ಸ್ಯಾಂಡಲ್‍ವುಡ್ ನಾಯಕ ನಟ ಧ್ರುವ ಸರ್ಜಾ ಸೇರಿದಂತೆ ಮಾರ್ಟಿನ್ ಚಿತ್ರ ತಂಡವಿದ್ದ ವಿಮಾನವು ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಸದ್ಯ ಚಿತ್ರತಂಡ ಸೇರಿದಂತೆ ವಿಮಾನ ಪ್ರಯಾಣಿಕರೆಲ್ಲ ಸುರಕ್ಷಿತವಾಗಿ ವಿಮಾನ ನಿಲ್ದಾಣ ತಲುಪಿದ್ದಾರೆ.
ಅಂತಿಮ ಚಿತ್ರೀಕರಣದಲ್ಲಿದ್ದ ಮಾರ್ಟಿನ್ ಚಿತ್ರತಂಡವು ಸೋಮವಾರ ಸಂಜೆ ಹಾಡಿನ ಚಿತ್ರೀಕರಣಕ್ಕಾಗಿ ದೆಹಲಿ ವಿಮಾನ ನಿಲ್ದಾಣದಿಂದ ಶ್ರೀನಗರ ವಿಮಾನ ನಿಲ್ದಾಣಕ್ಕೆಗೆ ಇಂಡಿಗೋ ವಿಮಾನದಲ್ಲಿ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಹವಾಮಾನ ವೈಪರೀತ್ಯದಿಂದ ವಿಮಾನವನ್ನು ಲ್ಯಾಂಡಿಂಗ್ ಮಾಡಲು ಸಾಧ್ಯವಾಗದೇ ಪೈಲಟ್ ಪರದಾಡಿದ್ದಾರೆ.
ಸೀಟುಗಳು ನಡುಗಿದೆ, ಪ್ರಯಾಣಿಕರು ಗಾಬರಿ ಆಗಿದ್ದಾರೆ. ಕೊನೆಗೆ ಪೈಲಟ್‍ನ ಸಮಯ ಪ್ರಜ್ಞೆಯಿಂದ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಘಟನೆಯ ಬಳಿಕ ಮಾರ್ಟಿನ್ ಚಿತ್ರತಂಡವು ವಿಮಾನ ಇಳಿಯುವ ಸಂದರ್ಭದಲ್ಲಿಯೇ ವಿಡಿಯೋ ಮಾಡಿಕೊಂಡು ವಿಮಾನದಲ್ಲಿ ಎದುರಾಗಿದ್ದ ಕೆಟ್ಟ ಸಂದರ್ಭವನ್ನು ವಿವರಿಸಿ ಮರು ಜನ್ಮ ಸಿಕ್ಕಿದೆ ಎಂದಿದೆ. ನನ್ನ ಜೀವಮಾನದಲ್ಲಿಯೇ ವಿಮಾನದಲ್ಲಿ ಮೊದಲ ಬಾರಿ ಅತ್ಯಂತ ಕೆಟ್ಟ ಅನುಭವವಾಯಿತು. ಸದ್ಯ ನಾವು ಸುರಕ್ಷಿತವಾಗಿದ್ದೇವೆ. ಥ್ಯಾಂಕ್ ಗಾಡ್, ಜೈ ಆಂಜನೇಯ ಎಂದು ಧ್ರುವ ಸರ್ಜಾ ಹೇಳಿದ್ದು, ಇದಕ್ಕೆ ಮಾರ್ಟಿನ್ ತಂಡವೂ ದನಿಗೂಡಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತವನ್ನು ಗೆಲ್ಲಿಸಿದ ಬಡವರ ಮಕ್ಕಳ ಬೆರಗಿನ ಆಟ
ಈ ವಿಡಿಯೋದಲ್ಲಿ ಚಿತ್ರದ ನಿರ್ದೇಶಕ ಎ ಪಿ ಅರ್ಜುನ್, ನಾಯಕ ನಟಿ ಅನ್ವೇಶಿ ಜೈನ್, ನೃತ್ಯ ಸಂಯೋಜಕ ಇಮ್ರಾನ್ ಸರ್ಧಾರಿಯಾ ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಇದ್ದಾರೆ. ಈ ಬಗ್ಗೆ ನಟ ಧ್ರುವ ಸರ್ಜಾ ಸಹ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮೊದಲ ಬಾರಿಗೆ ಸಾವನ್ನು ಎದುರಿಸಿ ಮತ್ತೆ ಜೀವ ಸಿಕ್ಕಂತಾಗಿದೆ. ಇದು ನನ್ನ ತಂದೆ ತಾಯಿಯರ, ನನ್ನ ವಿಐಪಿಗಳ ಮತ್ತು ನನ್ನ ದೇವರು ಚಿರು ಅಣ್ಣನ ಅವರ ಸಂಪೂರ್ಣ ಆಶೀರ್ವಾದದ ಫಲ. ಇದು ಪುನರ್ಜನ್ಮವಾಗಿದೆ. ನಮಗೆಲ್ಲರಿಗೂ ಜೀವನವನ್ನು ಪೂರ್ಣವಾಗಿ ಬದುಕಲು ಅವಕಾಶ ಮತ್ತೆ ಸಿಕ್ಕಿದೆ. ಜೈ ಆಂಜನೇಯ ಎಂದು ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಪೋಸ್ಟ್ ಮಾಡಿದ್ದಾರೆ.
ಉದಯ್ ಕೆ ಮೆಹ್ತಾ ನಿರ್ಮಾಣದ ‘ಮಾರ್ಟಿನ್’ ಸಿನಿಮಾ ಕಳೆದೆರಡು ವರ್ಷಗಳ ಹಿಂದೆ ಸೆಟ್ಟೇರಿದ್ದು, ಬಹಳ ಅದ್ಧೂರಿಯಾಗಿ ಮೂಡಿ ಬರುತ್ತಿದೆ. 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾದಲ್ಲಿ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ.

