ರಾಯಚೂರು ಜಿಲ್ಲೆಯಲ್ಲಿ ಹೆಚ್ಚಾಗಿ ಬಾಲ್ಯ ವಿವಾಹಗಳು ನಡೆಯುತ್ತಿದ್ದು, ತಾಲೂಕು ಮತ್ತ ಗ್ರಾಮ ಮಟ್ಟದ ಸಮಿತಿಗಳಿದ್ದರೂ ಕೂಡ ದೂರು ದಾಖಲಾಗುತ್ತಿಲ್ಲ. ಸಂಬಂಧಪಟ್ಟ ಇಲಾಖೆಗಳು ಸುಮೊಟೊ ಪ್ರಕರಣ ದಾಖಲಿಸಲು ಮುಂದಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಜಿಲ್ಲೆಯಲ್ಲಿ ಹೆಚ್ಚಾಗಿ ಬಾಲ್ಯ ವಿವಾಹಗಳು ನಡೆಯುತ್ತಿವೆ. ಈ ಬಗ್ಗೆ ಮಾಹಿತಿ ಕೊರತೆ ಜಾಗೃತಿ ಮೂಡಿಸುವ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಏಪ್ರಿಲ್‌ನಿಂದ ಜನವರಿವರೆಗೆ 58 ಪ್ರಕರಣಗಳು ನಡೆದಿದ್ದು, 50 ಪ್ರಕರಣಗಳನ್ನು ತಡೆಯಲಾಗಿದೆ. ಉಳಿದ ಪ್ರಕರಣಗಳನ್ನು ತಡೆಯಲಾಗಿಲ್ಲ. ಗ್ರಾಮಗಳಲ್ಲಿ ಹೆಚ್ಚಾಗಿ ಬಾಲ್ಯ ವಿವಾಹಗಳು ನಡೆಯುತ್ತಿವೆ. ತಾಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಮಿಟಿ ಇದೆ. ಆದರೂ ಬಾಲ್ಯ ವಿವಾಹಗಳು ನಡೆದಿವೆ. ಬೆಳಕಿಗೆ ಬಂದ ಪ್ರಕರಣಗಳನ್ನು ಮಾತ್ರ ತಡೆಯಲು ಸಾಧ್ಯವಾಗಿದೆ. ಬೆಳಕಿಗೆ ಬಾರದೇ ಇರುವ ಪ್ರಕರಣಗಳ ತಡೆಗೆ ಜಾಗೃತಿ ಮೂಡಿಸಬೇಕು, ಮಾಹಿತಿ ಕೊಡಬೇಕು” ಎಂದು ತಿಳಿಸಿದರು.
“ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ಕಮಿಟಿಯಲ್ಲಿರುವ ಇಲಾಖೆಗಳ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಬೇಕು. ಮುಖ್ಯವಾಗಿ ದೇವದುರ್ಗ ಹಾಗೂ ಲಿಂಗಸಗೂರು ತಾಲೂಕಿನಲ್ಲಿ ಪ್ರಕರಣಗಳು ನಡೆಯುತ್ತಿವೆ. ಕಮಿಟಿ ಸಕ್ರಿಯವಾಗಿ ಕೆಲಸ ಮಾಡಬೇಕು” ಎಂದು ಸೂಚಿಸಿದರು.
ಜಿಲ್ಲೆಯಲ್ಲಿ 2856 ಅಂಗನವಾಡಿಗಳಿವೆ. 22782 ಮಂದಿ ಗರ್ಭಿಣಿಯರು, 27920 ಮಂದಿ ಬಾಣಂತಿಯರಿದ್ದಾರೆ. ಅಂಗನವಾಡಿಗಳಲ್ಲಿ ಒಟ್ಟು 2,29,279 ಮಂದಿ ಮಕ್ಕಳಿದ್ದಾರೆ. 1,96,137 ಮಂದಿ ಸಾಮಾನ್ಯ ಮಕ್ಕಳಿದ್ದಾರೆ. 2856 ಅಂಗನವಾಡಿಗಳ ಪೈಕಿ 220 ಕಟ್ಟಡಗಳು ನಿರ್ಮಾಣದ ಹಂತದಲ್ಲಿವೆ. ಇನ್ನೂ 700 ಅಂಗನವಾಡಿಗಳಿಗೆ ಕಟ್ಟಡದ ಅವಶ್ಯಕತೆ ಇದೆ” ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಚೇತನ್‌ಕುಮಾರ ಮಾಹಿತಿ ನೀಡಿದರು.
“ಜಿಲ್ಲೆಯಲ್ಲಿ 2856 ಅಂಗನವಾಡಿಗಳಲ್ಲಿ 1160 ಅಂಗನವಾಡಿಗಳಿಗೆ ಮಾತ್ರ ಕುಡಿಯುವ ನೀರಿನ ವ್ಯವಸ್ಥೆ ಇದೆ. ಉಳಿದ ಅಂಗನವಾಡಿಗಳಿಗೆ ಬೇರೆ ಕಡೆಯಿಂದ ನೀರಿನ ವ್ಯವಸ್ಥೆ ಮಾಡಲಾಗಿದೆ. ಸಾಕಷ್ಟು ಅಂಗನವಾಡಿಗಳಿಗೆ ನೀರಿನ ಕೊರತೆ ಇದ್ದು, ಜೆಜೆಎಂ ಮೂಲಕ ಸಂಪರ್ಕ ಒದಗಿಸಿಕೊಡಲಾಗುತ್ತಿದೆ. ಜಿಲ್ಲೆಯಲ್ಲಿ 750 ಅಂಗನವಾಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಪ್ರತಿ ಗ್ರಾ.ಪಂ.ಗೆ ₹20,000 ಅನುದಾನ ಬಿಡುಗಡೆ ಮಾಡಲಾಗಿದೆ” ಎಂದು ತಿಳಿಸಿದರು.
16 ಶಿಶು ಪಾಲನಾ ಕೇಂದ್ರಗಳಿದ್ದು, ಈ ಕೇಂದ್ರಗಳಲ್ಲಿ ರಾಯಚೂರಿನಲ್ಲಿ 75, ಲಿಂಗಸುಗೂರಿನಲ್ಲಿ 50 ಹಾಗೂ ದೇವದುರ್ಗದಲ್ಲಿ 75 ಮಕ್ಕಳು ದಾಖಲಾಗಿದ್ದಾರೆ. 2017-18ನೇ ಸಾಲಿನ ಅನುದಾನ ಮಾತ್ರ ಬಿಡುಗಡೆಯಾಗಿದೆ. ಇನ್ನೂ 3 ವರ್ಷದ ಅನುದಾನ ಬಿಡುಗಡೆಯಾಗಬೇಕಿದೆ” ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ರಮಾಕುಮಾರಿ ರಾಜಕಾರಣಕ್ಕೆ ಬರಬೇಕು: ಮಲ್ಲಿಕಾ ಬಸವರಾಜು
ಜಿ.ಪಂ ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ, ಆರೋಗ್ಯ ಇಲಾಖೆಯ ಆರ್‌ಸಿಎಚ್ ಅಧಿಕಾರಿ ನಂದಿತಾ, ಎಲ್ಲ ತಾಲೂಕುಗಳ ಸಿಡಿಪಿಒ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಮಹಮದ್, ಶಿಕ್ಷಣಾಧಿಕಾರಿ ಆರ್ ಇಂದಿರಾ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ವರದಿ : ಹಫೀಜುಲ್ಲ
