ಬಯಲುಸೀಮೆಯ ಜಿಲ್ಲೆಗಳಿಗೆ ಹರಿಸುತ್ತಿರುವ ತ್ಯಾಜ್ಯ ನೀರಿನ ಶುದ್ದೀಕರಣ, ನೀರಾವರಿ ಯೋಜನೆಗಳನ್ನು ಜಾರಿಗೊಳಿಸದಿದ್ದಲ್ಲಿ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಕ್ಷೇತ್ರದೊಳಗೆ ಓಡಾಡದಂತೆ ನಿರ್ಭಂದ ಹೇರಲು ಜನಜಾಗೃತಿ ಮೂಡಿಸಲಾಗುವುದು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆರ್. ಆಂಜನೇಯರೆಡ್ಡಿ ಎಚ್ಚರಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಸಿ ಹಾಗೂ ಎಚ್‌ಎನ್ ವ್ಯಾಲಿ ನೀರಿನಲ್ಲಿ ಐಐಎಸ್‌ಸಿ ವರದಿಯಲ್ಲಿ ಉಲ್ಲೇಖಿಸಿರುವಂತೆ ಅಪಾಯಕಾರಿಯಾದ ಯುರೇನಿಯಂ ಇದೆ. 3ನೇ ಹಂತದ ಸಂಸ್ಕರಣೆ ಮಾಡಿಯೇ ಬಯಲು ಸೀಮೆ ಜಿಲ್ಲೆಗಳಿಗೆ ನೀರನ್ನು ಹರಿಸಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಗೆ ವರದಿ ನೀಡಿದ್ದರೂ, ಉಡಾಫೆಯಿಂದ 2ನೇ ಹಂತದ ಸಂಸ್ಕರಣೆ ಸಾಕು ಎಂದು ಹರಿಸಲು ಮುಂದಾಗಿರುವುದು ನೋವಿನ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜನಪ್ರತಿನಿಧಿಗಳು ಈ ವಿಚಾರದಲ್ಲಿ ಕೋಲೆಬಸವನ ರೀತಿ ವರ್ತಿಸುತ್ತಿದ್ದಾರೆ. 3ನೇ ಹಂತದ ಶುದ್ಧೀಕಣಕ್ಕೆ ಸಪ್ಲಿಮೆಂಟರಿ ಬಜೆಟ್‌ನಲ್ಲಿ ಅಗತ್ಯ ಅನುದಾನ ಮೀಸಲಿಡಲು ಮುಖ್ಯಮಂತ್ರಿಗಳ ಮನವೊಲಿಸುವಲ್ಲಿ ಈ ಬಾರಿ ಜನಪ್ರತಿನಿಧಿಗಳು ವಿಫಲರಾದರೆ, ಪರಿಣಾಮ ಎದುರಿಸಲು ಸಿದ್ದರಾಗಿ ಎಂದು ಎಚ್ಚರಿಕೆ ನೀಡಿದರು.
ತ್ಯಾಜ್ಯ ಸಂಸ್ಕರಿತ ನೀರಿನ ಗುಣಮಟ್ಟದ ಬಗ್ಗೆ ಜಿಲ್ಲೆಯ ಜನತೆಗೆ ಆತಂಕವಿದೆ. ಜನರ ಆತಂಕ ಹೋಗಲಾಡಿಸಲು ಕಾಂಗ್ರೆಸ್ ಸರ್ಕಾರ ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಅನುದಾನ ಮಂಜೂರು ಮಾಡಲಿದೆ ಎಂಬ ಜನರಲ್ಲಿ ನಿರೀಕ್ಷೆಯನ್ನು ಹುಸಿಯಾಗಿದೆ. ಈ ನಿಟ್ಟಿನಲ್ಲಿ ಮೂರು ಜಿಲ್ಲೆಗಳ ಶಾಸಕರು ಪಕ್ಷಾತೀತವಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇಲ್ಲವಾದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇದರ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.
ಕೆ.ಸಿ ವ್ಯಾಲಿ ಮತ್ತು ಎಚ್.ಎನ್ ವ್ಯಾಲಿ ಯೋಜನೆಗಳ ಸಂಸ್ಕರಿತ ತ್ಯಾಜ್ಯ ನೀರನ್ನು ಕೇಂದ್ರ ಸರ್ಕಾರದ ಮಾನದಂಡದಂತೆ ಮೂರನೇ ಹಂತದ ಶುದ್ಧೀಕರಣ ಮಾಡಬೇಕಿದೆ. ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಖಡ್ಡಾಯವಾಗಿ 3ನೇ ಹಂತದ ಶುದ್ಧೀಕರಣಕ್ಕಾಗಿ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿತ್ತು. ಆದರೆ, ವೈಜ್ಞಾನಿಕ ಸಂಸ್ಥೆಗಳ ಶಿಫಾರಸ್ಸು ಗಾಳಿಗೆ ತೂರಿ ಅರೆ ಸಂಸ್ಕರಿತ ತ್ಯಾಜ್ಯ ನೀರನ್ನೇ ಹರಿಸಲಾಗುತ್ತಿದೆ ಎಂದು ಆರೋಪಿಸಿದರು.
ಪ್ರಸ್ತುತ ಜಿಲ್ಲೆಯ ಅಂತರ್ಜಲ ಕುಡಿಯಲು ಮಾತ್ರವಲ್ಲದೆ ಕೃಷಿಗೂ ಅಯೋಗ್ಯವಾಗಿದೆ. ಕುಡಿಯುವ ನೀರಿನ ಕೊಳವೆ ಬಾವಿಗಳ ನೀರಿನಲ್ಲಿ ಫ್ಲೋರೈಡ್ ಮತ್ತು ನೈಟ್ರೇಟ್ ಜೊತೆಗೆ ಯುರೇನಿಯಂ ಮತ್ತು ಆರ್ಸೆನಿಕ್ ಇನ್ನಿತರೆ ಅಪಾಯಕಾರಿ ಅಂಶಗಳಿರುವುದು ಸಂಶೋಧನಾ ಸಂಸ್ಥೆಗಳಿಂದಲೇ ದೃಢಪಟ್ಟಿದೆ. ಇದರಿಂದ ಜನ ಜಾನುವಾರುಗಳನ್ನು ಮಾರಣಾಂತಿಕ ಕಾಯಿಲೆಗಳಿಗೆ ದೂಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆದ್ದರಿಂದ ಮೂರು ಜಿಲ್ಲೆಗಳ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಿ ಕೆ.ಸಿ ವ್ಯಾಲಿ ಹಾಗೂ ಎಚ್.ಎನ್ ವ್ಯಾಲಿ ಸಂಸ್ಕರಿತ ನೀರಿನ 3ನೇ ಹಂತದ ಶುದ್ಧೀಕರಣಕ್ಕಾಗಿ ಅನುದಾನ ಮೀಸಲಿಡಿಸಿ, ಕೆರೆಗಳ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ ಹಾಗೂ ಎತ್ತಿನಹೊಳೆ ಯೋಜನೆಯನ್ನು ಪುನರ್ ಪರಿಶೀಲನೆ ಒಳಪಡಿಸಲು ಒತ್ತಾಯಿಸಬೇಕೆಂದು ಆಗ್ರಹಿಸಿದರು.
ರಾಜ್ಯದ ಜಿಡಿಪಿಯಲ್ಲಿ ಹೆಚ್ಚು ಕೊಡುಗೆ ನೀಡುತ್ತಿರುವ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕಳೆದ 75 ವರ್ಷಗಳಿಂದಲೂ ಒಂದು ಡ್ಯಾಂ ಆಗಲಿ, ಶಾಶ್ವತ ನೀರಾವರಿ ಯೋಜನೆಗಳನ್ನಾಗಲಿ ತಂದಿಲ್ಲ. ಇಷ್ಟು ಕಾಲ ಆಡಳಿತ ನಡೆಸಿದ ಎಲ್ಲ ಸರ್ಕಾರಗಳು ಮೋಸ ಮಾಡುತ್ತಲೇ ಬಂದಿವೆ. ಈ ನಿಟ್ಟಿನಲ್ಲಿ ನೀರಾವರಿ ವಂಚಿತ ಮೂರು ಜಿಲ್ಲೆಗಳನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸುವ ಮೂಲಕವಾದರೂ ಶಾಪ ವಿಮೋಚನೆಯಾಗಲು ಅವಕಾಶ ಮಾಡಿಕೊಡಿ ಎಂದು ಆರ್.ಆಂಜನೇಯ ರೆಡ್ಡಿ ಆಕ್ರೋಶ ಹೊರಹಾಕಿದರು.
ಸುದ್ದಿಗೋಷ್ಠಿಯಲ್ಲಿ ಸುಷ್ಮಾ ಶ್ರೀನಿವಾಸ್, ಕುಮಾರ್, ಕಾಮ್ರೆಡ್ ಲಕ್ಷ್ಮಯ್ಯ, ರಾಮು, ಶಿವಣ್ಣ, ನವೀನ್, ಲೋಕೇಶ್‌ಗೌಡ, ಜೀವಿಕ, ರತ್ನಮ್ಮ, ನಾರಾಯಣಸ್ವಾಮಿ ಇತರರು ಇದ್ದರು.