ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎಂಬ ಕೂಗು ಆಗಾಗ ಕ್ಷೀಣವಾಗಿಯಾದರೂ ಕೇಳಿಸುತ್ತಿದೆ. ದಶಕಗಳಿಂದ ಜಿಲ್ಲೆಯಲ್ಲಿ ಆರಿಸಿ ಬರುತ್ತಿರುವ ಶಾಸಕರು, ಸಂಸದರು ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎಂದು ಸರ್ಕಾರಕ್ಕೆ ಒತ್ತಡ ತಂದು ಹೋರಾಟ ನಡೆಸಿದ ಉದಾಹರಣೆ ಇಲ್ಲ. ಅವರ ಹೋರಾಟ ಏನಿದ್ದರೂ ಹಿಂದೂ-ಮುಸ್ಲಿಂ-ಕ್ರೈಸ್ತರ ನಡುವೆ ಕಿಡಿ ಹಚ್ಚುವುದಕ್ಕೆ ಮಾತ್ರ ಸೀಮಿತ
ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆ ಶತಮಾನದಿಂದಲೂ ಶೈಕ್ಷಣಿಕ ಸಾಧನೆಗೆ ಹೆಸರಾದ ನಾಡು. ಹಲವು ದಶಕಗಳ ಕಾಲ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶ ಬಂದಾಗ ಇವೆರಡು ಜಿಲ್ಲೆಗಳು ಸತತವಾಗಿ ಮೊದಲ ಎರಡು ಸ್ಥಾನಗಳಲ್ಲಿ ಉಳಿಸಿಕೊಂಡು ಬಂದಿವೆ. ಕರಾವಳಿಯಲ್ಲಿ ಶಿಕ್ಷಣದ ಗುಣಮಟ್ಟದ ಬಗ್ಗೆ ಮಾತನಾಡುವುದಾದರೆ ಖಾಸಗಿ ಶಾಲೆಗಳು ಮಾತ್ರವಲ್ಲ, ಸರ್ಕಾರಿ ಶಾಲೆಗಳ ಗುಣಮಟ್ಟವೂ, ಮೂಲಸೌಕರ್ಯವೂ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತಮವಾಗಿದೆ.
ಇತ್ತೀಚಿನ ಎರಡು ಮೂರು ದಶಕಗಳಲ್ಲಿ ಕರಾವಳಿಯಲ್ಲಿ ಹತ್ತಾರು ಹೊಸ ಶಿಕ್ಷಣ ಸಂಸ್ಥೆಗಳು ಉದಯಿಸಿವೆ. ಪ್ರಾಥಮಿಕ ಶಿಕ್ಷಣದಿಂದ ಶುರುವಾಗಿ ಉನ್ನತ ಶಿಕ್ಷಣದವರೆಗೂ ರಾಜ್ಯ ಮಾತ್ರವಲ್ಲ ದೇಶದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಉನ್ನತ ಶಿಕ್ಷಣದ ಹಬ್ ಎನಿಸಿರುವ ಉಡುಪಿಯ ಮಣಿಪಾಲ ಯುನಿವರ್ಸಿಟಿಗೆ ಹೋದರೆ ಅದು ಬೇರೆಯದೇ ದೇಶ ಅನ್ನಿಸುವಂತಿದೆ. ಮೂಲಭೂತ ಸೌಕರ್ಯ, ಸುಸಜ್ಜಿತ ಕಾಲೇಜು ಕಟ್ಟಡಗಳು, ಹಾಸ್ಟೆಲ್‌ಗಳು ಅಂತಾರಾಷ್ಟ್ರೀಯ ಗುಣಮಟ್ಟದಿಂದ ಗಮನ ಸೆಳೆಯುತ್ತಿವೆ.
ಮಂಗಳೂರಿನಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಮಿಷನರಿಗಳು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು ಈಗಲೂ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಮಂಗಳೂರಿನ ಕ್ರಿಶ್ಚಿಯನ್ ವಿದ್ಯಾಸಂಸ್ಥೆಗಳಿಗೆ ಅದರದೇ ಅದ ಪ್ರತಿಷ್ಠೆ ಇದೆ. ಕಾನ್ವೆಂಟ್ ಶಿಕ್ಷಣದ ಮೋಹಕ್ಕೆ ಒಳಗಾದವರಲ್ಲಿ ಹಿಂದು ಮುಸ್ಲಿರೆಲ್ಲರೂ ಇದ್ದಾರೆ. ಕಟ್ಟಾ ಹಿಂದುತ್ವವಾದಿಗಳೂ ತಮ್ಮ ಮಕ್ಕಳನ್ನು ಕಾನ್ವೆಂಟ್ ಗೆ ಸೇರಿಸಿ ಗುಣಮಟ್ಟದ ಶಿಕ್ಷಣ ಕೊಡಿಸಿ ಎಂಜಿನಿಯರ್, ಡಾಕ್ಟರ್ ಮಾಡಿದ್ದಾರೆ. ಜಿಲ್ಲೆಯ ನೂರಾರು ತಜ್ಞ ವೈದ್ಯರು, ಎಂಜಿನಿಯರ್‌ಗಳು, ಉದ್ಯಮಿಗಳು, ಅಕೌಂಟೆಂಟ್‌ಗಳು, ಅತ್ಯುತ್ತಮ ಶಿಕ್ಷಕರು, ಪ್ರೊಫೆಸರ್‌ಗಳನ್ನು, ಕ್ರೀಡಾಪಟುಗಳನ್ನು ನಾಡಿಗೆ ನೀಡಿದ ಮಂಗಳೂರಿನ ಶಿಕ್ಷಣ ಸಂಸ್ಥೆಗಳಲ್ಲಿ ಕ್ರೈಸ್ತ ಸಂಸ್ಥೆಗಳ ಕೊಡುಗೆ ದೊಡ್ಡದಿದೆ.
ಆದರೆ, ಇಂತಹ ಸಾಮರಸ್ಯ, ಸಹಬಾಳ್ವೆಯ ಸಂದೇಶ ಸಾರಿದ್ದ, ಶೈಕ್ಷಣಿಕ ಸಾಧನೆಯ ಉತ್ತುಂಗದಲ್ಲಿರುವ ಎರಡು ಜಿಲ್ಲೆಗಳು ಇತ್ತೀಚೆಗೆ ಕೆಟ್ಟ ಘಟನೆಗಳಿಗೆ ಸಾಕ್ಷಿಯಾಗಿದೆ. ಇಡೀ ದೇಶಕ್ಕೆ ಹಿಜಾಬ್ ವಿವಾದ ತಲುಪಿಸಿದ ಉಡುಪಿ, ಮಂಗಳೂರಿನವರು ಬಹಳ ಸಂಕುಚಿತ ಜನ ಎಂಬ ತೀರ್ಮಾನಕ್ಕೆ ಬರುವಂತಾಗಿದೆ. ಇಲ್ಲಿನ ಜನ ಬುದ್ದಿವಂತರು, ಸುಶಿಕ್ಷಿತರು, ಪ್ರಜ್ಞಾವಂತರು ಆಗಿದ್ದೂ ಕೋಮುವಾದವನ್ನು ಬೆಂಬಲಿಸುತ್ತಿದ್ದಾರೆ ಎಂಬುದೇ ಅಚ್ಚರಿಯ ಸಂಗತಿ. ಅರ್ಧಕ್ಕೆ ಶಿಕ್ಷಣವನ್ನು ಮೊಟಕುಗೊಳಿಸಿದ ಬಡ ಕುಟುಂಬದ ಮಕ್ಕಳನ್ನು ಇಲ್ಲಿನ ಕೋಮುವಾದಿ ರಾಜಕಾರಣಿಗಳು ಧರ್ಮ, ದೇವರು, ಹಿಂದೂ- ಮುಸ್ಲಿಂ ಹೆಸರಿನಲ್ಲಿ ತಲೆ ಕೆಡಿಸಿ ಅವರನ್ನು ಬೀದಿ ಹೆಣವಾಗಿಸುತ್ತಿದ್ದಾರೆ. ಉಳ್ಳವರ ಮಕ್ಕಳು ಉನ್ನತ ಶಿಕ್ಷಣ ಪಡೆದು ಅದೇ ಊರಲ್ಲಿ ಅಥವಾ ವಿದೇಶದಲ್ಲಿ ಚಂದದ ಜೀವನ ನಡೆಸುತ್ತಿದ್ದಾರೆ.
ಕರಾವಳಿಯಲ್ಲಿ ಉದ್ಯಮ ಸೃಷ್ಟಿಯಾಗುತ್ತಿಲ್ಲ, ಐಟಿ ಕಂಪನಿಗಳು ಬರುತ್ತಿಲ್ಲ ಯಾಕೆ? ಸದಾ ಕೋಮುಸಂಘರ್ಷ ನಡೆಯುತ್ತಿದ್ದರೆ, ಬಂದ್, ಪ್ರತಿಭಟನೆಗಳು ನಡೆಯುತ್ತಿದ್ದರೆ ಯಾರು ಹೂಡಿಕೆ ಮಾಡಲು ಬಯಸುತ್ತಾರೆ? ಅಲ್ಲಿನ ಬಹುತೇಕ ಪದವೀಧರರು ಸ್ಥಳೀಯ ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಅದು ಬಿಟ್ಟರೆ ಬೇರೆ ಬೆಂಗಳೂರು, ವಿದೇಶಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಹಲವು ದಶಕಗಳವರೆಗೂ ಕರಾವಳಿ ಸಮಾಜವಾದಿ, ಕಮ್ಯುನಿಸ್ಟ್ ಸಿದ್ದಾಂತಿಗಳ ನೆಲವಾಗಿತ್ತು. ದೇಶಕ್ಕೇ ಕೊಡುಗೆಯಾಗಬಹುದಾದ ವೈಜ್ಞಾನಿಕ ಪ್ರಯೋಗ ಶಾಲೆ ತೆರೆಯಬೇಕಾಗಿದ್ದ ಊರು ಇಂದು ಕೋಮುವಾದದ ಪ್ರಯೋಗಶಾಲೆ ತೆರೆದಿದೆ. ಅಲ್ಲಿಂದ ಹೊರಬರುತ್ತಿರುವ ಉತ್ಪನ್ನ ಎಂಥದ್ದು? ಒಂದು ಜನಾಂಗದ ಯೋಚನಾ ಶಕ್ತಿಯನ್ನೇ ನಾಶ ಮಾಡುವಂಥದ್ದು. ಇದು ಈ ನೆಲದಲ್ಲಿ ಆಳಿ ಹೋದ ಸಮಾಜವಾದಿ, ಸಮಾನತೆಯ ಹರಿಕಾರರಿಗೆ ಮಾಡುತ್ತಿರುವ ಅವಮಾನವೇ ಸರಿ.
ಉಡುಪಿಯಲ್ಲಿ ಟಿಎಂಎ ಪೈ ಶಿಕ್ಷಣ ಸಂಸ್ಥೆಗಳು ಆರಂಭವಾಗಿ ಶತಮಾನ ಸಮೀಪಿಸಿದೆ. ಮಣಿಪಾಲದಲ್ಲಿ 1953ರಲ್ಲೇ ಟಿಎಂಎಪೈ ಅವರು ಕಸ್ತೂರಬಾ ವೈದ್ಯಕೀಯ ಕಾಲೇಜು (KMC) ಸ್ಥಾಪಿಸಿದ್ದರು. 1955ರಲ್ಲಿ ಮಂಗಳೂರಿನಲ್ಲೂ ಕಸ್ತೂರಬಾ ಮೆಡಿಕಲ್ ಕಾಲೇಜಿನ ಶಾಖೆ ತೆರೆದಿದ್ದರು.
ಸದ್ಯ ದಕ್ಷಿಣಕನ್ನಡ ಜಿಲ್ಲೆಯೊಂದರಲ್ಲೇ 8 ಖಾಸಗಿ ಮೆಡಿಕಲ್ ಕಾಲೇಜುಗಳಿವೆ. ಪ್ರತಿವರ್ಷ ಸಾವಿರಾರು ಪದವೀಧರರು ಹೊರಬಂದಿದ್ದಾರೆ. ಲಕ್ಷಗಟ್ಟಲೆ ಜನರಿಗೆ ಉದ್ಯೋಗ ಸಿಕ್ಕಿದೆ. ಪಕ್ಕದ ಜಿಲ್ಲೆಗಳಿಂದ ಮಾತ್ರವಲ್ಲ ಕೇರಳದಿಂದಲೂ ಇಲ್ಲಿಗೆ ಚಿಕಿತ್ಸೆಗೆ ಜನ ಬರುತ್ತಾರೆ. ಹೀಗಿರುವಾಗ ಸರ್ಕಾರಿ ಮೆಡಿಕಲ್ ಕಾಲೇಜು ಯಾಕೆ ಎಂಬ ಪ್ರಶ್ನೆ ಏಳಬಹುದು. ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎಂಬುದು ಎಷ್ಟು ಸರಿಯೋ, ದಕ್ಷಿಣ ಕನ್ನಡ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಇಲ್ಲ ಎಂಬುದು ಎಷ್ಟೇ ತಲೆ ತಗ್ಗಿಸುವ ವಿಚಾರ.
ಜಿಲ್ಲೆಯ ಬಡ ವರ್ಗದ ಮಕ್ಕಳು ಸರ್ಕಾರಿ ಸೀಟು ಪಡೆದು ಜಿಲ್ಲೆಯಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವುದು ಸಾಧ್ಯವಾಗುತ್ತಿಲ್ಲ. ಬೇರೆ ಜಿಲ್ಲೆಗಳಲ್ಲಿ ಹೋಗಿ ಕಲಿಯಬೇಕಾಗಿದೆ. ಹಣ ಬಲವಿಲ್ಲದವರು ಖಾಸಗಿ ಕಾಲೇಜಿನಲ್ಲಿ ಓದುವುದು ದೂರದ ಮಾತು. ಅಷ್ಟೇ ಅಲ್ಲ ಖಾಸಗಿ ಮೆಡಿಕಲ್ ಕಾಲೇಜು ನಡೆಸುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದುಬಾರಿಯಾಗಿದೆ. ಕೊರೋನಾ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳ ಬಿಲ್ ಕಂಡು ಹಲವರು ದಂಗಾಗಿದ್ದರು. ರೋಗಿಗಳ ಕುಟಂಬವನ್ನು ಅಮಾನವೀಯವಾಗಿ ಸುಲಿಗೆ ಮಾಡಲಾಗುತ್ತಿದೆ ಎಂಬ ದೂರುಗಳು ಮಂಗಳೂರಿನ ಆಸ್ಪತ್ರೆಯ ಆವರಣದಿಂದ ಆಗಾಗ ಬರುತ್ತಿರುತ್ತದೆ. ಜಿಲ್ಲೆಯಲ್ಲೊಂದು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾದರೆ ಅಲ್ಲಿನ ಆಸ್ಪತ್ರೆಯಲ್ಲಿ ಬಡವರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಸಿಗಬಹುದು ಎಂಬ ದೂರದ ಆಸೆ ಸ್ಥಳೀಯರದು.
ಹಾಗಾಗಿಯೇ ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎಂಬ ಕೂಗು ಆಗಾಗ ಕ್ಷೀಣವಾಗಿಯಾದರೂ ಕೇಳಿಸುತ್ತಿದೆ. ದಶಕಗಳಿಂದ ಜಿಲ್ಲೆಯಲ್ಲಿ ಆರಿಸಿ ಬರುತ್ತಿರುವ ಶಾಸಕರು, ಸಂಸದರು ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎಂದು ಸರ್ಕಾರಕ್ಕೆ ಒತ್ತಡ ತಂದು ಹೋರಾಟ ನಡೆಸಿದ ಉದಾಹರಣೆ ಇಲ್ಲ. ಹೆಚ್ಚು ಬಿಜೆಪಿ ಶಾಸಕರಿದ್ದೂ ನಾಲ್ಕು ವರ್ಷ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಆಡಳಿತ ನಡೆಸಿಯೂ ಅವರಿಗೆ ಮೆಡಿಕಲ್ ಕಾಲೇಜು ತರುವುದು ಸಾಧ್ಯವಾಗಿಲ್ಲ. ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ಸಂಸದರು ಹೆಚ್ಚು ಹೋರಾಟ ಮಾಡಿದ್ದು ಹಿಂದುತ್ವದ ತಮ್ಮ ಅಜೆಂಡ ಜಾರಿಗೊಳಿಸುವುದಕ್ಕಾಗಿ, ಹಾಗೂ ಮುಸ್ಲಿಮರ ವಿರುದ್ಧ ಜನರನ್ನು ಎತ್ತಿ ಕಟ್ಟುವುದಕ್ಕಾಗಿ. ಈಗಲೂ ಅವರ ಹೋರಾಟ ಕೋಮುದ್ವೇಷ ಹರಡುವುದಕ್ಕೇ ಸೀಮಿತವಾಗಿದೆ.

ಉಡುಪಿಯ ನೂತನ ಶಾಸಕ ಯಶ್ಪಾಲ್ ಸುವರ್ಣ ಕಳೆದ ವರ್ಷ ಜಿಲ್ಲೆಯಲ್ಲಿ ಹಿಜಾಬ್ ವಿವಾದ ಎಬ್ಬಿಸಿ ಉದಯಿಸಿದ ನಾಯಕ. ಈಗ ಆತ ಬಿಜೆಪಿಯ ಶಾಸಕ. ಹೊಸ ಸರ್ಕಾರ ಬಂದು ತಿಂಗಳಾಗುವಾಗ ಈತ ಉಡುಪಿಯಲ್ಲಿ ನಡೆಸಿದ ಹೋರಾಟ ಎಂಥದ್ದು? ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರು ತಮ್ಮದೇ ಬಳಗದ ವಿದ್ಯಾರ್ಥಿನಿ ಟಾಯ್ಲೆಟ್‌ಗೆ ಹೋಗಿದ್ದಾಗ ಸಲುಗೆಯಿಂದ ವಿಡಿಯೋ ಮಾಡಿ ನಂತರ ಡಿಲಿಟ್ ಮಾಡಿದ್ದಾರೆ. ಈ ವಿಚಾರ ಆಡಳಿತ ಮಂಡಳಿಯ ಗಮನಕ್ಕೂ ಬಂದಿದೆ. ಅಷ್ಟೇ ಅಲ್ಲ ದೂರು ದಾಖಲಿಸಲು ಸಂತ್ರಸ್ತೆಯೇ ಒಪ್ಪಿಲ್ಲ. ಆದರೂ ಈ ವಿಚಾರ ತಿಳಿದ ಬಿಜೆಪಿಯ ಶಾಸಕರು, ಕಾರ್ಯಕರ್ತರು ಎಬ್ಬಿಸಿದ ಗದ್ದಲ ಅಷ್ಟಿಷ್ಟಲ್ಲ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಭೂ ಸುಂದರ್ ಕಾಲೇಜಿಗೆ ಬಂದು ಆಡಳಿತ ಮಂಡಳಿ ಮತ್ತು ಸಂತ್ರಸ್ತ ವಿದ್ಯಾರ್ಥಿನಿಯನ್ನು ಭೇಟಿ ಮಾಡಿ “ಅಂತಹದೇನೂ ನಡೆದಿಲ್ಲ, ಇದು ವಿದ್ಯಾರ್ಥಿನಿಯರ ಭವಿಷ್ಯದ ಪ್ರಶ್ನೆ ರಾಜಕೀಯ ಮಾಡಬೇಡಿ. ಯಾವುದೇ ವಿಡಿಯೋ ಶೇರ್ ಆಗಿಲ್ಲ, ಯಾರೋ ಕಿಡಿಗೇಡಿಗಳು ಹಳೆಯ ವಿಡಿಯೊ ವೈರಲ್ ಮಾಡಿದ್ದಾರೆ” ಎಂದು ಸ್ಪಷ್ಟನೆ ನೀಡಿದ ಮೇಲೂ ಬಿಜೆಪಿ ಮತ್ತು ಸಂಘಪರಿವಾರ ಸುಮ್ಮನಾಗಿರಲಿಲ್ಲ. ಆರೋಪಿತ ಯುವತಿಯರು ಮುಸ್ಲಿಂ ಸಮುದಾಯದವರು ಎಂಬುದಷ್ಟೇ ಬಿಜೆಪಿಯವರ ಹೋರಾಟಕ್ಕೆ ಕಾರಣವಾಗಿತ್ತು.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರ ಹೋರಾಟದ ಮಾದರಿ ಯಾವುದು ಎಂಬುದಕ್ಕೆ ತಾಜಾ ಉದಾಹರಣೆ ಒಂದಿದೆ ನೋಡಿ. ಇದೇ ಫೆಬ್ರವರಿ 12ರಂದು ರಾಜ್ಯ ಬಜೆಟ್ ಅಧಿವೇಶನ ಶುರುವಾಯ್ತು. ಆ ದಿನ ದಕ್ಷಿಣ ಕನ್ನಡದ ಇಬ್ಬರು ಶಾಸಕರು ಮಂಗಳೂರಿನ ಖಾಸಗಿ ಶಾಲೆಯೊಂದರ ಮುಂದೆ ನಿಂತು ದೊಂಬಿ ಮಾಡುತ್ತಿದ್ದರು. ಜರೋಸಾ ಶಾಲೆಯ ಶಿಕ್ಷಕಿ ಶ್ರೀರಾಮನಿಗೆ ಅವಮಾನ ಮಾಡಿದ್ರು ಅಂತ ಮಕ್ಕಳ ಪೋಷಕರು ಇವರಿಗೆ ಹೇಳಿದ್ರಂತೆ. ಇವರು ಶರಣ್ ಪಂಪ್ವೆಲ್‌ನಂತಹ ದ್ವೇಷ ಹರಡುವುದನ್ನೆ ವೃತ್ತಿ ಮಾಡಿಕೊಂಡಿರುವ ಪಡೆಯನ್ನು ಕಟ್ಟಿಕೊಂಡು ಹೋಗಿ ಶಾಲೆಯ ಮುಂದೆ ಜೈ ಶ್ರೀರಾಮ್ ಘೋಷಣೆ ಕೂಗುತ್ತಾ, ಮಕ್ಕಳ ಕೈಗೆ ಕೇಸರಿ ಶಾಲು ಕೊಟ್ಟು ಕುಣಿದು ಕುಪ್ಪಳಿಸಲು ಪ್ರೇರೇಪಿಸುತ್ತ ಉನ್ಮಾದದಲ್ಲಿದ್ದರು. ಮಂಗಳೂರಿನ ಇಬ್ಬರು ಶಾಸಕರಾದ ಡಾ. ಭರತ್ ಶೆಟ್ಟಿ ಮತ್ತು ವೇದವ್ಯಾಸ ಕಾಮತ್ ಶಾಲಾ ಬಳಿ ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂದು ಅವರಿಬ್ಬರ ಮೇಲೆ ಎಫ್‌ಐಆರ್ ದಾಖಲಾಗಿದೆ. ಶಾಸಕರ ಮೇಲೆ ದೂರು ದಾಖಲಿಸಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಮರುದಿನ ಸದನಕ್ಕೆ ಬಂದು ಅದೇ ವಿಚಾರ ಪ್ರಸ್ತಾಪಿಸಿ ಗದ್ದಲ ನಡೆಸಿದ್ದರು. ಕ್ಷೇತ್ರದ ಅಭಿವೃದ್ಧಿ, ಜನರ ಬಗ್ಗೆ ಕಾಳಜಿ ಇದ್ದಿದ್ರೆ, ತಮ್ಮ ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜು ಬೇಕು ಎಂಬ ಕಳಕಳಿ ಇದ್ದಿದ್ರೆ ಅವರು ಈ ಸಲದ ಬಜೆಟ್‌ನಲ್ಲಿ ನಮ್ಮ ಜಿಲ್ಲೆಗೆ ಮೆಡಿಕಲ್ ಕಾಲೇಜು ಘೋಷಣೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ, ವೈದ್ಯಕೀಯ ಶಿಕ್ಷಣ ಸಚಿವರಿಗೆ ಒತ್ತಡ ಹೇರುವ ಕೆಲಸ ಮಾಡುತ್ತಿದ್ದರು. ಆದರೆ, ಅವರಿಗೆ ಕೇಸರಿ ಶಾಲು ಮತ್ತು ಜೈಶ್ರೀರಾಮ್ ಘೋಷಣೆ ಕೂಗುವುದೇ ಮುಖ್ಯವಾಗಿತ್ತು.
ಫೆ. 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಓದಲು ಶುರು ಮಾಡುತ್ತಿದ್ದಂತೆ ಇದುವರೆಗೆ ಯಾವುದೇ ವಿರೋಧ ಪಕ್ಷ ನಡೆದುಕೊಳ್ಳದ ರೀತಿಯಲ್ಲಿ ವಿರೋಧ ಪಕ್ಷದ ಸದಸ್ಯರು ಬಜೆಟ್ ಭಾಷಣ ವಾಕ್‌ಔಟ್ ಮಾಡಿ ಹೊಸ ದಾಖಲೆ ಬರೆದರು. ಬಜೆಟ್ ಓದುವ ಮುನ್ನವೇ ಬಜೆಟ್ ವಿರುದ್ಧ ಪೋಸ್ಟರ್‌ಗಳನ್ನು ರೆಡಿ ಮಾಡಿಕೊಂಡೇ ಬಂದಿದ್ದ ಬಿಜೆಪಿ ಶಾಸಕರು ಸದನದಿಂದ ಹೊರ ನಡೆದು ಪ್ರತಿಭಟಿಸಿದರು. ಯಾವುದರ ವಿರುದ್ಧ ಪ್ರತಿಭಟನೆ ಎಂಬುದರ ಸ್ಪಷ್ಟತೆ ಅವರಿಗೇ ಇರಲಿಲ್ಲ. ಜಿಲ್ಲೆಯ ಶಾಸಕರಿಗೆ ನಮ್ಮ ಜಿಲ್ಲೆಗೆ ಏನು ಬೇಕು ಎಂಬ ಸ್ಪಷ್ಟತೆ ಇದ್ದಿದ್ದರೆ ಅವರು ಬಜೆಟ್ ಭಾಷಣ ಆಲಿಸಿ, ತಮ್ಮ ಕ್ಷೇತ್ರಕ್ಕಾದ ಅನ್ಯಾಯವನ್ನು ಅಲ್ಲಿಯೇ ಪ್ರತಿಭಟಿಸಬೇಕಿತ್ತು.
ಇತ್ತ ಬಜೆಟ್ ಭಾಷಣ ಮುಗಿಯುತ್ತಿದ್ದಂತೆ ಕರಾವಳಿಯ ಕೆಲವರು ನಮ್ಮ ಜಿಲ್ಲೆಗೆ ಈ ಬಾರಿಯೂ ಸರ್ಕಾರಿ ಮೆಡಿಕಲ್ ಕಾಲೇಜು ಘೋಷಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ನಿಜಕ್ಕೂ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಬೇಕು, ಬಡ ಮಕ್ಕಳು ಜಿಲ್ಲೆಯಲ್ಲೇ ಓದುವಂತಾಗಬೇಕು, ಕಡಿಮೆ ಖರ್ಚಿನಲ್ಲಿ ಉತ್ತಮ ಚಿಕಿತ್ಸೆ ಸಿಗಬೇಕು. ಖಾಸಗಿ ಮೆಡಿಕಲ್ ಮಾಫಿಯಾಗೆ ಕಡಿವಾಣ ಬೀಳಬೇಕು ಎಂಬ ಕಾಳಜಿ ಇರುವವರು.
ಆದರೆ, ದಶಕಗಳಿಂದ ಜಿಲ್ಲೆಯ ಜನ ಯೋಚನೆ ಕೂಡ ಮಾಡದೆ, ಕೋಮುವಾದಿ ರಾಜಕಾರಣ ಮಾಡುತ್ತಿರುವ ಬಿಜೆಪಿಯ ಶಾಸಕರು, ಸಂಸದರನ್ನೇ ಗೆಲ್ಲಿಸುತ್ತ ಬಂದಿದ್ದಾರೆ. ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಂಡ ಕರಾವಳಿ ಈಗ ಕೋಮುವಾದಿ ರಾಜಕಾರಣಕ್ಕೆ ಮತ ಹಾಕಿದ ಕಾರಣ ಕೋಮುವಾದದ ಪ್ರಯೋಗ ಶಾಲೆ ಎನಿಸಿದೆ. ಬಡ, ಹಿಂದುಳಿದ, ಶೂದ್ರ ಯುವಕರು ಬಹಳ ಬೇಗ ಹಿಂದುತ್ವದ ದ್ವೇಷದ ಅಗ್ನಿಗೆ ಆಹುತಿಯಾಗುತ್ತಿದ್ದಾರೆ.
ಜಿಲ್ಲೆಯಿಂದ ಆಯ್ಕೆ ಆಗುತ್ತಿರುವ ಶಾಸಕರು ಯಾವ ವಿಷಯಗಳ ಬಗ್ಗೆ ಸದನದಲ್ಲಿ ಮತ್ತು ಹೊರಗಡೆ ಹೋರಾಟ ಮಾಡುತ್ತಿದ್ದಾರೆ ಎಂದು ಜಿಲ್ಲೆಯ ಜನ ಕಣ್ಣಾರೆ ನೋಡಿದ್ದಾರೆ. ಹಾಗಿದ್ದೂ ಮತ್ತೆ ಅವರನ್ನೇ ಆಯ್ಕೆ ಮಾಡುತ್ತಿದ್ದಾರೆ. ಹಿಂದುತ್ವ ಅಪಾಯದಲ್ಲಿದೆ, ನಮ್ಮದು ಹಿಂದೂ ರಾಷ್ಟ್ರ, ಮುಸ್ಲಿಮರಿಂದ ದೇಶಕ್ಕೆ ಅಪಾಯ, ಮೋದಿ ಇದ್ದರೆ ಮಾತ್ರ ದೇಶ ಉಳಿಯುತ್ತದೆ, ಮೋದಿ ವಿಶ್ವಗುರು, ಕಾಂಗ್ರೆಸ್ ಗೆದ್ದರೆ ಮುಸ್ಲಿಂ ರಾಷ್ಟ್ರ ಮಾಡುತ್ತಾರೆ… ಇಂತಹ ಹೇಳಿಕೆಗಳಿಗೆ ಈಗಲೂ ಜನ ವೋಟ್ ಹಾಕುತ್ತಿದ್ದಾರೆ. ಕರಾವಳಿಯ ಶ್ರೀಮಂತ ಕೃಷಿಕರು, ಉದ್ಯಮಿಗಳು, ಶಿಕ್ಷಣ ತಜ್ಞರು, ವೈದ್ಯರು, ತಂತ್ರಜ್ಞರು, ವ್ಯಾಪಾರಿಗಳು ಅಷ್ಟೇ ಏಕೆ ಬಡವರೂ ಕೋಮುವಾದಿ ರಾಜಕಾರಣಕ್ಕೆ ಜೈ ಅಂತಿದ್ದಾರೆ.
ಕರಾವಳಿಯ ಪ್ರಜ್ಞಾವಂತರು ಎಷ್ಟೇ ಪ್ರಯತ್ನಪಟ್ಟರೂ ಮತದಾರರ ಮನಸ್ಸನ್ನು ಬದಲಿಸಲು ಆಗಿಲ್ಲ. ಕರಾವಳಿಗೆ ಐಟಿ ಕಂಪನಿಗಳು ಯಾಕೆ ಬರುತ್ತಿಲ್ಲ? ಯಾಕೆ ನಾಲ್ಕು ವರ್ಷ ಬಿಜೆಪಿ ಸರ್ಕಾರ ಇದ್ದರೂ ಕರಾವಳಿಗೆ ಮೆಡಿಕಲ್ ಕಾಲೇಜು ತರಲಿಲ್ಲ? ಕರಾವಳಿಯಲ್ಲಿ ಯಾಕಿಷ್ಟು ಕೋಮು ದ್ವೇಷ? ಕರಾವಳಿಯ ಅಸ್ಮಿತೆಗೆ ಧಕ್ಕೆ ತರುತ್ತಿರುವ ನಾಯಕರು ಯಾರು ಎಂಬ ಬಗ್ಗೆ ಯೋಚಿಸದಷ್ಟು ಬುದ್ದಿಹೀನರಾಗಿದ್ದಾರೆ ಎಂದರೆ ತಪ್ಪಾಗದು.

ಇದರ ಜೊತೆಗೆ ಖಾಸಗಿ ಮೆಡಿಕಲ್ ಮಾಫಿಯಾ ಜೊತೆ ಜಿಲ್ಲೆಯ ಪ್ರತಿನಿಧಿಗಳು ಶಾಮೀಲಾಗಿದ್ದಾರೆ ಎಂಬ ಆರೋಪವೂ ಇದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮೂರೂ ಸಮುದಾಯಗಳೂ ಜಿಲ್ಲೆಯಲ್ಲಿ ಸಾಕಷ್ಟು ಆಸ್ಪತ್ರೆ, ಮೆಡಿಕಲ್ ಕಾಲೇಜುಗಳನ್ನು ನಡೆಸುತ್ತಿವೆ. ಬಡವರೆಂದೂ ನೋಡದೇ ದುಬಾರಿ ಚಿಕಿತ್ಸಾ ವೆಚ್ಚ ಸುಲಿಗೆ ಮಾಡುತ್ತಿರುವ ಬಗ್ಗೆ ಆರೋಪಗಳಿವೆ. ಇರುವ ಒಂದೆರಡು ದೊಡ್ಡ ಸರ್ಕಾರಿ ಆಸ್ಪತ್ರೆಗಳೂ ನ್ಯೂನತೆಯ ಆಗರಗಳಾಗಿವೆ ಎಂಬ ಆರೋಪವೂ ಇದೆ. ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಸ್ಥಾಪನೆಯಾದರೆ ಬಹುತೇಕ ಸಾಮಾನ್ಯ ವರ್ಗದ ಜನರು ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಪಡೆಯಬಹುದು.
ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರಾಗದಿರುವುದಕ್ಕೆ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಯು ಟಿ ಖಾದರ್ ಅವರೂ ಜವಾಬ್ದಾರರು. 2013ರಿಂದ 2018ರವರೆಗೆ ಇದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅವರು ಆರೋಗ್ಯ ಸಚಿವರಾಗಿದ್ದರು. ಜಿಲ್ಲೆಯ ಪ್ರಮುಖ ಜನಪರ ಹೋರಾಟಗಾರ ಮುನೀರ್ ಕಾಟಿಪಳ್ಳರಂತವರು ಮಂಗಳೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎಂದು ಧ್ವನಿ ಎತ್ತಿದ್ದನ್ನು ಖಾದರ್ ಸಾಹೇಬರೂ ಕೇಳಿಸಿಕೊಂಡಿರುತ್ತಾರೆ. ಕೊರೋನಾ ಕಾಲದಲ್ಲಿ ಜಿಲ್ಲೆಯ ಮೆಡಿಕಲ್ ಮಾಫಿಯಾದ ಕರಾಳಮುಖ ದರ್ಶನವಾಗಿದೆ. ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಅಂತ ಖಾದರ್ ಅವರಿಗೂ ಆದಷ್ಟು ಬೇಗ ಮನವರಿಕೆಯಾಗಲಿ. ಅಭಿವೃದ್ಧಿ ರಾಜಕಾರಣ ಬಿಟ್ಟು ಕೋಮು ರಾಜಕಾರಣ, ಶವ ರಾಜಕಾರಣ ಮಾಡುವ ಯಾರೇ ಆಗಿರಲಿ ಅವರಿಗೆ ಮತದಾರರು ತಕ್ಕ ಉತ್ತರ ನೀಡಬೇಕಾಗಿದೆ.

ಹೇಮಾ ವೆಂಕಟ್
ʼಈ ದಿನ.ಕಾಮ್ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.