ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿರುವ ಒಟ್ಟು 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಸೋಮವಾರ (ಫೆ.19) ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ “ಕಂದಾಯ ಇಲಾಖೆಯ ಕೆಲಸವನ್ನು ಮತ್ತಷ್ಟು ಚುರುಕುಗೊಳಿಸಲು ಹಾಗೂ ಜನರಿಗೆ ಸರಳ ಆಡಳಿತ ನೀಡುವ ಉದ್ದೇಶದಿಂದ ಶೀಘ್ರದಲ್ಲೇ 1000 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದರು. ಸಚಿವರ ಹೇಳಿಕೆ ಬೆನ್ನಲ್ಲೇ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ.
ನೇರ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು.
ಗ್ರಾಮ ಆಡಳಿತ ಅಧಿಕಾರಿಗೆ ₹21,400 ರೂ.ನಿಂದ 42,000 ರೂ.ವರೆಗೂ ವೇತನ ಶ್ರೇಣಿ ಇರಲಿದೆ. ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಮತ್ತು 18 ವರ್ಷಗಳು ತುಂಬಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಪಿಂಚಣಿ ರಹಿತ (ಎನ್‌ಪಿಎಸ್) ಹುದ್ದೆ ಇದಾಗಿದ್ದು, ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 35 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 38 ವರ್ಷ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ /ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ನಲ್ಲಿ ತೋರಿಸುವ ಲಿಂಕ್ ಅನ್ನು ಆಯ್ಕೆ ಮಾಡಿ ಆನ್‌ಲೈನ್ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಬೇಕು. ಅಭ್ಯರ್ಥಿಯು ಯಾವುದಾದರು ಒಂದು ಜಿಲ್ಲೆಗೆ ಮಾತ್ರ ಹುದ್ದೆ ಬಯಸಿ, ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಒಮ್ಮೆ ಸಲ್ಲಿಸಿದ ಅರ್ಜಿಯಲ್ಲಿನ ಯಾವುದೇ ಮಾಹಿತಿಯನ್ನು ಯಾವುದೇ ಹಂತದಲ್ಲಿ ಬದಲಾವಣೆ ಅಥವಾ ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ. ಆದ್ದರಿಂದ ಅಭ್ಯರ್ಥಿಗಳು ಎಚ್ಚರಿಕೆಯಿಂದ ಅಧಿಸೂಚನೆ ಓದಿ ಅರ್ಥೈಸಿಕೊಂಡು ಅರ್ಜಿ ಸಲ್ಲಿಸಬೇಕು. ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದ್ದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬಳಸಲಾದ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುವುದು ಹಾಗೂ ಸದರಿ ಅರ್ಜಿಯಲ್ಲಿ ಕೋರಲಾದ ಒಂದು ಜಿಲ್ಲೆಗೆ ಮಾತ್ರ ಪರಿಗಣಿಸಲಾಗುತ್ತಿದೆ.
ಅರ್ಜಿ ಸಲ್ಲಿಕೆ ದಿನಾಂಕ ಮತ್ತು ಶುಲ್ಕ ವಿವರ
ಮಾರ್ಚ್ 4, 2024ರಂದು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ನೀಡಲಿದ್ದು, ಏಪ್ರಿಲ್ 04, 2024 ಕೊನೆಯ ದಿನಾಂಕ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಏಪ್ರಿಲ್ 06, 2024 ಕೊನೆಯ ದಿನ ನಿಗದಿಪಡಿಸಲಾಗಿದೆ.
ಆನ್‌ಲೈನ್ ಮೂಲಕವೇ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳು (ಪ್ರವರ್ಗ 2ಎ, 2ಬಿ, 3ಎ, 3ಬಿ) ಅವರಿಗೆ ₹750 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ವಿಕಲ ಚೇತನ ಅಭ್ಯರ್ಥಿಗಳಿಗೆ ₹500 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷಾ ವಿಧಾನ
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಫ್ ಲೈನ್-ಒಎಂಆರ್ ಮಾದರಿ (Offline-OMR type) ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ. ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಹಾಗೂ ಎರಡು ಪ್ರಶ್ನೆ ಪತ್ರಿಕೆಗಳನ್ನು ಅಭ್ಯರ್ಥಿಗಳು ಎದುರಿಸಬೇಕು.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿವೆ. (ಆಡಳಿತಾತ್ಮಕ ಉದ್ದೇಶದಿಂದ ಜಿಲ್ಲಾ ಪರೀಕ್ಷಾ ಕೇಂದ್ರಗಳು ಬದಲಾವಣೆಯ ಷರತ್ತಿಗೆ ಒಳಪಟ್ಟಿದೆ). ಅಭ್ಯರ್ಥಿಗಳಿಗೆ ಪರೀಕ್ಷೆಯ ಪ್ರವೇಶ ಪತ್ರ(ಹಾಲ್ ಟಿಕೆಟ್)ಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಸೂಚಿಸಿದ ದಿನಾಂಕದಂದು ಪರೀಕ್ಷೆಗೆ ಹಾಜರಾಗಬೇಕು.
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯು ಬಹು ಆಯ್ಕೆ ಮಾದರಿ ಪತ್ರಿಕೆಯಾಗಿದ್ದು, ಗರಿಷ್ಠ 150 ಅಂಕಗಳನ್ನು ಒಳಗೊಂಡಿರುತ್ತದೆ. ಅಭ್ಯರ್ಥಿಗಳು ಇದರಲ್ಲಿ ಅರ್ಹತೆ ಗಳಿಸಲು ಕನಿಷ್ಠ 50 ಅಂಕಗಳನ್ನು ಗಳಿಸತಕ್ಕದ್ದು.
ಕನಿಷ್ಠ 50 ಅಂಕಗಳನ್ನು ಗಳಿಸದ ಅಭ್ಯರ್ಥಿಗಳು ಆಯ್ಕೆಗೆ ಅರ್ಹರಾಗುವುದಿಲ್ಲ. (ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಹುದ್ದೆಗಳ ಆಯ್ಕೆಗೆ ಪರಿಗಣಿಸುವುದಿಲ್ಲ)
ಪತ್ರಿಕೆ 1: 100 ಅಂಕ, 2 ಗಂಟೆ
ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಸಾಮಾನ್ಯ ಜ್ಞಾನ(GENERAL KNOWLEDGE) ವಿಷಯಗಳು. (ಬಿ) ದೈನಂದಿನ ಗ್ರಹಿಕೆಯ ವಿಷಯಗಳು (ಸಿ) ಭಾರತದ ಸಂವಿಧಾನದ ಸ್ಕೂಲ ನೋಟದ ವಿಷಯಗಳು. (ಡಿ) ವಿಶೇಷವಾಗಿ ಕರ್ನಾಟಕ್ಕೆ ಸಂಬಂಧಿಸಿದ ಭಾರತದ ಇತಿಹಾಸ. (ಇ) ಕರ್ನಾಟಕ್ಕೆ ಸಂಬಂಧಿಸಿದಂತೆ ಭಾರತದ ಭೂಗೋಳ ವಿಷಯಗಳು. (ಎಫ್) ರಾಜ್ಯ ಮತ್ತು ಪ್ರಾದೇಶಿಕ ಆಡಳಿತ ಕುರಿತ ವಿಷಯಗಳು. (ಜಿ) ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ ಸಂಸ್ಥೆಗಳಿಗೆ ಸಂಬಂಧಿಸಿದ ಉಪಕ್ರಮಗಳನ್ನು ಒಳಗೊಂಡಂತೆ ಕರ್ನಾಟಕ ಆರ್ಥಿಕತೆಯ ಅಭಿವೃದ್ಧಿ ಕುರಿತ ವಿಷಯಗಳು. (ಎಚ್) ಕರ್ನಾಟಕದ ಪರಿಸರ ಸಂಬಂಧಿ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತ ವಿಷಯಗಳು.
ಪತ್ರಿಕೆ 2: 100 ಅಂಕ, 2 ಗಂಟೆ
(ಎ) ಸಾಮಾನ್ಯ ಕನ್ನಡ (ಬಿ) ಸಾಮಾನ್ಯ ಇಂಗ್ಲಿಷ್ (ಸಿ) ಕಂಪ್ಯೂಟರ್ ಜ್ಞಾನ ವಿಷಯದ ಮೇಲೆ ಪರೀಕ್ಷೆ ನಡೆಯಲಿದೆ.
ಋಣಾತ್ಮಕ ಮೌಲ್ಯಮಾಪನ
ಸ್ಪರ್ಧಾತ್ಮಕ ಪರೀಕ್ಷೆ ಪ್ರಶ್ನೆ ಪತ್ರಿಕೆಗಳಲ್ಲಿನ ಪ್ರತಿಯೊಂದು ಪ್ರಶ್ನೆಗೂ 4 ಪರ್ಯಾಯ ಉತ್ತರಗಳಿದ್ದು, ಅಭ್ಯರ್ಥಿಯು ಯಾವುದಾದರೂ ಒಂದು ಸರಿ ಉತ್ತರವನ್ನು ಮಾತ್ರ ಆಯ್ಕೆ ಮಾಡತಕ್ಕದ್ದು. ಪ್ರತಿ ತಪ್ಪು ಉತ್ತರಕ್ಕೆ ನಾಲ್ಕನೇ ಒಂದಂಶದಷ್ಟು (1/4) ಅಂಕಗಳನ್ನು ಕಳೆಯಲಾಗುತ್ತಿದೆ.
ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಕನ್ನಡ ಮತ್ತು ಆಂಗ್ಲಭಾಷೆಗಳೆರಡರಲ್ಲೂ ಇರುತ್ತವೆ. ಕನ್ನಡ ಭಾಷೆಯಲ್ಲಿ ಪ್ರಶ್ನೆಗಳ ಭಾಷಾಂತರದಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದಲ್ಲಿ ಅಭ್ಯರ್ಥಿಗಳು ಆಂಗ್ಲಭಾಷೆ ಪ್ರಶ್ನೆಗಳನ್ನು ಪರಿಶೀಲಿಸಿಕೊಂಡು, ಉತ್ತರ ಬರೆಯಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ.
- ಹುದ್ದೆಯ ವಿವರ: ಗ್ರಾಮ ಆಡಳಿತ ಅಧಿಕಾರಿ ಅಥವಾ ಗ್ರಾಮ ಲೆಕ್ಕಿಗ
- ಹುದ್ದೆಗಳ ಸಂಖ್ಯೆ: 1000
- ಅರ್ಜಿ ಸಲ್ಲಿಸಲು ಆರಂಭ: ಮಾ.4,2024
- ಅರ್ಜಿ ಕೊನೆಯ ದಿನಾಂಕ: ಏಪ್ರಿಲ್ 4, 2024
- ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನ: ಏಪ್ರಿಲ್ 4, 2024
- ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್
- ಅರ್ಜಿ ಸಲ್ಲಿಸುವ ವೆಬ್‌ಸೈಟ್ ಲಿಂಕ್: http://kea.kar.nic.in

Work
Work
Work