- ಅತೀಕ್ ಅಹ್ಮದ್ ಮೇಲೆ 100ಕ್ಕೂ ಹೆಚ್ಚು ಪ್ರಕರಣ
- ಏಪ್ರಿಲ್ 13ಕ್ಕೆ ಅತೀಕ್ ಪುತ್ರ ಅಸಾದ್‌ನ ಎನ್‌ಕೌಂಟರ್
ಗ್ಯಾಂಗ್‌ಸ್ಟರ್ ಹಾಗೂ ಮಾಜಿ ಸಂಸದ ಅತೀಕ್ ಅಹ್ಮದ್ ಹಾಗೂ ಅವರ ಸಹೋದರ ಖಾಲಿದ್ ಅಜೀಂ ಅಲಿಯಾಸ್ ಅಶ್ರಫ್ ಅವರನ್ನು ಶನಿವಾರ (ಏಪ್ರಿಲ್ 15) ರಾತ್ರಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಬಿಎಸ್‌ಪಿಯ ಮಾಜಿ ಶಾಸಕ ರಾಜು ಪಾಲ್ ಅವರ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಈ ಇಬ್ಬರು ಆರೋಪಿಗಳಾಗಿದ್ದರು.
ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಪುತ್ರ ಅಸಾದ್ ಹಾಗೂ ಆತನ ಸಹಚರ ಗುಲಾಮ್‌ನನ್ನು ಉತ್ತರ ಪ್ರದೇಶ ಪೊಲೀಸರು ಗುರುವಾರ (ಏಪ್ರಿಲ್ 13) ಝಾನ್ಸಿಯಲ್ಲಿ ಎನ್‌ಕೌಂಟರ್ ಮೂಲಕ ಹತ್ಯೆ ಮಾಡಿದ್ದರು.
ಗ್ಯಾಂಗ್‌ಸ್ಟರ್ ಅತೀಕ್ ಕುಟುಂಬ ಬಹುತೇಕ ಅಂತ್ಯವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅತೀಕ್ ಪತ್ನಿ ಶೈಸ್ತಾ ಪರ್ವೀನ್ ಬಂಧನಕ್ಕೆ ₹50,000 ಘೋಷಿಸಲಾಗಿದೆ. ಆಕೆ ತಲೆಮರೆಸಿಕೊಂಡಿದ್ದಾರೆ. ಅತೀಕ್ ಇಬ್ಬರು ಪುತ್ರಾದ ಉಮರ್ ಮತ್ತು ಅಲಿ ಈಗಾಗಲೇ ಜೈಲು ವಾಸದಲ್ಲಿದ್ದಾರೆ. ಆತನ ಮತ್ತಿಬ್ಬರು ಮಕ್ಕಳೂ ಸಹ ಪೊಲೀಸ್ ಕಣ್ಗಾವಲಿನಲ್ಲಿ ಮಕ್ಕಳ ಸಂರಕ್ಷಣೆ ಗೃಹದಲ್ಲಿದ್ದಾರೆ.
ಫೆಬ್ರವರಿ 24ರಂದು ಉಮೇಶ್ ಪಾಲ್ ಮತ್ತು ಇಬ್ಬರು ಪೊಲೀಸರ ಹತ್ಯೆ ಆರೋಪದಲ್ಲಿ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್, ಪುತ್ರ ಅಸಾದ್, ಸಹಚರರಾದ ಅರ್ಬಾಜ್, ವಿಜಯ್ ಚೌಧರಿ ಅಲಿಯಾಸ್ ಉಸ್ಮಾನ್ ಮತ್ತು ಗುಲಾಮ್‌ರನ್ನು ಹತ್ಯೆ ಮಾಡಲಾಗಿದೆ.
ಈ ಮೂಲಕ ಅತೀಕ್ ಜೊತೆಯಿದ್ದ ಆರು ಜನರನ್ನೂ ಹತ್ಯೆ ಮಾಡಲಾಗಿದೆ.
ಪ್ರಯಾಗ್‌ರಾಜ್‌ನಲ್ಲಿ ಫೆಬ್ರವರಿ 27ರಂದು ಅರ್ಬಾಸ್‌ನನ್ನು ಮೊದಲ ಬಾರಿಗೆ ಎನ್‌ಕೌಂಟರ್ ಮೂಲಕ ಹತ್ಯೆ ಮಾಡಲಾಗಿತ್ತು. ಮತ್ತೆ ಮಾರ್ಚ್ 6ರಂದು ಇಲ್ಲಿಯೇ ಉಸ್ಮಾನ್ ಎನ್‌ಕೌಂಟರ್ ನಡೆಸಲಾಗಿತ್ತು. ಏಪ್ರಿಲ್ 13ರಂದು ಅಸಾದ್ ಮತ್ತು ಗುಲಾಮ್‌ನನ್ನು ಝಾನ್ಸಿಯಲ್ಲಿ ಎನ್‌ಕೌಂಟರ್ ಮಾಡಲಾಯಿತು.
ಆದರೆ ಅತೀಕ್‌ನ ಇತರ ಸಹಚರರಾದ ಗುಡ್ಡು ಮುಸ್ಲಿಂ, ಅರ್ಮಾನ್ ಮತ್ತು ಸಾಬಿರ್ ಪರಾರಿಯಾಗಿದ್ದಾರೆ.
ಅತೀಕ್ (60) ಮತ್ತು ಅವರ ಸಹೋದರ ಅಶ್ರಫ್ನನ್ನು ಶನಿವಾರ ರಾತ್ರಿ ಪೊಲೀಸರು ತಪಾಸಣೆಗಾಗಿ ಪ್ರಯಾಗರಾಜ್‌ನಲ್ಲಿರುವ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುತ್ತಿದ್ದಾಗ ಮಾಧ್ಯಮ ಪ್ರತಿನಿಧಿಗಳ ಸೋಗಿನಲ್ಲಿ ಹೇಳಿಕೆ ಪಡೆಯುವಂತೆ ಮುಂದೆ ಬಂದ ಮೂವರು ನೇರವಾಗಿ ತಲೆಗೆ ಗುಂಡು ಹಾರಿಸಿದರು.
ರಾತ್ರಿ 10ರ ಸುಮಾರಿನಲ್ಲಿ ನಡೆದ ಈ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಉತ್ತರ ಪ್ರದೇಶದ ಎಲ್ಲ ಜಿಲ್ಲೆಗಳಲ್ಲಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ಜಾರಿಗೊಳಿಸಲಾಗಿದೆ. ಘಟನೆ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.
ಅತೀಕ್ ಮತ್ತು ಅಶ್ರಫ್ ತಮಗೆ ಜೀವ ಬೆದರಿಕೆ ಇದೆ ಎಂದು ನ್ಯಾಯಾಲಯಗಳ ಮೊರೆ ಹೋಗಿದ್ದರು.
ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಪುತ್ರ ಅಸಾದ್ ಮತ್ತು ಸಹಚರನ ಹತ್ಯೆಗೂ ಮೊದಲು ಅತೀಕ್ ಅಹ್ಮದ್ ಸುಪ್ರೀಂ ಕೋರ್ಟ್ ಕದ ತಟ್ಟಿದ್ದ. ಬಂಧನದಲ್ಲಿ ರಕ್ಷಣೆ ನೀಡುವಂತೆ ಕೋರಿದ್ದ.
ಈ ಸುದ್ದಿ ಓದಿದ್ದೀರಾ? ದೆಹಲಿ | ತಿಹಾರ್ ಜೈಲಿನಲ್ಲಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಸಹಚರನ ಹತ್ಯೆ
ತಾನು ಜೀವ ಬೆದರಿಕೆ ಎದುರಿಸುತ್ತಿರುವುದಾಗಿ ಅತೀಕ್ ಸುಪ್ರೀಂಕೋರ್ಟ್‌ನಲ್ಲಿ ಹೇಳಿದ್ದ. “ರಾಜ್ಯ ಸರ್ಕಾರ ನಿಮ್ಮ ರಕ್ಷಣೆಯ ಉಸ್ತುವಾರಿ ವಹಿಸಲಿದೆ” ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಅತೀಕ್ ಅವರ ಬಂಧನದಲ್ಲಿ ರಕ್ಷಣೆ ಒದಗಿಸುವಂತೆ ನ್ಯಾಯಾಲಯ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿತ್ತು.
ಪಾತಕಿ ಅತೀಕ್ ಮೇಲೆ ಉಮೇಶ್ ಪಾಲ್ ಕೊಲೆ ಸೇರಿದಂತೆ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.