ದಲಿತ ಕುಟುಂಬ ವಾಸವಿರುವ ಸರ್ವೇ ನಂ.28ರಲ್ಲಿ ನಾಲ್ಕು ಎಕರೆ ಆಶ್ರಯ ಯೋಜನೆಯಡಿ ದಲಿತ ಕುಟುಂಬಗಳಿಗೆ ಮಂಜೂರು ಮಾಡಬೇಕಾಗಿ ಸ್ಥಳೀಯ ದಲಿತ ಕುಟುಂಬಸ್ಥರು ಉಪ ವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಉಪ ವಿಭಾಗಾಧಿಕಾರಿಗಳನ್ನು ಭೇಟಿ ಮಾಡಿದ ತೊರೇಹಳ್ಳಿ ಗ್ರಾಮಸ್ಥರು ಹಾಗೂ ದಲಿತ ಮುಖಂಡರು, “ಸರ್ವೇ ನಂ.39 ರಲ್ಲಿನ ಒಟ್ಟು 22 ಎಕರೆ ಜಮೀನಿನಲ್ಲಿ ಎರಡು ಎಕರೆ ಸ್ಮಶಾನಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಈಗ ಆ ಸ್ಥಳವನ್ನು ನಿವೇಶನಕ್ಕೆ ಒದಗಿಸುವುದು ಸೂಕ್ತವಲ್ಲ” ಎಂದು ವಾಸ್ತವ ಸ್ಥಿತಿ ಗತಿ ವಿವರಿಸಿದರು.
“ಆಶ್ರಯ ಯೋಜನೆಗೆ ಮೀಸಲಿಡಲು ತೊರೇಹಳ್ಳಿ ಗ್ರಾಮದಲ್ಲಿ ಈಗಾಗಲೇ ಸರ್ವೇ ನಂ.39ರಲ್ಲಿ ಎರಡು ಎಕರೆ ಜಮೀನು ಆಯ್ಕೆ ಮಾಡಿ ಅಳತೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಆದರೆ ವಾಸಕ್ಕೆ ಯೋಗ್ಯವಲ್ಲದ ಈ ಜಾಗವನ್ನು ನಾವುಗಳು ಸ್ಮಶಾನಕ್ಕೆ ನೀಡುವಂತೆ ಮನವಿ ಮಾಡಿದ್ದೆವು” ಎಂದು ಹೇಳಿದರು.
“ವಾಸಕ್ಕೆ ಯೋಗ್ಯವಲ್ಲದ ಸ್ಥಳ ಕೈಬಿಟ್ಟು ಹಾಲಿ ಎ.ಕೆ ಕಾಲೋನಿ ಇರುವ ಸರ್ವೇ ನಂ.28ರಲ್ಲಿ ನಾಲ್ಕು ಎಕರೆ ಜಮೀನಿನಲ್ಲಿ ವಸತಿ ಯೋಜನೆಯಡಿ ದಲಿತ ಕುಟುಂಬಕ್ಕೆ ಮಾತ್ರ ಒದಗಿಸಿಕೊಡಬೇಕು. ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಒಕ್ಕಲೆಬ್ಬಿಸುವ ಕೆಲಸ ಮಾಡದೆ ಸರ್ವೇ ನಂ.28ರಲ್ಲಿ ನಾಲ್ಕು ಎಕರೆ ನಿವೇಶನಕ್ಕೆ ಹಾಗೂ ಸರ್ವೇ ನಂ.39ರಲ್ಲಿ ಎರಡು ಎಕರೆ ಸ್ಮಶಾನಕ್ಕೆ ಮಂಜೂರು ಮಾಡಬೇಕು” ಎಂದು ಮನವಿ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಮಗ-ಸೊಸೆಯಿಂದಲೇ ಗೃಹ ಬಂಧನದಲ್ಲಿದ್ದ ವೃದ್ಧೆ ರಕ್ಷಣೆ
ಈ ಸಂದರ್ಭದಲ್ಲಿ ದಲಿತ ಮುಖಂಡರುಗಳಾದ ಕಿಟ್ಟದಕುಪ್ಪೆ ನಾಗರಾಜ್, ಚಂದ್ರು, ರಘು, ರಾಮಕೃಷ್ಣ, ನಾಗಣ್ಣ, ಚಂದ್ರಯ್ಯ, ಲಕ್ಷ್ಮೀಪತಿ, ರಂಗನಾಥ್, ರಾಮಸ್ವಾಮಿ, ಬೇವಿನಗುಡ್ಡಯ್ಯ, ನಾಗರಾಜು, ಮಂಜುನಾಥ್ ಸೇರಿದಂತೆ ಇತರರು ಇದ್ದರು.