ಹಲವು ಸುತ್ತುಗಳ ಮಾತುಕತೆಯ ಬಳಿಕ ದೆಹಲಿ ಕೇಂದ್ರಾಡಳಿತ ಪ್ರದೇಶದ ಲೋಕಸಭೆ ಕ್ಷೇತ್ರಗಳ ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್ ಹಾಗೂ ಅಮ್ ಆದ್ಮಿ ಪಕ್ಷಗಳು ಅಂತಿಮ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಉಭಯ ಪಕ್ಷಗಳು ನಾಲ್ಕು – ಮೂರು ಸೀಟು ಹಂಚಿಕೆ ಸೂತ್ರಕ್ಕೆ ಒಪ್ಪಿಕೊಂಡಿವೆ. ಎಎಪಿ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎನ್ನಲಾಗಿದೆ.
“ಎರಡು ಪಕ್ಷಗಳ ನಡುವಣ ದೆಹಲಿಯ ಸೀಟು ಹಂಚಿಕೆ ಒಪ್ಪಂದ ಅಂತಿಮ ಹಂತ ತಲುಪಿದೆ. ಯಾವ ಕ್ಷೇತ್ರಗಳಲ್ಲಿ ಉಭಯ ಪಕ್ಷಗಳು ಸ್ಪರ್ಧಿಸಲಿವೆ ಎಂಬುದನ್ನು ಶೀಘ್ರದಲ್ಲೇ ಬಹಿರಂಗೊಳಿಸುತ್ತೇವೆ” ಎಂದು ಎಎಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಈ ವಾರ ಎರಡು ಪಕ್ಷಗಳ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದವು. ದೆಹಲಿಯಲ್ಲಿ ಉತ್ತರ, ಪೂರ್ವ ಹಾಗೂ ಪಶ್ಚಿಮ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರ ತುಷ್ಟೀಕರಣ, ಬಿಜೆಪಿ ಮತ್ತು ಗೋದಿ ಮೀಡಿಯಾ
ನಿನ್ನೆಯಷ್ಟೆ(ಫೆ.21) ಎಸ್‌ಪಿ ಹಾಗೂ ಕಾಂಗ್ರೆಸ್ ನಡುವೆ ಉತ್ತರ ಪ್ರದೇಶದ ಸೀಟು ಹಂಚಿಕೆ ಬಿಕ್ಕಟ್ಟು ಬಗೆಹರಿದಿತ್ತು. 80 ಲೋಕಸಭಾ ಸದಸ್ಯರಿರುವ ರಾಜ್ಯದಲ್ಲಿ ಕಾಂಗ್ರೆಸ್ 17 ಹಾಗೂ ಎಸ್‌ಪಿ 62 ಕ್ಷೇತ್ರಗಳಲ್ಲಿ ಒಟ್ಟಾಗಿ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಪಂಜಾಬ್ ರಾಜ್ಯದ ಎಲ್ಲ 13 ಸ್ಥಾನಗಳಲ್ಲೂ ಎಎಪಿ ಸ್ಪರ್ಧಿಸಲಿದೆ ಎಂದು ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರೀವಾಲ್ ಕಳೆದ ವಾರ ತಿಳಿಸಿದ್ದರು.
ಪಂಜಾಬ್‌ನಲ್ಲಿ ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 8, ಎಸ್‌ಎಡಿ 2, ಬಿಜೆಪಿ 2 ಹಾಗೂ ಎಎಪಿ ಒಂದು ಕ್ಷೇತ್ರದಲ್ಲಿ ಜಯಗಳಿಸಿತ್ತು. ಅದೇ ರೀತಿ ದೆಹಲಿಯಲ್ಲಿ ಎಲ್ಲ 7 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.
