ಬೆಳೆದ ಕಬ್ಬಿನ ಬೆಳೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕಬ್ಬು ಸುಟ್ಟಿ ಹೋಗಿದ್ದರ ಬಗ್ಗೆ ದೂರು ನೀಡಿದ ವ್ಯಕ್ತಿಯೊಬ್ಬರ ಹೊಲಕ್ಕೆ ಪಂಚನಾಮೆಗೆ ತೆರಳಿದ ವೇಳೆ ಹಣ ನೀಡುವಂತೆ ಬೇಡಿಕೆ ಇಟ್ಟಿರುವುದು ಸಾಬೀತಾದ ಹಿನ್ನಲೆ ಎಎಸ್‌ಐ ಒಬ್ಬರು ಅಮಾನತುಗೊಂಡಿದ್ದಾರೆ.
ಬೀದರ್ ಜಿಲ್ಲೆಯ ಹುಲಸೂರ ಪೊಲೀಸ್ ಠಾಣೆ ಎಎಸ್ಐ ಶಾವುರಾಜ್ ಅಮಾನತುಗೊಂಡವರು.
“ಹುಲಸೂರ ತಾಲೂಕಿನ ಬೇಲೂರು ಗ್ರಾಮದ ವ್ಯಕ್ತಿಯೊಬ್ಬರ ಹೊಲದಲ್ಲಿ ಸುಟ್ಟು ಹೋದ ಕಬ್ಬಿನ ಪಂಚನಾಮೆ ಪ್ರಕ್ರಿಯೆಗಾಗಿ ತೆರಳಿದ್ದಾಗ ಎಎಸ್‌ಐ ಶಾವುರಾಜ್ ರೈತರೊಂದಿಗೆ ಅನುಚಿತವಾಗಿ ವರ್ತಿಸಿ, ಹಣ ನೀಡುವಂತೆ ಹಣದ ಬೇಡಿಕೆ ಇಟ್ಟಿರುವುದು ಪ್ರಾಥಮಿಕ ವಿಚಾರಣೆಯಿಂದ ಮತ್ತು ವಿಡಿಯೋ ತುಣುಕಿನಿಂದ ಮೇಲ್ನೋಟಕ್ಕೆ ಸಾಬೀತಾಗಿದೆ” ಎಂದು ಬೀದರ್ ಎಸ್ಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಕರ್ತವ್ಯದಲ್ಲಿ ಅತೀವ ಬೇಜವಾಬ್ದಾರಿ ಹಾಗೂ ದುರ್ನಡತೆ ತೋರಿಸಿದ್ದಕ್ಕೆ ಎಎಸ್ಐ ಶಾವುರಾಜ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ” ಎಂದು ಬುಧವಾರ ಬೀದರ್ ಎಸ್.ಪಿ ಚೆನ್ನಬಸವಣ್ಣ ಲಂಗೋಟಿ ಅವರು ಆದೇಶ ಹೊರಡಿಸಿದ್ದಾರೆ.