಯದಿಲ್ಲ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನೂ ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ. ಆರೋಪ ಸಂಬಂಧ ತ್ನಾಳ್‌ಗೆ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಇಲಾಖೆ ಆಯುಕ್ತರು ಮತ್ತು ನಿರ್ದೇಶಕರು ನೋಟಿಸ್ ಜಾರಿ ಮಾಡಿದ್ದಾರೆ.
ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿರುವ ಸಿದ್ಧಸಿರಿ ಸೌಹಾರ್ದ ಸಹಕಾರಿ ಕಾರ್ಖಾನೆಯ ಸಿದ್ಧಸಿರಿ ಎಥೆನಾಲ್ ಮತ್ತು ವಿದ್ಯುತ್ ಘಟಕದಲ್ಲಿ ಪರವಾನಗಿ ಪಡೆಯದೆ ಕಬ್ಬು ನುರಿಯಲು ಆರಂಭಿಸಲಾಗಿದೆ ಎಂದು ವರದಿಯಾಗಿದೆ. ಇದಕ್ಕೆ ಸಕ್ಕರೆ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ್ದು, ನೋಟಿಸ್‌ಗೆ 24 ಗಂಟೆಗಳಲ್ಲಿ ಉತ್ತರ ನೀಡುವಂತೆ ಫೆಬ್ರವರಿ 16ರಂದು ತಾಕೀತು ಮಾಡಿದೆ.
“ಕಬ್ಬು ನುರಿಯಲು ಪರವಾನಗಿಗಾಗಿ ಸಲ್ಲಿಸಿದ್ದ ಅರ್ಜಿಯಲ್ಲಿ ಅಗತ್ಯ ದಾಖಲೆಗಳನ್ನು ಒದಗಿಸಿಲ್ಲ. ಈ ಬಗ್ಗೆ ತಮಗೆ ಮಾಹಿತಿ ನೀಡಿದ್ದು, ಸೂಕ್ತ ದಾಖಲೆ ಒದಗಿಸುವಂತೆ ಸೂಚಿಸಲಾಗಿತ್ತು. ಆದರೆ, ಅಗತ್ಯ ದಾಖಲೆ ಸಲ್ಲಿಸಿ, ಪರವಾನಗಿ ಪಡೆಯದೆ ಕುಬ್ಬು ನುರಿಯಲು ಆರಂಭಿಸಿದ್ದೀರಿ. ಇದು ಕಬ್ಬು (ನಿಯಂತ್ರಣ) ಆದೇಶ-1966ರ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ಸಕ್ಕರೆ ಇಲಾಖೆಯ ಅಧಿಕಾರಿಗಳು ನೋಟಿಸ್‌ನಲ್ಲಿ ತಿಳಿಸಿದ್ದಾರೆ.
“ಪರವಾನಗಿ ಪಡೆಯದೆ ಕಬ್ಬು ನುರಿಯಲು ಆರಂಭಿಸಿರುವ ನಿಮ್ಮ ವಿರುದ್ಧ ಯಾಕೆ ಮೊಕದ್ದಮೆ ದಾಖಲಿಸಬಾರದು ಎಂಬುದಕ್ಕೆ ಸಮಜಾಯಿಸಿ ನೀಡುವಂತೆ ಈ ಹಿಂದೆ (ಜ.24) ಪತ್ರ ಬರೆಯಲಾಗಿತ್ತು. ಆದರೆ, ನೀವು ಸಮಜಾಯಿಷಿ ನೀಡಿಲ್ಲ. ಈಗ, 24 ಗಂಟೆಯೊಳಗೆ ಉತ್ತರಿಸದಿದ್ದರೆ, ಮೊಕದ್ದಮೆ ದಾಖಲಿಸಲಾಗುತ್ತದೆ” ಎಂದು ನೋಟೀಸ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.