ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅವ್ಯಾಹತವಾಗಿ ಮೀಟರ್ ಬಡ್ಡಿ ದಂಧೆ ನಡೆಯುತ್ತಿದೆ. ಆಟೋ, ಟ್ಯಾಕ್ಸಿ ಚಾಲಕರು ಸೇರಿದಂತೆ ನಿತ್ಯ ದುಡಿಯುವ ವರ್ಗದ ಜನರು ಮೀಟರ್ ಬಡ್ಡಿ ದಂಧೆ ನಡೆಸುವವರ ಕೈಗೆ ಸಿಲುಕಿ ನಲುಗುವಂತಾಗಿದೆ. ಇದೀಗ, ಮೀಟರ್ ಬಡ್ಡಿ ದಂಧೆಯಲ್ಲಿ ಸಾಲ ವಸೂಲಿಗೆ ಮುಂದಾಗಿದ್ದ ಸೈಕಲ್ ರವಿ ಸಹಚರರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಉಮೇಶ್, ಸುರೇಶ್ ಹಾಗೂ ಮಂಜುನಾಥ್ ಬಂಧಿತ ಆರೋಪಿಗಳು. ಈ ಬಗ್ಗೆ ಆರ್ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಂಗನಾಥ್ ಎಂಬುವವರು ಟ್ರಾವೆಲ್ಸ್ ವ್ಯವಹಾರಕ್ಕಾಗಿ ಆರೋಪಿ ಮಂಜುನಾಥ್ ಎಂಬುವವರ ಬಳಿ ₹23 ಲಕ್ಷ ಹಣವನ್ನು ಬಡ್ಡಿಗೆ ಸಾಲ ಪಡೆದುಕೊಂಡಿದ್ದರು. ರಂಗನಾಥ್ ಅವರು ಪಡೆದ ₹23 ಲಕ್ಷ ಹಣವನ್ನ ಬಡ್ಡಿ ಸಮೇತ ಆರೋಪಿ ಮಂಜುನಾಥ್‌ಗೆ ಹಿಂದಿರುಗಿಸಿದ್ದರು.
ಆದರೆ, ಆರೋಪಿ ಮಂಜುನಾಥ್, “ಮೀಟರ್ ಬಡ್ಡಿಗೆ ಹಣ ನೀಡಿದ್ದೇನೆ. ಇನ್ನು ₹5 ಲಕ್ಷ ಹಣ ಕೊಡಬೇಕು” ಎಂದು ಪಟ್ಟು ಹಿಡಿದಿದ್ದನು. ರಂಗನಾಥ್ ಹಣ ನೀಡಲು ನಿರಾಕರಿಸಿದ್ದನು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕನ್ನಡ ನಾಮಫಲಕ ಬಳಸದ 18 ಉದ್ದಿಮೆಗಳು ತಾತ್ಕಾಲಿಕ ಬಂದ್
ಆರೋಪಿ ಮಂಜುನಾಥ್ ಈ ಸಾಲದ ಹಣವನ್ನು ವಸೂಲಿ ಮಾಡಿಕೊಡಲು ಸೈಕಲ್ ರವಿ ಸಹಚರನಾದ ಉಮೇಶ್ಗೆ ಹೇಳಿದ್ದನು. ಉಮೇಶ್ ತನ್ನ ಸಹಚರನಾದ ಸುರೇಶ್ ಜತೆಗೆ ಮೀಟರ್ ಬಡ್ಡಿ ವಸೂಲಿಗೆ ಮುಂದಾಗಿದ್ದನು. ರೌಡಿಶೀಟರ್ ಉಮೇಶ್ ಹಾಗೂ ಸುರೇಶ್ ರಂಗನಾಥ್ಗೆ ಹಣ ಕೊಡುವಂತೆ ಜೀವ ಬೆದರಿಕೆ ಹಾಕಿದ್ದಾರೆ. ಹೊಸಕೆರೆಹಳ್ಳಿ ಉಮೇಶ್ ರಂಗನಾಥನಿಗೆ ಅವಾಜ್ ಹಾಕಿರುವ ಆಡಿಯೋ ವೈರಲ್ ಆಗಿದೆ.
ಈ ವಿಚಾರ ತಿಳಿದ ಸಿಸಿಬಿ ಪೊಲೀಸರು ಉಮೇಶ್, ಸುರೇಶ್ ಹಾಗೂ ಮಂಜುನಾಥ್ ಅವರನ್ನು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿ ಆರೋಪಿಗಳ ವಿರುದ್ಧ ಆರ್ಆರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.