- ಪರೋಕ್ಷವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಟೀಕೆ
- ಶೆಟ್ಟರ್ ಅಂತಹ ದೊಡ್ಡ ನಾಯಕರ ಅವಶ್ಯಕತೆ ನಮ್ಮ ಪಕ್ಷಕ್ಕಿಲ್ಲ
ನಾನು ಹಿಂದೆ ಬಿಜೆಪಿಯಲ್ಲಿ ನಡೆಯುತ್ತಿರುವ ಡಿಎನ್‌ಎ ಚಟುವಟಿಕೆ ಬಗ್ಗೆ ಮಾತನಾಡಿದ್ದೆ. ಜಗದೀಶ್ ಶೆಟ್ಟರ್ ಅವರಂತವರೇ ರಾಜೀನಾಮೆ ತೀರ್ಮಾನ ಮಾಡಿದ್ದಾರೆಂದರೆ ಆ ‘ಡಿಎನ್ಎ’ ಅಲ್ಲಿಯ ಚಟುವಟಿಕೆಗೆ ಪೂರಕವಾಗಿ ಹೇಗೆ ಕೆಲಸ ಮಾಡಿರಬಹುದೆಂದು ಊಹಿಸಿ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಪರೋಕ್ಷವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉದ್ದೇಶಿಸಿ ವಾಗ್ದಾಳಿ ನಡೆಸಿದರು.
ಧರ್ಮಸ್ಥಳಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, “ಜಗದೀಶ್ ಶೆಟ್ಟರ್ ರಾಜೀನಾಮೆ ವಿಚಾರ ಅವರ ಪಕ್ಷದ ಆಂತರಿಕ ಬೆಳವಣಿಗೆ. ಅವರು ಅನುಭವಸ್ಥ ರಾಜಕಾರಣಿ” ಎಂದರು.
ಶೆಟ್ಟರ್ ಅವರು ನಿಮ್ಮನ್ನು ಸಂಪರ್ಕ ಮಾಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, “ಇಲ್ಲ ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ಅಂತಹ ದೊಡ್ಡ ನಾಯಕರ ಅವಶ್ಯಕತೆ ನಮ್ಮ ಪಕ್ಷಕ್ಕೆ ಇಲ್ಲ. ಸಣ್ಣವರು ಯಾರಾದರೂ ಬಂದರೆ ಸೇರಿಸಿಕೊಳ್ಳುತ್ತೇವೆ. ಯಾಕೆಂದರೆ ನಮ್ಮದು ಸಣ್ಣ ಪಕ್ಷ. ಅಂತ ದೊಡ್ಡ ನಾಯಕರನ್ನು ನಾವು ನಿರೀಕ್ಷೆ ಇಟ್ಟುಕೊಳ್ಳುವುದಿಲ್ಲ. ಅಂತಹ ದೊಡ್ಡ ನಾಯಕರ ಬಗ್ಗೆ ಯಾವುದೇ ನಿರೀಕ್ಷೆಯಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೋದಿಯವರೇ, ನಿಮ್ಮ ಯಾವುದೇ ಕುತಂತ್ರಕ್ಕೂ ನಾನು ಅಂಜಲಾರೆ: ರಾಹುಲ್ ಗಾಂಧಿ
ಮಂಜುನಾಥ ಸ್ವಾಮಿಯ ದರ್ಶನ ಪಡೆದ ಎಚ್ ಡಿ ಕುಮಾರಸ್ವಾಮಿ, ಬಳಿಕ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಬೆಂಗಳೂರು ಬೊಮ್ಮನಹಳ್ಳಿ ಕ್ಷೇತ್ರದ ನಾರಾಯಣ ರಾಜು, ವಿಧಾನ ಪರಿಷತ್ ಶಾಸಕ ಎಸ್ ಎಲ್ ಭೋಜೇಗೌಡ, ಜೆಡಿಎಸ್ ರಾಜ್ಯ ವಕ್ತಾರ ಹಾಗೂ ಮಾದ್ಯಮ ಸಂಚಾಲಕ ಎಂ ಬಿ ಸದಾಶಿವ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಜೈನ್, ತಾಲೂಕು ನಿಯೋಜಿತ ಅಧ್ಯಕ್ಷ ಶ್ರೀನಿವಾಸ ಗೌಡ ಪಟ್ರಮೆ, ಪ್ರಮುಖರಾದ ಎಚ್ ಎನ್ ನಾಗರಾಜ್, ರಾಮ ಆಚಾರಿ, ಶಾಹಿದ್ ಪಾದೆ ಹಾಜರಿದ್ದರು.