- ಎಸ್‌ಯುಸಿಐ ಪಕ್ಷದ ಅಭ್ಯರ್ಥಿ ಮಧುಲತಾ ಗೌಡರ್ ಪರ ಪ್ರಚಾರ
- ಜನಪರ ನಿಲುವುಗಳಿಗಾಗಿ ಹೋರಾಡುತ್ತಿರುವವರ ಗೆಲ್ಲಿಸಲು ಮನವಿ
ಧಾರವಾಡ ಗ್ರಾಮೀಣ ಕ್ಷೇತ್ರದ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಮಧುಲತಾ ಗೌಡರ್ ಪರ ನರೇಗಾ ಕೂಲಿ ಕಾರ್ಮಿಕರು ಮುಗುಳಿ, ಶಿಂಗನಹಳ್ಳಿ, ತೇಗೂರಿ ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ಸಂಘಟನೆ ಸದಸ್ಯ ಹನುಮೇಶ ಹುಡೇದ ಮಾತನಾಡಿ, “ಹೋರಾಟಗಳಿಂದಲೇ ಹೊರಹೊಮ್ಮಿದ ಅಭ್ಯರ್ಥಿ ಮಧುಲತಾ ಈ ಮೊದಲು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದವರು. ಹೋರಾಟದಿಂದ ಜನರ ಬದುಕು ಬದಲಾಯಿಸುವ ಪಣತೊಟ್ಟ ಅವರು ಉಪನ್ಯಾಸಕಿ ವೃತ್ತಿಗೆ ರಾಜೀನಾಮೆ ನೀಡಿ, ಜನಪರ ನಿಲುವುಗಳಿಗಾಗಿ ಹೋರಾಡುತ್ತಿದ್ದಾರೆ. ಹಾಗಾಗಿ ಅವರನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿ” ಎಂದು ಕರೆ ನೀಡಿದರು.
ಜಿಲ್ಲಾ ಸಮಿತಿ ಸದಸ್ಯೆ ದೀಪಾ ಧಾರವಾಡ ಮಾತನಾಡಿ, “ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಸಂಘಟನೆಗಾಗಿ ವೈಯಕ್ತಿಕ ಬದುಕನ್ನು ಬಿಟ್ಟು, ಸಂಘಟನೆಯ ಬೆಳವಣಿಗೆ ಹಾಗೂ ಬಂಡವಾಳಶಾಹಿಗಳ ಜನವಿರೋಧಿ ನೀತಿಗಳಿಂದ ಜನರನ್ನು ಮುಕ್ತರನ್ನಾಗಿಸಲು ಹೋರಾಡುತ್ತಿದ್ದಾರೆ. ಇಂತಹ ಜನಪರ ನೀತಿಯ ಪರವಾದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? : ಮಂಡ್ಯ | ಪ್ರಮುಖರ ಸಭೆ ಕರೆದು ಬೆಂಬಲ ಕೋರಿದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಮಧುಚಂದನ್
ಸುಡುಬಿಸಿಲಿನ ನಡುವೆಯೂ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಕೂಲಿ ಕಾರ್ಮಿಕರು ಸಂಘಟನೆಯ ವಿಷಯ, ಪ್ರಸ್ತುತ ರಾಜಕೀಯ ವಿಷಯದ ಕುರಿತು ಚರ್ಚೆಯನ್ನು ಕುತೂಹಲದಿಂದ ಆಲಿಸಿದರು. ಮಧುಲತಾ ಅವರನ್ನು ಬೆಂಬಲಿಸುವುದಾಗಿ ವಾಗ್ದಾನ ಮಾಡಿದರು.
ಸಭೆಯಲ್ಲಿ ಪಕ್ಷದ ಸದಸ್ಯೆ ಶಶಿಕಲಾ ಮೇಟಿ ಮತ್ತು ನರೇಗಾ ಕೂಲಿ ಕಾರ್ಮಿಕರು ಹಾಜರಿದ್ದರು.