ಅಗತ್ಯ ವಸ್ತುಗಳ ಬೆಲೆಯೇರಿಕೆ ಇಳಿಸಲು, ದುಡಿಯುವ ಜನರ ಶೋಷಣೆ ತಪ್ಪಿಸಲು, ಕೊಂಡುಕೊಳ್ಳುವ ಸಾಮರ್ಥ್ಯ ಹೆಚ್ಚಿಸಲು, ಉದ್ಯೋಗ ಸೃಷ್ಟಿಸಲು ಆಗ್ರಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ರೈತ-ಕಾರ್ಮಿಕ-ಕೃಷಿ ಕೂಲಿಕಾರರಿಂದ ನಡೆದ ದೇಶಾದ್ಯಂತ ಪ್ರತಿಭಟನೆಯ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಜೆ ಬಾಲಕೃಷ್ಣ ಶೆಟ್ಟಿಯವರು ಮಾತನಾಡಿ, “ನೀತಿ ಆಯೋಗದ ಪರಿಕಲ್ಪನೆಗಳು ಬದಲಾಗಿದ್ದರ ಪರಿಣಾಮ ಇಂದಿನ ಆರ್ಥಿಕ ನೀತಿಗಳು ಉದ್ಯೋಗರಹಿತವಾಗಿ ಜಾರಿಯಾಗುತ್ತಿವೆ. ಉತ್ಪಾದನಾ ವಲಯದಲ್ಲಿ ಇದೇ ಮೊದಲ ಬಾರಿಗೆ ಹಿಂದೆಂದೂ ಇಲ್ಲದ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಕುಸಿದಿದೆ. ಮೋದಿ ಸರ್ಕಾರ ಎಷ್ಟೇ ಜಂಭ ಕೊಚ್ಚಿಕೊಂಡರೂ ಬಂಡವಾಳ ಹೂಡಿಕೆ ಆಗುತ್ತಿಲ್ಲ. ಉದ್ಯೋಗಸ್ಥರ ಬದಲಾಗಿ ಗುತ್ತಿಗೆ ಹೊರಗುತ್ತಿಗೆ ತಾತ್ಕಾಲಿಕ ಉದ್ಯೋಗಗಳು ಹೆಚ್ಚಾಗಿವೆ. ಬಂಡವಾಳಶಾಹಿಗಳ ಪರವಾಗಿ ಕಾರ್ಮಿಕ ಕಾನೂನುಗಳನ್ನು ಬದಲಿಸಿ ಸಂಹಿತೆಗಳನ್ನಾಗಿ ಪರಿವರ್ತಿಸಲಾಗಿದೆ” ಎಂದು ಹೇಳಿದರು.
ಎಐಯುಟಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜ ಮಾತನಾಡಿ, “ಕಳೆದ 10 ವರ್ಷಗಳ ಮೋದಿ ಸರ್ಕಾರದ ನೀತಿಗಳು ಕಾರ್ಮಿಕ ವರ್ಗದ ಬದುಕಿನ ಮೇಲೆ ಪ್ರಹಾರಗಳನ್ನು ನಡೆಸಿವೆ. ಆದಾಯ ಕುಸಿತ, ಖಾಯಂ ಉದ್ಯೋಗಗಳ ಕುಸಿತ, ಗುತ್ತಿಗೆ ಹೊರಗುತ್ತಿಗೆ ಹಾಗೂ ಬಿಟ್ಟಿ ದುಡಿಮೆ ಹೆಚ್ಚಳ, ಕೋವಿಡ್ ಪರಿಸ್ಥಿತಿಯಲ್ಲಿ ವಲಸೆ ಕಾರ್ಮಿಕರು ಅನುಭವಿಸಿದ ಸಂಕಟ ಹಾಗೂ ಕೃಷಿ ಬಿಕ್ಕಟ್ಟಿನ ಪರಿಣಾಮದಿಂದ ಅಸಂಘಟಿತ ಕಾರ್ಮಿಕರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ, ಸಾಮಾಜಿಕ ರಕ್ಷಣೆ ಇಲ್ಲದ ಅತಂತ್ರದ ಬದುಕು, ಯೋಜನಾ ಕಾರ್ಮಿಕರನ್ನು ಗೌರವಧನದ ಹೆಸರಲ್ಲಿ ಶೋಷಿಸುವ ನೀತಿ ತೀವ್ರಗೊಂಡಿದೆ” ಎಂದು ಹೇಳಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ಜನಸಾಮಾನ್ಯರ ಸಂಕಷ್ಟಗಳಿಗೆ ಪರಿಹಾರ ಒದಗಿಸಬೇಕಾದ ಕೇಂದ್ರ ಸರ್ಕಾರ ಪ್ರತಿಯೊಂದು ಹಂತದಲ್ಲಿಯೂ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭವಾಗುವ ನೀತಿಗಳನ್ನು ಜಾರಿಗೊಳಿಸುತ್ತಿದೆ. ಇದರಿಂದಾಗಿ ದೇಶದ ಶೇ.45ರಷ್ಟು ಸಂಪತ್ತು ಹೊಂದಿರುವ ಕೇವಲ ಶೇ.1ರಷ್ಟಿರುವ ಶ್ರೀಮಂತರಲ್ಲಿ ಕೇವಲ ಶೇ.3ರಷ್ಟು ಮಾತ್ರವೇ ಜಿಎಸ್‌ಟಿ ಸಂಗ್ರಹ ಮಾಡಲಾಗುತ್ತಿದೆ. ಆದರೆ ದೇಶದ ಶೇ.50ರಷ್ಟು ಜನರಿಂದ ಶೇ.65ರಷ್ಟು ಜಿಎಸ್‌ಟಿ ಸಂಗ್ರಹ ಮಾಡಲಾಗುತ್ತಿದೆ” ಎಂದು ಹೇಳಿದರು.
ಸಭೆಯನ್ನುದ್ದೇಶಿಸಿ ರಾಜ್ಯ ರೈತ ಸಂಘದ ನಾಯಕ ಸನ್ನಿ ಡಿಸೋಜ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಯಾದವ ಶೆಟ್ಟಿಯವರು ಮಾತನಾಡಿ, ಕೇಂದ್ರ ಸರಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕಘಟನೆಗಳ ಸಮಿತಿಯ ಪ್ರತಿಭಟನೆ
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ನಾಯಕರುಗಳಾದ ವಸಂತ ಆಚಾರಿ, ಯೋಗೀಶ್ ಜಪ್ಪಿನಮೊಗರು, ಸುಕುಮಾರ್, ಪದ್ಮಾವತಿ ಶೆಟ್ಟಿ, ಜಯಂತ ನಾಯಕ್, ಜಯಂತಿ ಶೆಟ್ಟಿ, ವಸಂತಿ ಕುಪ್ಪೆಪದವು, ರಾಧಾ ಮೂಡಬಿದ್ರೆ, ಗಿರಿಜಾ, ನೋಣಯ್ಯ ಗೌಡ, ರೋಹಿದಾಸ್, ಸುಂದರ ಕುಂಪಲ, ಬಿ ಕೆ ಇಮ್ತಿಯಾಜ್, ಎಐಟಿಯುಸಿ ಜಿಲ್ಲಾ ಮುಖಂಡರುಗಳಾದ ಬಿ ಶೇಖರ್, ವಿ ಕುಕ್ಯಾನ್, ಎಚ್ ವಿ ರಾವ್, ಕರುಣಾಕರ್, ಸುರೇಶ್ ಕುಮಾರ್, ಸುಲೋಚನ, ರೈತ ಸಂಘಟನೆಗಳ ಮುಖಂಡರುಗಳಾದ ಕೃಷ್ಣಪ್ಪ ಸಾಲ್ಯಾನ್, ಸದಾಶಿವದಾಸ್, ಓಸ್ವಾಲ್ಡ್ ಪ್ರಕಾಶ್ ಸೇರಿದಂತೆ ಇತರರು ಇದ್ದರು.