ವಿದ್ಯಾರ್ಥಿ, ಯುವಜನರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ದಲಿತ ವಿದ್ಯಾರ್ಥಿ ಪರಿಷತ್‌ನ (ಡಿವಿಪಿ) ರಾಜ್ಯಮಟ್ಟದ ಸಮ್ಮೇಳನ ಫೆಬ್ರವರಿ 18ರಂದು ನಡೆಯಲಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಶ್ರೀಥಾನ್ ಪೂಜಾರಿ ತಿಳಿಸಿದ್ದಾರೆ.
ಸಮ್ಮೇಳನ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಬೆಂಗಳೂರಿನ ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್‌ನಲ್ಲಿ ಭಾನುವಾರ ಸಮ್ಮೇಳನ ನಡೆಯಲಿದೆ. ಸಮ್ಮೇಳನದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ ಎಂದು ವಿವರಿಸಿದ್ದಾರೆ.
“ದಲಿತ ವಿದ್ಯಾರ್ಥಿ ಪರಿಷತ್ ಪ್ರತಿ ವರ್ಷ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಕುರಿತು ರಾಜ್ಯಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಏರ್ಪಡಿಸುತ್ತದೆ. ಕಳೆದ ವರ್ಷವೂ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದವರಿಗೆ ಪ್ರಥಮ ಬಹುಮಾನ ₹5 ಲಕ್ಷ, ದ್ವಿತೀಯ ಬಹುಮಾನ ₹2.50 ಲಕ್ಷ, ತೃತೀಯ ಬಹುಮಾನ ₹1 ಲಕ್ಷ ಮತ್ತು ಪ್ರತಿ ಜಿಲ್ಲಾ ಮಟ್ಟದಲ್ಲಿ ರ‍್ಯಾಂಕ್ ಬಂದವರಿಗೆ ₹15,000 ಬಹುಮಾನ ನೀಡಲಾಗುತ್ತಿದೆ” ಎಂದು ಹೇಳಿದ್ದಾರೆ.
“ಸಮ್ಮೇಳನವನ್ನು ಸಚಿವ ಪ್ರಿಯಾಂಕ ಖರ್ಗೆ ಉದ್ಘಾಟಿಸಲಿದ್ದಾರೆ. ಉರಿಲಿಂಗ ಪೆದ್ದಿಮಠದ ಪೀಠಾಧಿಪತಿ ಜ್ಞಾನಪ್ರಕಾಶ ಸ್ವಾಮೀಜಿ ಅವರು ಸಾನಿಧ್ಯ ವಹಿಸುತ್ತಾರೆ” ಎಂದು ವಿವರಿಸಿದ್ದಾರೆ..
“ಸಮ್ಮೇಳನದಲ್ಲಿ ಹಿರಿಯ ಹೋರಾಟಗಾರರಾದ ಬಿ. ಗೋಪಾಲ್, ಕರ್ನಾಟಕ ಜನಶಕ್ತಿ ರಾಜ್ಯಾಧ್ಯಕ್ಷ ನೂರ್ ಶ್ರೀಧರ್, ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ. ಶಿವಶಂಕರ್ ಹಾಗೂ ಡಿವಿಪಿ ರಾಜ್ಯ ಸಂಚಾಲಕರ ಬಾಲಾಜಿ ಎಂ ಕಾಂಬಳೆ ಉಪಸ್ಥಿತ ಇರಲಿದ್ದಾರೆ” ಎಂದು ತಿಳಿಸಿದ್ದಾರೆ.