ಟಿಪ್ಪುಸುಲ್ತಾನ್ ಕಟೌಟ್ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ. ಟಿಪ್ಪುಸುಲ್ತಾನ್, ರಾಣಿ ಅಬ್ಬಕ್ಕ, ಕೋಟಿ ಚೆನ್ನಯರ ಪ್ರತಿಮೆ ಸೇರಿದಂತೆ ಎಲ್ಲ ಆದರ್ಶರ, ಮಹಾತ್ಮರ ಕಟೌಟ್, ಬ್ಯಾನರ್‌ಗಳಿಗೆ ಡಿವೈಎಫ್ಐ ಕಾರ್ಯಕರ್ತರು ಕಾವಲು ನಿಂತು ಕಾಯುತ್ತಾರೆ ಎಂದು ಇಮ್ತಿಯಾಜ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿವೈಎಫ್‌ಐ ರಾಜ್ಯ ಸಮ್ಮೇಳನದ ಪ್ರಯುಕ್ತ ಟಿಪ್ಪುಸುಲ್ತಾನ್ ಕಟೌಟ್ ಹಾಕಿರುವುದನ್ನು ತೆರವುಗೊಳಿಸುಂತೆ ಕೋಣಾಜೆ ಪೊಲೀಸರು ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.
“ಕೋಣಾಜೆ ಠಾಣಾ ವ್ಯಾಪ್ತಿಯ ಹರೇಕಳದಲ್ಲಿ ಸಮ್ಮೇಳನದ ಧ್ವಜ, ಬ್ಯಾನರ್ ಹಾಗೂ ಟಿಪ್ಪುಸುಲ್ತಾನ್ ಕಟೌಟ್ ಅಳವಡಿಸಲಾಗಿತ್ತು. ಸಮ್ಮೇಳನದ ಅಂಗವಾಗಿ ಸ್ವಾತಂತ್ರ್ಯ ಸೇನಾನಿಗಳ, ಸಮಾಜ ಸುಧಾರಕರ ಕಟೌಟ್, ಫ್ಲೆಕ್ಸ್ ಹಾಕಲಾಗಿದೆ. ಹರೇಕಳ ಕಚೇರಿ ಬಳಿ ಕಾರ್ಯಕರ್ತರು ಟಿಪ್ಪುಸುಲ್ತಾನ್ ಕಟೌಟ್ ಅಳವಡಿಸಿದ್ದರು. ಅನುಮತಿ ಇಲ್ಲದೆ ಅಳವಡಿಸಿರುವುದರಿಂದ ಟಿಪ್ಪು ಕಟೌಟ್ ತೆರವುಗೊಳಿಸುವಂತೆ ನಿನ್ನೆ ಕೋಣಾಜೆ ಪೊಲೀಸ್ ಠಾಣಾಧಿಕಾರಿ ನೋಟಿಸ್ ನೀಡಿದ್ದಾರೆ” ಎಂದು ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಬಿ ಕೆ ಇಮ್ತಿಯಾಜ್ ಈ ದಿನ.ಕಾಮ್‌ಗೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಗಳೂರು ಪ್ರಕರಣ | ಬಿಜೆಪಿ ಶಾಸಕರ ಮೇಲಿನ ಎಫ್‌ಐಆರ್ ಖಂಡಿಸಿ ರಸ್ತೆ ತಡೆ: ಸಂಘಪರಿವಾರದ ಕಾರ್ಯಕರ್ತರ ಬಂಧನ
“ಟಿಪ್ಪುಸುಲ್ತಾನ್ ಕಟೌಟ್, ಬ್ಯಾನರ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲು ಸರ್ಕಾರದ ನಿಷೇಧ ಇದೆಯೇ?, ಯಾವ ಸರ್ಕಾರ ನಿಷೇಧ ಹೇರಿದ್ದು?. ಕರ್ನಾಟಕದಲ್ಲಿ ಸರ್ಕಾರ ಬದಲಾಗಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಬಿಜೆಪಿ ಸರ್ಕಾರವೇ ಇದೆಯೇ? ಕಾಂಗ್ರೆಸ್ ಸರ್ಕಾರದ ಕಾಲದಲ್ಲೂ ಪೊಲೀಸರು ಸಂಘಿ ಮನೋಭಾವನೆಯಲ್ಲಿ ಕೆಲಸ ಮಾಡುತ್ತಿದ್ದಾರೆ” ಎಂದು ಇಮ್ತಿಯಾಜ್ ಟೀಕಿಸಿದರು.