ಪ್ರಸ್ತುತ ಸಾಮಾಜಿಕ ಜೀವನ ನಡೆಸಲು ತುಂಬಾ ಕಷ್ಟಕರವಾಗಿದೆ. ಬೆಲೆ ಏರಿಕೆ, ಬಡತನ, ಹಸಿವು, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಮ್ಮ ದೇಶದಲ್ಲಿ ಪ್ರತಿ ದಿನ 4 ನಿಮಿಷಕ್ಕೆ ಒಬ್ಬ ಮಹಿಳೆ ಮೇಲೆ ಅತ್ಯಾಚಾರ ನಡೆಯುತ್ತಿದೆ. ಕೊಲೆ, ಸುಲಿಗೆಯಂತಹ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಎದ್ದೇಳು ಕರ್ನಾಟಕ ಜಿಲ್ಲಾ ಸಂಯೋಜಕ ಮಹಮ್ಮದ್ ಅಬ್ದುಲ್ ಖಾದಿರ್ ಹೇಳಿದರು.
ವಿಜಯಪುರ ಜಿಲ್ಲೆ ಸಿಂದಗಿ ನಗರದ ಸಂಗಮ ಸಂಸ್ಥೆಯಲ್ಲಿ ಎದ್ದೇಳು ಕರ್ನಾಟಕ ಹಾಗೂ ಈ ದಿನ.ಕಾಮ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಸಂವಿಧಾನ, ಸಹಬಾಳ್ವೆ ಸಮಾಲೋಚನಾ ವಿಷಯದ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.
“ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ಒದಗಿಸಿ ಕೊಟ್ಟಿರುವುದು ಸಂವಿಧಾನ. ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಸಂವಿಧಾನದ ಕುರಿತು ಅಪಪ್ರಚಾರ ಮಾಡಲು ಕೇಂದ್ರ ಸರ್ಕಾರದಿಂದ ಎಲ್ಲ ಪ್ರಯತ್ನಗಳೂ ನಡೆಯುತ್ತಿವೆ” ಎಂದು ದೂರಿದರು.
“ಸಂವಿಧಾನವನ್ನು ಬದಲಾಯಿಸಲು ಬಂದಿರುವುದಾಗಿ ಬಹಿರಂಗವಾಗಿ ಹೇಳಿಕೆ ನೀಡುತ್ತಾರೆ. ಇದು ಅತ್ಯಂತ ಕಳವಳಕಾರಿ ಬೆಳವಣಿಗೆ. ಸಂವಿಧಾನ ಉಳಿಸುವುದು ನಮ್ಮ ಮೂಲ ಉದ್ದೇಶ. ಹಾಗಾಗಿ ಎದ್ದೇಳು ಕರ್ನಾಟಕ ತಂಡ ಎಲ್ಲ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಜನರನ್ನು ಜಾಗೃತಿಗೊಳಿಸುವ ಪ್ರಯತ್ನ ಮಾಡುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ದೇವರಾಜ ಅರಸು ಜನಸಾಮಾನ್ಯರು ಸ್ಮರಿಸುವಂತಹ ನಾಯಕ: ಎಂಎಲ್ಸಿ ವಿಶ್ವನಾಥ್
ಈ ವೇಳೆ ದಸಂಸ ವಿಜಯಪುರ ಜಿಲ್ಲಾ ಸಂಚಾಲಕ ಚಂದ್ರಕಾಂತ ಶಿಂಗೆ, ಮಹಿಳಾ ಒಡಲ ದನಿ ಒಕ್ಕೂಟದ ಡಾ ಭುವನೇಶ್ವರಿ ಕಾಂಬ್ಳೆ, ಡಿವಿಪಿ ತಾಲೂಕು ಮುಖಂಡ ಹರ್ಷವರ್ಧನ್ ಪೂಜಾರಿ ಇದ್ದರು.