ಸಕಾಲಕ್ಕೆ ಮಳೆಯಾಗದ ಕಾರಣ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿದಿದ್ದು, ಜನರು ನೀರಿಲ್ಲದೇ ಪರದಾಡುವಂತಾಗಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ಇದೀಗ ನಗರದಲ್ಲಿ ನೀರಿನ ಕೊರತೆ ಹೆಚ್ಚಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಟ್ಯಾಂಕರ್ ಮಾಲೀಕರು ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ.
ಬೆಂಗಳೂರಿನ ಹಲವೆಡೆ ಅಂತರ್ಜಲ ಮಟ್ಟ ಕುಸಿದ ಕಾರಣ ನೀರಿನ ಸಮಸ್ಯೆ ಎದುರಾಗಿದೆ. ಇನ್ನು ಕೆ.ಆರ್‌ಪುರಂ ಸೇರಿದಂತೆ ಹಲವೆಡೆ ಜಲಮಂಡಳಿ ಕಾವೇರಿ ನೀರನ್ನು 15 ದಿನಕ್ಕೊಮ್ಮೆ ಬಿಡುತ್ತಿದೆ. ಇದರಿಂದ ಜನರು ನೀರಿಲ್ಲದೇ, ಎರಡು ದಿನಕ್ಕೊಮ್ಮೆ ಟ್ಯಾಂಕರ್ ನೀರು ಹಾಕಿಸಿಕೊಳ್ಳುವಂತಾಗಿದೆ. ಈ ಹಿಂದೆ ₹500-₹600 ಇದ್ದ ಟ್ಯಾಂಕರ್ ನೀರಿನ ದರ ಇದೀಗ ₹900 ಗೆ ಏರಿಕೆಯಾಗಿದೆ.
ಇಂದಿರಾನಗರ, ರಾಜಾಜಿನಗರ, ಸುಂಕದಕಟ್ಟೆಯಲ್ಲಿ ಹೆಚ್ಚು ಬೆಲೆಗೆ ನೀರು ಮಾರಾಟ ಮಾಡಲಾಗುತ್ತಿದೆ. 20 ಸಾವಿರ ಲೀಟರ್ ನೀರಿಗೆ ₹6,500 ಪಡೆಯುತ್ತಿದ್ದಾರೆ. 5 ಸಾವಿರ ಲೀಟರ್ ನೀರಿಗೆ 1000 ದಿಂದ 6 ಸಾವಿರ ವರೆಗೆ ಟ್ಯಾಂಕರ್ ನೀರು ಮಾರಾಟ ಮಾಡಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ತಂಗಿಯ ಎಂಗೇಜ್ಮೆಂಟ್‌ಗೆ ಬರಲಿಲ್ಲವೆಂದು ಪತ್ನಿಗೆ ಚಾಕು ಇರಿದ ದುಷ್ಟ ಪತಿ
ಈ ಹಿಂದೆ ಬಿಬಿಎಂಪಿ 5 ಸಾವಿರ ಲೀಟರ್ ಟ್ಯಾಂಕರ್ಗೆ ₹540, 12 ಸಾವಿರ ಲೀಟರ್ ನೀರಿಗೆ ₹1,000 ನಿಗದಿ ಮಾಡಿತ್ತು. ಆದರೆ, ಬೇಸಿಗೆ ಆರಂಭಕ್ಕೂ ಮುನ್ನವೇ ಟ್ಯಾಂಕರ್ ಮಾಲೀಕರು ಜನರಿಂದ ಹಣ ವಸೂಲಿಗೆ ಮುಂದಾಗಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ಪಾಲಿಕೆಗೆ ದೂರು ಬಂದ ಹಿನ್ನೆಲೆ, ನೀರು ಪೂರೈಸುವ ಖಾಸಗಿ ಟ್ಯಾಂಕರ್ ಮಾಲೀಕರಿಗೆ ದರ ನಿಗದಿ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ. ದರ ನಿಗದಿ ಮಾಡಲು ಆಯಾ ವಲಯಗಳ ವಲಯ ಆಯುಕ್ತರಿಗೆ ಈ ಬಗ್ಗೆ ಸೂಚನೆ ನೀಡಿದೆ. ಜತೆಗೆ, ಜನರಿಂದ ಹೆಚ್ಚಿನ ಹಣ ವಸೂಲಿ ಮಾಡಿದರೇ ಅಂತಹವರ ಟ್ರೇಡ್ ಲೈಸೆನ್ಸ್ ರದ್ದು ಮಾಡಲು ಮುಂದಾಗಿದ್ದಾರೆ.