ರಾಜ್ಯ ರಾಜಧಾನಿ ಬೆಂಗಳೂರು ಎಷ್ಟೇ ಅಭಿವೃದ್ಧಿಯಾಗುತ್ತ ಮುಂದುವರೆಯುತ್ತಿದ್ದರು. ಬಾಲ್ಯ ವಿವಾಹ ಪ್ರಕರಣಗಳು ನಡೆಯುತ್ತಲೇ ಇವೆ. ಇದೀಗ, ಬಾಲಕಿಯ ಪೋಷಕರಿಗೆ ಹೇಳದೆ ದೊಡ್ಡಪ್ಪ ಮದುವೆ ಮಾಡಿಸಿದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ ನಡೆದಿದೆ.
24 ವರ್ಷದ ಯುವಕನೊಂದಿಗೆ 14 ವರ್ಷದ ಬಾಲಕಿಯನ್ನು ಆಕೆಯ ಪೋಷಕರಿಗೆ ಹೇಳದೆ ದೊಡ್ಡಪ್ಪ ಮದುವೆ ಮಾಡಿಸಿದ್ದಾರೆ. ಸದ್ಯ ಈ ಬಗ್ಗೆ ಬಾಲಕಿಯ ತಾಯಿ ಬಾಲಕಿಯ ದೊಡ್ಡಪ್ಪ, ದೊಡ್ಡಮ್ಮ ಹಾಗೂ ಇತರರ ವಿರುದ್ಧ ಸರ್ಜಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
“ಫೆ.15 ರಂದು 24 ವರ್ಷದ ಯುವಕನೊಂದಿಗೆ 14 ವರ್ಷದ ಬಾಲಕಿಗೆ ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ ಇವರೆಲ್ಲ ಸೇರಿ ತಂದೆ-ತಾಯಿಯಾಗಿರುವ ನಮಗೆ ಗೊತ್ತೇ ಇಲ್ಲದೆ ಮದುವೆ ಮಾಡಿಸಿದ್ದಾರೆ. ಮಗಳು ಇನ್ನೂ ಅಪ್ರಾಪ್ತೆಯಾಗಿದ್ದಾಳೆ. ನನ್ನ ಮಗಳನ್ನು ಪುಸಲಾಯಿಸಿ ಮದುವೆ ಮಾಡಿಸಿದ್ದಾರೆ. ಕೈವಾರದಲಿನ ಯಲಮ್ಮ ದೇವಾಲಯದಲ್ಲಿ ತಂದೆ ತಾಯಿಗೆ ಗೊತ್ತಿಲ್ಲದೆ ಮದುವೆ ಮಾಡಲಾಗಿದೆ” ಎಂದು ಬಾಲಕಿ ತಾಯಿ ಸರ್ಜಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
“ನನ್ನ ಮಗಳು ಅಪ್ರಾಪ್ತ ವಯಸ್ಕಳೆಂದು ಗೊತ್ತಿದ್ದರೂ ಸಹ ಬಲವಂತದಿಂದ ಮದುವೆ ಮಾಡಿದ್ದಾರೆ. ಕಾನೂನು ರೀತಿಯ ಕ್ರಮ ಜರುಗಿಸಬೇಕು” ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೀಟರ್ ಬಡ್ಡಿ ದಂಧೆ; ಸೈಕಲ್ ರವಿ ಸಹಚರರ ಬಂಧನ
“ನನ್ನ ಮಗಳು ಎಂಟನೇ ತರಗತಿಯಲ್ಲಿ ಓದುತ್ತಿದ್ದಾಳೆ. ಬಾಲಕಿಯನ್ನು ದೊಡ್ಡಪ್ಪ ದೊಡ್ಡಮ್ಮ ಪುಸಲಾಯಿಸಿಕೊಂಡು ಹಲಸಿನಕಾಯಿಪುರ ಗ್ರಾಮದ ವಿನೋದ್ ಕುಮಾರ್ ಎಂಬ 24 ವರ್ಷದ ಯುವಕನೊಂದಿಗೆ ಮದುವೆ ಮಾಡಿಸಿದ್ದಾರೆ. ಮದುವೆಗೆ ವಿನೋದ್ ಕುಮಾರ್ ತಂದೆ ಮುನಿಯಪ್ಪ, ತಾಯಿ ರತ್ನಮ್ಮ, ವಿನೋದ್ ಕುಮಾರ್, ಅಣ್ಣ ವಿಜಯ್ ಕುಮಾರ್ ಮತ್ತು ವೆಂಕಟಮ್ಮರವರು ಸೇರಿಕೊಂಡು ಈ ಮದುವೆ ಮಾಡಿದ್ದಾರೆ” ಎಂದು ದೂರಿನಲ್ಲಿ ಆರೋಪಿಸಿದ್ದಾರೆ.