ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಬೇರೂರಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಸರಕಾರ ಗಂಭೀರವಾಗಿ ಪರಿಗಣಿಸಿ ಪೊಲೀಸ್ ವ್ಯವಸ್ಥೆಯನ್ನು ಪುನರ್ ರೂಪಿಸುವ ಅಗತ್ಯವಿದೆ. ಅದಕ್ಕಿಂತಲೂ ಅತಿಮುಖ್ಯವಾಗಿ, ಪೊಲೀಸರು ಮಾನವೀಯತೆಯಿಂದ ವರ್ತಿಸುವುದನ್ನು ಕಲಿಯಬೇಕಾಗಿದೆ. ಇನ್ನೂ ಮುಖ್ಯವಾಗಿ, ಪೊಲೀಸ್ ಇಲಾಖೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪಕ್ಕೆ ಅವಕಾಶವಿಲ್ಲದಂತೆ ಮಾಡಬೇಕಾಗಿದೆ.
ಬಜೆಟ್ ಅಧಿವೇಶನದಲ್ಲಿ ಭಾರತೀಯ ಜನತಾ ಪಕ್ಷದ ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ್, ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಅಮಾನತು ಆದೇಶ ಹೊರಡಿಸಿರುವುದು ಹಾಗೂ ಅಮಾನತು ಆದೇಶಕ್ಕೆ ತಡೆಯಾಜ್ಞೆ ದೊರಕಿಸಿ ಕೊಡುವುದು ದಂಧೆಯ ರೀತಿಯಲ್ಲಿ ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಪ್ರಶ್ನೆ ಮಾಡಿದರು.
ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಜಿ. ಪರಮೇಶ್ವರ್, ಇಂತಹ ಯಾವ ನಿದರ್ಶನಗಳು ನಡೆದಿಲ್ಲ ಎಂದು ಗೃಹ ಇಲಾಖೆ ತಿಳಿಸಿದೆ ಎಂದು ಹೇಳಿ ಕುಳಿತುಕೊಂಡರು.
ಅಲ್ಲಿಗೆ ನಾಡಿನ ನ್ಯಾಯದೇಗುಲದಲ್ಲಿ ವಿರೋಧ ಪಕ್ಷ ಪ್ರಶ್ನೆ ಕೇಳುವ, ಆಡಳಿತ ಪಕ್ಷ ಉತ್ತರ ಹೇಳುವ ಪ್ರಕ್ರಿಯೆ ಮುಗಿಯಿತು. ಈ ನಾಯಕರನ್ನು ನಾವು ಆಯ್ಕೆ ಮಾಡಿ ಕಳುಹಿಸಿದ್ದಕ್ಕೆ, ಇವರು ನಮ್ಮನ್ನು ಪ್ರತಿನಿಧಿಸಿದ್ದಕ್ಕೆ ‘ನ್ಯಾಯ’ವೂ ಸಿಕ್ಕಿತು, ಇರಲಿ.
ನಿಜವಾಗಿ ನಡೆದದ್ದೇನೆಂದರೆ, ಪೊಲೀಸ್ ಇಲಾಖೆಯಲ್ಲಿ ಲಂಚ, ಸಾರ್ವಜನಿಕರೊಂದಿಗೆ ಅನುಚಿತ ವರ್ತನೆ, ನಕಲಿ ದಾಖಲೆ ಸೃಷ್ಟಿಗೆ ಸಹಕಾರ, ಕರ್ತವ್ಯ ಲೋಪ ಹಾಗೂ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 8 ತಿಂಗಳಲ್ಲಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ 81 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಮಾನತುಗೊಂಡಿದ್ದಾರೆ.
ಕುತೂಹಲಕರ ಸಂಗತಿ ಎಂದರೆ, ಏಳು ಮಂದಿ ಇನ್ಸ್‌ಪೆಕ್ಟರ್‌ಗಳು ಅಮಾನತು ಆದೇಶ ಪ್ರಶ್ನಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮೆಟ್ಟಿಲೇರಿದ್ದಾರೆ. ಇವರ ಅಮಾನತಿಗೆ ಕೆಎಟಿ ತಡೆಯಾಜ್ಞೆ ನೀಡಿದೆ. ಈ ಪೈಕಿ ಒಬ್ಬ ಇನ್ಸ್‌ಪೆಕ್ಟರ್ ಅಮಾನತುಗೊಂಡಿದ್ದ ಠಾಣೆಯಲ್ಲಿಯೇ ಮತ್ತೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.
ಇದು ಕೇವಲ 8 ತಿಂಗಳಲ್ಲಿ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ, ಮೇಲಧಿಕಾರಿಗಳ ಮೂಗಿನಡಿಯಲ್ಲಿ ನಡೆದದ್ದು. ಇನ್ನು ಇಡೀ ರಾಜ್ಯದಲ್ಲಿ ನಡೆಯುತ್ತಿರುವುದು? ಅದು ಗೃಹ ಸಚಿವರ ‘ದಕ್ಷತೆ’ಯ ವಿಚಾರ. ಅದನ್ನು ನಿಮ್ಮ ಊಹೆಗೆ ಬಿಡಲಾಗಿದೆ.
2023ರ ಮೇ ತಿಂಗಳಲ್ಲಿ ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಬಿ. ದಯಾನಂದ ಅವರು, ಕಮಿಷನರೇಟ್ ವ್ಯಾಪ್ತಿಯ ಅಧಿಕಾರಿ, ಸಿಬ್ಬಂದಿ ವಿರುದ್ಧ ಯಾವುದೇ ಆರೋಪಗಳು ಬಂದರೆ ಸಹಿಸುವುದಿಲ್ಲ. ಅಂಥವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ರವಾನಿಸಿದ್ದರು. ಆದರೆ, ಮೇಲಧಿಕಾರಿಯ ಎಚ್ಚರಿಕೆಯನ್ನೂ ಲೆಕ್ಕಿಸದೆ ಲಂಚಕ್ಕೆ ಕೈ ಚಾಚಿದ, ಅಕ್ರಮಗಳನ್ನು ತಡೆಗಟ್ಟುವಲ್ಲಿ ವಿಫಲವಾದ ಹಾಗೂ ಕರ್ತವ್ಯಲೋಪವೆಸಗಿದ ಹಲವು ಪೊಲೀಸ್ ಅಧಿಕಾರಿಗಳ ವಿರುದ್ಧ ಸಾಲು ಸಾಲು ದೂರುಗಳು ದಾಖಲಾಗಿದ್ದೂ ಉಂಟು.
ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಬೇರೂರಿದೆ ಎನ್ನುವುದನ್ನು ಈ ಎಲ್ಲ ಪ್ರಕರಣಗಳೂ ಸ್ಪಷ್ಟಪಡಿಸುತ್ತಿವೆ. ಪ್ರಕರಣ ಬಯಲಿಗೆ ಬಂದ ಬಳಿಕ ತನಿಖೆಯ ಹೆಸರಲ್ಲಿ ಕಣ್ಣೊರೆಸುವ ಪ್ರಯತ್ನಗಳಷ್ಟೇ ಆಗುತ್ತಿವೆ. ಅದು ಸರಿಯಲ್ಲ. ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರನ್ನು ಬಂಧಿಸಿ, ಶಿಕ್ಷೆ ವಿಧಿಸುವ ಕೆಲಸವೂ ಆಗಬೇಕಿದೆ.
ಆರಕ್ಷಕ ಇಲಾಖೆ ಯಾತಕ್ಕಾಗಿ, ಪೊಲೀಸರು ಇರುವುದು ಯಾರ ರಕ್ಷಣೆಗಾಗಿ ಎಂಬ ಪ್ರಶ್ನೆ ಪದೇ ಪದೇ ಉದ್ಭವವಾಗುತ್ತಲೇ ಇದೆ. ಜನರ ಜೀವ ಮತ್ತು ಆಸ್ತಿ ಪಾಸ್ತಿ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾದ ಆರಕ್ಷಕರಿಂದಲೇ ಅತಿರೇಕಗಳು ಜರುಗುತ್ತಿವೆ. ಕಾನೂನು ಪಾಲಕರಿಂದಲೇ ಕಾನೂನಿನ ಉಲ್ಲಂಘನೆಯಾಗುತ್ತಿದೆ. ಮಾನವೀಯತೆಯ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪೊಲೀಸ್ ಇಲಾಖೆಯ ಬಗ್ಗೆ ಜನಸಾಮಾನ್ಯರಲ್ಲಿ ಒಂದೆಡೆ ಭೀತಿ ಆವರಿಸಿದ್ದರೆ, ಇನ್ನೊಂದೆಡೆ ಆಕ್ರೋಶ ಮಡುಗಟ್ಟಿ ನಿಂತಿದೆ. ಠಾಣೆಗಳ ಮೆಟ್ಟಿಲೇರುವುದು ಅವಮಾನಕರ ಸಂಗತಿಯಾಗಿದೆ. ಜನಸ್ನೇಹಿ ಠಾಣೆ ಎನ್ನುವುದು ಕನಸಿನ ಮಾತಾಗಿದೆ.
ಕೋರ್ಟ್ ಕೂಡಾ ಪೊಲೀಸರ ಅತಿರೇಕದ ವರ್ತನೆಗಳ ಬಗ್ಗೆ ಹಲವಾರು ಬಾರಿ ಆಕ್ಷೇಪ ವ್ಯಕ್ತಪಡಿಸಿದೆ. ರಾಷ್ಟ್ರೀಯ ಪೊಲೀಸ್ ಆಯೋಗ ಕೂಡಾ ಪೊಲೀಸ್ ಇಲಾಖೆಯ ಸುಧಾರಣೆಯ ಬಗ್ಗೆ ಹಲವಾರು ಶಿಫಾರಸುಗಳನ್ನು ಮಾಡಿದೆ. ಅವುಗಳಲ್ಲಿ ಮುಖ್ಯವಾಗಿ, ಪೊಲೀಸ್ ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆಯನ್ನು ತುರ್ತಾಗಿ ನಿವಾರಿಸುವುದು. ಪೊಲೀಸರ ಜೀವನದ ಸ್ಥಿತಿಗತಿಗಳಿಗೆ ಮತ್ತು ಕೌಟುಂಬಿಕ ಜೀವನದ ಸುಗಮ ನಿರ್ವಹಣೆಗೆ ಅಗತ್ಯವಿರುವಷ್ಟು ಸಂಬಳ ಭತ್ಯೆಗಳನ್ನು ನೀಡುವುದು. ವಿಪರೀತ ಕೆಲಸದ ಒತ್ತಡವನ್ನು ನಿವಾರಿಸುವುದು. ಲಭ್ಯವಿರುವ ರಜೆಯನ್ನು ಬಳಸಿಕೊಳ್ಳುವ ಅವಕಾಶ ಕೊಡುವುದು. ಆದರೆ ಯಾವುವೂ ಜಾರಿಗೆ ಬಂದಿಲ್ಲ.
ಈ ಎಲ್ಲ ಅಂಶಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಪೊಲೀಸ್ ವ್ಯವಸ್ಥೆಯನ್ನು ಪುನರ್ ರೂಪಿಸುವ ಅಗತ್ಯವಿದೆ. ಅದಕ್ಕಿಂತಲೂ ಅತಿಮುಖ್ಯವಾಗಿ, ಪೊಲೀಸರು ಮಾನವೀಯತೆಯಿಂದ ವರ್ತಿಸುವುದನ್ನು ಕಲಿಯಬೇಕಾಗಿದೆ. ಅಷ್ಟೇ ಅಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾಗಿ ವರ್ತಿಸುವುದನ್ನು ರೂಢಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ, ಪೊಲೀಸರಿಗೆ ತರಬೇತಿ ನೀಡುವಾಗಲೇ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲತತ್ವಗಳು ಹಾಗೂ ಸಂವಿಧಾನದ ಬಗ್ಗೆ ಸೂಕ್ತ ತರಬೇತಿ ನೀಡಬೇಕಾಗಿದೆ.
ಇನ್ನೂ ಮುಖ್ಯವಾಗಿ, ಪೊಲೀಸ್ ಇಲಾಖೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪಕ್ಕೆ ಅವಕಾಶವಿಲ್ಲದಂತೆ ಮಾಡಬೇಕಾಗಿದೆ. ಇದು ಸಾಧ್ಯವೇ ಎನ್ನುವುದು ಇವತ್ತಿನ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
