ಪ್ರಯಾಣಿಕನೊಬ್ಬ ತಾನು ‘ಉಗ್ರಗಾಮಿ’ ಎಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಸಿಬ್ಬಂದಿಗೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಬಗ್ಗೆ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆದರಿಕೆ ಹಾಕಿದ್ದ ಆರೋಪಿ ಆದರ್ಶ್ ಕುಮಾರ್ ಸಿಂಗ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಫೆಬ್ರವರಿ 17ರಂದು ಬೆಂಗಳೂರಿನಿಂದ ಲಖನೌಗೆ ಆರೋಪಿ ಆದರ್ಶ ಹೊರಟಿದ್ದನು. ಈ ಸಮಯದಲ್ಲಿ ವಿಮಾನ ಏರಲು ತೆರಳಿದ್ದ ಆತ ಕೊನೆ ಕ್ಷಣದಲ್ಲಿ ವಾಪಾಸ್ ಹಿಂತಿರುಗಿ ತೆರಳಲು ಮುಂದಾಗಿದ್ದಾನೆ. ಈ ಬಗ್ಗೆ ಏರ್ ಇಂಡಿಯಾ ಸಿಬ್ಬಂದಿ ಭದ್ರತಾ ಪಡೆಗೆ ಮಾಹಿತಿ ನೀಡಿದ್ದಾರೆ. ಪ್ರಯಾಣಿಕ ವಿಮಾನ ಏರಲು ತೆರಳಿ ವಾಪಾಸ್ ಆಗುತ್ತಿದ್ದ ಬಗ್ಗೆ ವಿಮಾನ ನಿಲ್ದಾಣದ ಭದ್ರತಾ ಪಡೆ ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ.
ಈ ವೇಳೆ, ಆರೋಪಿ ಆದರ್ಶ ಕುಮಾರ್ ಭದ್ರತಾ ಸಿಬ್ಬಂದಿಯ ಪ್ರಶ್ನೆಗೆ, ‘ನಾನು ಭಯೋತ್ಪಾದಕ ಗುಂಪಿಗೆ ಸೇರಿದ್ದು, ಲಖನೌಗೆ ತೆರಳಲ್ಲ’ ಎಂದು ಬೆದರಿಕೆ ಹಾಕಿ ಉತ್ತರ ನೀಡಿದ್ದನು.
ಈ ಸುದ್ದಿ ಓದಿದ್ದೀರಾ? ಘೋಷಿತ ಕಾಯಿಲೆಗಳ ಪಟ್ಟಿಗೆ ಹಾವು ಕಡಿತ ಸೇರ್ಪಡೆ: ಆರೋಗ್ಯ ಇಲಾಖೆ
ಭದ್ರತಾ ಸಿಬ್ಬಂದಿ ತಕ್ಷಣವೇ ಆರೋಪಿ ಆದರ್ಶ ಕುಮಾರ್‌ನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಬೆಂಗಳೂರು ವಿಮಾನ ನಿಲ್ದಾಣ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.