ಮಾಧ್ಯಮ ಸಂಸ್ಥೆಗಳಾದ ದಿ ನ್ಯೂಸ್ ಮಿನಿಟ್ ಹಾಗೂ ನ್ಯೂಸ್ ಲಾಂಡ್ರಿ ಬಿಜೆಪಿಗೆ ದೇಣಿಗೆ ನೀಡಿದ 30 ಸಂಸ್ಥೆಗಳ ಸಂಪೂರ್ಣ ಪಟ್ಟಿಯನ್ನು ತನ್ನ ತನಿಖಾ ವರದಿಯಲ್ಲಿ ಬಿಡುಗಡೆ ಮಾಡಿದೆ. ಈ 30 ಸಂಸ್ಥೆಗಳು 2018 ರಿಂದ 2022-23 ವರೆಗೆ 335 ಕೋಟಿಗೂ ಹೆಚ್ಚು ದೇಣಿಗೆಯನ್ನು ನೀಡಿವೆ.
ಈ ಐದು ವರ್ಷದ ಅವಧಿಯಲ್ಲಿ ಚುನಾವಣಾ ಆಯೋಗದ ದಾಖಲೆಗಳು, ಕೇಸ್ ಫೈಲ್ ಗಳು, ಹಣಕಾಸು ಸ್ಟೇಟ್‌ಮೆಂಟ್‌ಗಳು, ಕೇಂದ್ರೀಯ ಸಂಸ್ಥೆಗಳ ಸಮೀಕ್ಷೆಗಳನ್ನು ಆಧರಿಸಿ ಮಾಧ್ಯಮ ಸಂಸ್ಥೆಗಳು ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ. ತನಿಖಾ ವರದಿ ಬಹಿರಂಗಪಡಿಸಿರುವಂತೆ, ಬಿಜೆಪಿಗೆ 335 ಕೋಟಿ ದೇಣಿಗೆ ನೀಡಿದ್ದ ಕನಿಷ್ಠ 30 ಕಂಪನಿಗಳು ಈ ಮೊದಲು ಇಡಿ, ಐಟಿ ದಾಳಿಯನ್ನು ಎದುರಿಸುತ್ತಿದ್ದವು. ಅಲ್ಲದೆ ದೇಣಿಗೆ ನೀಡದಿದ್ದ ಸಂದರ್ಭದಲ್ಲಿಯೂ ದಾಳಿಗೆ ಒಳಗಾಗಿವೆ.
ಬಿಜೆಪಿಯು ಚುನಾವಣಾ ಬಾಂಡ್‌ಗಳಿಗೂ ಮುಂಚಿನಿಂದ ಇರುವ ಚುನಾವಣಾ ಟ್ರಸ್ಟ್‌ಗಳ ಮೂಲಕವೂ ಹೆಚ್ಚು ಹಣ ಪಡೆದುಕೊಂಡಿದೆ. ಯುಪಿಎ ಅವಧಿಯಲ್ಲಿ 2013ರಲ್ಲಿ ಬಂದಾಗಿನಿಂದಲೂ ಚುನಾವಣಾ ಟ್ರಸ್ಟ್ ಯೋಜನೆ ಮೂಲಕ ಬಿಜೆಪಿಗೇ ಹೆಚ್ಚು ಲಾಭವಾಗಿದೆ.
ಬಿಜೆಪಿಗೆ ದೇಣಿಗೆ ನೀಡಿಯೂ ಇಡಿ, ಐಟಿ ಭಯದಲ್ಲಿದ್ದ 30 ಕಂಪನಿಗಳಿವು
1.ಸೋಮ್ ಡಿಸ್ಟಿಲರೀಸ್ : ಮಧ್ಯಪ್ರದೇಶ ಮೂಲದ ಜೆಕೆ ಅರೋರಾ ಮತ್ತು ಎಕೆ ಅರೋರಾ ಒಡೆತನದ ಈ ಕಂಪನಿ 2018-19ರಲ್ಲಿ ಬಿಜೆಪಿಗೆ ರೂ 4.25 ಕೋಟಿ ದೇಣಿಗೆ ನೀಡಿತ್ತು. ಮುಂದಿನ ಹಣಕಾಸು ವರ್ಷದಲ್ಲಿ ಯಾವ ದೇಣಿಗೆಯನ್ನೂ ನೀಡಿರಲಿಲ್ಲ. ಜುಲೈ 2020ರಲ್ಲಿ, ಜಿಎಸ್‌ಟಿ ಗುಪ್ತಚರ ಅಧಿಕಾರಿಗಳು ಅರೋರಾ ಸೋದರರನ್ನು ಬಂಧಿಸಿ 8 ಕೋಟಿ ರೂ.ಗಳ ತೆರಿಗೆ ವಂಚನೆ ಆರೋಪ ಹೊರಿಸಿದರು. ಜಾಮೀನು ಅರ್ಜಿಯನ್ನು ಎರಡು ಬಾರಿ ತಿರಸ್ಕರಿಸಿದ ನಂತರ ಜಾಮೀನು ನೀಡಲಾಯಿತು.
ಬಿಡುಗಡೆಯಾದ ಹತ್ತೇ ದಿನಗಳಲ್ಲಿ ಕಂಪನಿ ಬಿಜೆಪಿಗೆ 1 ಕೋಟಿ ರೂ.ಗಳ ದೇಣಿಗೆ ನೀಡಿತು, ಅದೇ ಹಣಕಾಸು ವರ್ಷದಲ್ಲಿ ಮತ್ತೆ 1 ಕೋಟಿಯನ್ನು ಎರಡು ಕಂತುಗಳಲ್ಲಿ ಕೊಟ್ಟಿತ್ತು. ಮೇ 2021ರಲ್ಲಿ ಮತ್ತೆ 2 ಕೋಟಿ ದೇಣಿಗೆಯನ್ನು ಬಿಜೆಪಿಗೆ ನೀಡಿತು. ಆದರೆ ಐದು ತಿಂಗಳ ನಂತರ, ಭಾರತೀಯ ಸ್ಪರ್ಧಾತ್ಮಕ ಆಯೋಗದಿಂದ ದಾಳಿಯಾಯಿತು. ಬೆಲೆ ನಿಗದಿಯಲ್ಲಿ ಅಕ್ರಮವೆಸಗಿದ ಆರೋಪ ಮಾಡಲಾಯಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಂಡ್ ಎಂಬ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಜನ ಪ್ರಶ್ನಿಸಬಾರದೇ?
2022ರ ಜೂನ್‌ನಲ್ಲಿ ಬಿಜೆಪಿಗೆ ಇನ್ನೂ 1 ಕೋಟಿ ರೂಪಾಯಿಗಳನ್ನು ಕಂಪನಿ ದೇಣಿಗೆ ನೀಡಿತು. ಆದರೂ 2023ರ ನವೆಂಬರ್‌ನಲ್ಲಿ ವಿಧಾನಸಭೆ ಚುನಾವಣೆಯ ನಡುವೆಯೇ ಐಟಿ ಇಲಾಖೆಯಿಂದ ಶೋಧ ನಡೆಯಿತು. ಕಂಪನಿ ವಿರುದ್ಧದ ಪ್ರಕರಣದ ತನಿಖೆ ಇನ್ನು ಬಾಕಿ ಇದೆ. ಇದಲ್ಲದೆ ಸೋಮ್ ಡಿಸ್ಟಿಲರೀಸ್ 2019-2020ರಲ್ಲಿ ಕಾಂಗ್ರೆಸ್‌ಗೆ 1 ಕೋಟಿ ರೂ. ದೇಣಿಗೆ ನೀಡಿತ್ತು.
- ಎಸ್‌ಎನ್‌ಜೆ ಡಿಸ್ಟಿಲರೀಸ್ : ಡಿಎಂಕೆಯ ಎಂ ಕರುಣಾನಿಧಿಗೆ ಆಪ್ತರಾಗಿದ್ದ ಎಸ್‌ಎನ್ ಜಯಮುರುಗನ್ ಒಡೆತನದ ಈ ಮೇಲೆ 2019ರ ಆಗಸ್ಟ್ ನಲ್ಲಿ ಐಟಿ ದಾಳಿ ನಡೆಯಿತು. ಸತತ ನಾಲ್ಕು ತಿಂಗಳ ನಂತರ ಈ ಕಂಪನಿ ಬಿಜೆಪಿಗೆ 1.05 ಕೋಟಿ ರೂ. ದೇಣಿಗೆ ನೀಡಿತು. ಮಾರ್ಚ್ 2021 ರಲ್ಲಿ ಬಿಜೆಪಿಗೆ ಮತ್ತೆ 6 ಕೋಟಿ ರೂ.ಗಳನ್ನು ನೀಡಿತು. ತಮಿಳುನಾಡು ಚುನಾವಣೆಗೆ ಕೆಲ ಕಾಲ ಮೊದಲು ಏಪ್ರಿಲ್ 2021ರಲ್ಲಿ ಐಟಿ ಶೋಧ ನಡೆಯಿತು. 2022-23ರಲ್ಲಿ ಕಂಪನಿ ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಗೆ 5 ಕೋಟಿ ರೂ. ನೀಡಿತು. ಪ್ರುಡೆಂಟ್ ಟ್ರಸ್ಟ್ ತನ್ನ ಬಹುಪಾಲು ಹಣವನ್ನು ಬಿಜೆಪಿಗೆ ದೇಣಿಗೆ ನೀಡುತ್ತದೆ.
- ಐಆರ್‌ಬಿ ಇನ್‌ಪ್ರಾಸ್ಟ್ರಕ್ಚರ್ ಡೆವಲಪರ್ಸ್ ಲಿಮಿಟೆಡ್: ಮುಂಬೈ ಮೂಲದ ಕಂಪನಿ ಕಳೆದ ದಶಕದಲ್ಲಿ ಬಿಜೆಪಿಗೆ ಹೆಚ್ಚು ದೇಣಿಗೆ ನೀಡಿದೆ. 2013-14 ರಲ್ಲಿ 2.3 ಕೋಟಿ ಮತ್ತು 2014-15 ರಲ್ಲಿ 14 ಕೋಟಿ ರೂ. ನೀಡಿದೆ. ಭೂಕಬಳಿಕೆ ಮತ್ತು ವಂಚನೆ ಆರೋಪದಲ್ಲಿ ಸಿಬಿಐ ಪುಣೆ ಮತ್ತು ಮುಂಬೈನಲ್ಲಿ ಕಂಪನಿಯ ಮೇಲೆ ದಾಳಿ ಮಾಡಿದ ಮೇಲಂತೂ ಅದೇ ವರ್ಷದಲ್ಲಿ ದೇಣಿಗೆಯಲ್ಲಿ ತೀವ್ರ ಏರಿಕೆಯಾಯಿತು. ಕಂಪನಿಯ ಎರಡು ಅಂಗಸಂಸ್ಥೆಗಳಾದ ಮಾಡರ್ನ್ ರೋಡ್ ಮೇಕರ್ಸ್ ಮತ್ತು ಐಡಿಯಲ್ ರೋಡ್ ಬಿಲ್ಡರ್ಸ್ ಕೂಡ ಬಿಜೆಪಿಗೆ 84 ಕೋಟಿ ರೂ. ನೀಡಿವೆ. ಮಾಡರ್ನ್ ರೋಡ್ ಮೇಕರ್ಸ್ ಕಾಂಗ್ರೆಸ್‌ಗೆ ಕೂಡ 2014- 15ರಲ್ಲಿ 5 ಕೋಟಿ ರೂ. ನೀಡಿತ್ತು.
- ಆಸ್ಟಲ್ ಲಿ : ಅಹಮದಾಬಾದ್ ಮೂಲದ ಕಂಪನಿಯ ಮೇಲೆ ನವೆಂಬರ್ 2021ರಲ್ಲಿ ದಾಳಿ ಆದ ಎರಡು ತಿಂಗಳ ನಂತರ, ಅದು ಬಿಜೆಪಿಗೆ 1 ಕೋಟಿ ರೂ. ನೀಡಿತು.
5 . ಶ್ರೀ ಸಿಮೆಂಟ್ಸ್: ಕೋಲ್ಕತ್ತಾ ಮೂಲದ ಕಂಪನಿ 2020-21 ಮತ್ತು 2021-22ರಲ್ಲಿ ಬಿಜೆಪಿಗೆ 12 ಕೋಟಿ ರೂ.ಗಳನ್ನು ನೀಡಿದೆ. ಆದರೆ 2022-23ರಲ್ಲಿ ಯಾವುದೇ ದೇಣಿಗೆ ನೀಡಿರಲಿಲ್ಲ. ಕಳೆದ ವರ್ಷ ಜೂನ್‌ನಲ್ಲಿ ಐಟಿ ದಾಳಿ ಆಯಿತು. 23,000 ಕೋಟಿ ರೂ. ತೆರಿಗೆ ವಂಚನೆ ಆರೋಪ ಮಾಡಲಾಯಿತು.
ಒಂದು ತಿಂಗಳ ನಂತರ, ಜುಲೈ 11 ರಂದು ಕಂಪನಿ ವಿರುದ್ಧ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ತನಿಖೆ ಆದೇಶ ಹೊರಡಿಸಿತು. ಕಂಪನಿಯನ್ನು ಅದಾನಿ ಒಡೆತನದ ಅಂಬುಜಾ ಸಿಮೆಂಟ್ ಸ್ವಾಧೀನಪಡಿಸಿಕೊಂಡಿತು.
- ಯುಎಸ್‌ವಿ ಪ್ರೈವೇಟ್ ಲಿಮಿಟೆಡ್ : ಮುಂಬೈ ಮೂಲದ ಔಷಧೀಯ ಮತ್ತು ಜೈವಿಕ ತಂತ್ರಜ್ಞಾನ ಕಂಪನಿ. ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ ಮತ್ತು ಉದ್ಯಮಿ ವಿಠಲ್ ಬಾಲಕೃಷ್ಣ ಗಾಂಧಿ ಪ್ರಾರಂಭಿಸಿದ್ದ ಕಂಪನಿಯನ್ನು ಈಗ ಅವರ ಮೊಮ್ಮಗಳು, ದೇಶದ ಎರಡನೇ ಶ್ರೀಮಂತ ಮಹಿಳೆ ಲೀನಾ ಗಾಂಧಿ ತಿವಾರಿ ನಡೆಸುತ್ತಿದ್ದಾರೆ. ಸೆಪ್ಟೆಂಬರ್ 2017ರಲ್ಲಿ ಕಂಪನಿಗೆ ಸಂಬಂಧಿಸಿದ 20 ಕಡೆಗಳಲ್ಲಿ ಐಟಿ ದಾಳಿಯಾಯಿತು. ಅದಾಗಿ ಒಂದು ತಿಂಗಳೊಳಗೆ ಕಂಪನಿ ಬಿಜೆಪಿಗೆ 9 ಕೋಟಿ ರೂ.ಗಳನ್ನು ನೀಡಿತು.
- ಕ್ರಿಸ್ಟಿ ಪ್ರೈಡ್ ಗ್ರಾಮ್ : ಆಹಾರ ಸಂಸ್ಕರಣಾ ಕಂಪನಿ ತಮಿಳುನಾಡಿನಾದ್ಯಂತ ಶಾಲೆಗಳಲ್ಲಿ ಮಧ್ಯಾಹ್ನದ ಊಟಕ್ಕೆ ಆಹಾರ ಪದಾರ್ಥಗಳನ್ನು ಪೂರೈಸುತ್ತದೆ. ಇದು 2017 ಬಿಜೆಪಿಗೆ 1 ಕೋಟಿ ರೂ. ನೀಡಿತ್ತು. ಜುಲೈ 2018 ರಲ್ಲಿ ಐಟಿ ರೇಡ್ ಆಯಿತು. 1,300 ಕೋಟಿ ರೂ.ಗಿಂತ ಹೆಚ್ಚಿನ ಅಘೋಷಿತ ಆದಾಯ ಜಪ್ತಿ ಮಾಡಲಾಯಿತು. ಕಂಪನಿ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ 2,400 ಕೋಟಿ ರೂ. ಕಿಕ್ ಬ್ಯಾಕ್ ನೀಡಿದೆ ಎಂದು ಆರೋಪಿಸಲಾಯಿತು. 2020ರಲ್ಲಿ ಈ ಕಂಪನಿ ಬಿಜೆಪಿಗೆ 1.96 ಕೋಟಿ ರೂ. ನೀಡಿತು, 2021-22 ಮತ್ತು 2022-23 ರಲ್ಲಿ ಮತ್ತೆ ಒಟ್ಟು 3.82 ಕೋಟಿ ರೂ. ನೀಡಿತು. ಕಂಪನಿ ವಿರುದ್ಧದ ಪ್ರಕರಣಗಳ ಕುರಿತ ವಿಚಾರಣೆ ಮುಗಿದಿದ್ದು, ತೀರ್ಪು ಬಾಕಿಯಿದೆ.
- ಯಶೋದಾ ಆಸ್ಪತ್ರೆಗಳು : ಹೈದರಾಬಾದ್ ಮೂಲದ ಆಸ್ಪತ್ರೆ ಸಮೂಹ ತೆಲಂಗಾಣದ ಮಾಜಿ ಸಿಎಂ ಕೆ ಚಂದ್ರಶೇಖರ ರಾವ್ ಅವರ ಸಂಬಂಧಿಗಳದ್ದು. ಕೆಸಿಆರ್ ಸರ್ಕಾರವಿದ್ದಾಗ ಅದರ ಕೃಪಾಕಟಾಕ್ಷದ ಆರೋಪ ಹೊತ್ತಿದ್ದ ಕಂಪನಿ 2019-20ರಲ್ಲಿ ಬಿಜೆಪಿಗೆ 2.5 ಲಕ್ಷ ರೂ. ನೀಡಿತ್ತು. ಡಿಸೆಂಬರ್ 2020ರಲ್ಲಿ ಕಂಪನಿ ಮೇಲೆ ದಾಳಿಯಾಯಿತು. 2021-22 ರಲ್ಲಿ 10 ಕೋಟಿ ಮತ್ತು 2022-23 ರಲ್ಲಿ 5 ಲಕ್ಷ ರೂ. ದೇಣಿಗೆಯನ್ನು ಬಿಜೆಪಿಗೆ ನೀಡಿದೆ.
- ಹೆಟೆರೊ ಫಾರ್ಮಾ : ಹೈದರಾಬಾದ್ ಮೂಲದ ಕಂಪನಿ. 2019-20ರಲ್ಲಿ ಹೆಟೆರೊ ಡ್ರಗ್ಸ್ ಮೂಲಕ ಬಿಜೆಪಿಗೆ 25 ಲಕ್ಷ ರೂ. ನೀಡಿತ್ತು. ಹೆಟೆರೊ ಲ್ಯಾಬ್ ಮೂಲಕ 2014ರಲ್ಲಿ 50 ಲಕ್ಷ ಮತ್ತು 2017ರಲ್ಲಿ 2 ಲಕ್ಷ ನೀಡಿತ್ತು. ಅಕ್ಟೋಬರ್ 2021ರಲ್ಲಿ ತೆರಿಗೆ ದಾಳಿ ನಡೆಯಿತು. ದಾಳಿಗೆ ಮುನ್ನ ಮತ್ತು ನಂತರ ಎರಡು ದೇಣಿಗೆಗಳಲ್ಲಿ ಬಿಜೆಪಿಗೆ ಅದು 1 ಕೋಟಿ ರೂ. ನೀಡಿತ್ತು. ಪ್ರುಡೆಂಟ್ ಟ್ರಸ್ಟ್ ಮೂಲಕ ಫೆಬ್ರವರಿ 2022ರಲ್ಲಿ 5 ಕೋಟಿ ಮತ್ತು 2022-23ರಲ್ಲಿ 5.25 ಕೋಟಿ ರೂ. ನೀಡಿತು. ಅಲ್ಲದೆ, 2022-23ರಲ್ಲಿ ಕಂಪನಿ ಹೆಟೆರೊ ಲ್ಯಾಬ್ ಮೂಲಕ 4.2 ಕೋಟಿ ದೇಣಿಗೆ ನೀಡಿತ್ತು. ಐಟಿ ಅಧಿಕಾರಿಗಳು 550 ಕೋಟಿ ಅಘೋಷಿತ ಆದಾಯ ಪತ್ತೆಹಚ್ಚಿದ್ದು, 142 ಕೋಟಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದಾರೆ.
- ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಪ್ರೈ. ಲಿ : ಮೇ 2019ರಲ್ಲಿನ ಐಟಿ ದಾಳಿಯ ನಂತರ ಈ ಕಂಪನಿ ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಗೆ ಅತಿ ದೊಡ್ಡ ದೇಣಿಗೆ ನೀಡಿತು. ಮಾರ್ಚ್ 2021 ರಲ್ಲಿ ಅದು ನೀಡಿದ ದೇಣಿಗೆ ಮೊತ್ತ 100 ಕೋಟಿ. ಪ್ರುಡೆಂಟ್ ಆ ವರ್ಷ ತನ್ನಲ್ಲಿನ ಒಟ್ಟು ಮೊತ್ತವಾದ 245 ಕೋಟಿ ರೂ.ಗಳಲ್ಲಿ ಶೇ.84ರಷ್ಟನ್ನು ಬಿಜೆಪಿಗೆ ನೀಡಿತು. 2022- 23 ರಲ್ಲಿ ಕಂಪನಿ ಬಿಜೆಪಿಗೆ ನೇರವಾಗಿ 5 ಕೋಟಿ ರೂ. ನೀಡಿತು, ಇದರ ಮಾಲೀಕ ವಿವಾದಿತ ಉದ್ಯಮಿ ಸ್ಯಾಂಟಿಗೊ ಮಾರ್ಟಿನ್ ವಿರುದ್ಧ ಸಾವಿರಾರು ಕೋಟಿ ರೂ ವಂಚನೆಯ ಹಲವಾರು ಪ್ರಕರಣಗಳು ಇವೆ. ವಿಶೇಷ ಅಂದರೆ ಇಷ್ಟೆಲ್ಲಾ ಆರೋಪ ಹೊತ್ತಿರುವ ಸ್ಯಾಂಟಿಗೊ ಅವರ ಮಗ ಚಾರ್ಲ್ಸ್ ಜೋಸೆಫ್ ಮಾರ್ಟಿನ್ 2015ರಲ್ಲಿ ಬಿಜೆಪಿ ಸೇರಿಕೊಂಡಿದ್ದಾರೆ.
- ಕೆಎಎಲ್‌ಎಸ್ ಡಿಸ್ಟಿಲರೀಸ್ : ತಮಿಳುನಾಡಿನ ಕಂಪನಿ. 2019ರ ಆಗಸ್ಟ್‌ನಲ್ಲಿ ಐಟಿ ದಾಳಿ ನಡೆಯಿತು, ನಂತರದ ವರ್ಷದಲ್ಲಿ ಅದು ಬಿಜೆಪಿಗೆ 5 ಕೋಟಿ ರೂ. ದೇಣಿಗೆ ನೀಡಿತು. 2021- 22ರಲ್ಲೂ 3 ಕೋಟಿ ರೂ. ನೀಡಿತು. ಕೆಎಎಲ್ಎಸ್ ಡಿಸ್ಟಿಲರೀಸ್‌ಗೆ ಸಂಬಂಧಿಸಿದ ರೆಂಗಾನಾಯಕಿ ಏಜೆನ್ಸಿ 2021-22ರಲ್ಲಿ ಎರಡು ಕಂತುಗಳಲ್ಲಿ ಬಿಜೆಪಿಗೆ 2 ಕೋಟಿ ರೂ. ನೀಡಿತು. 2022-23ರಲ್ಲಿ 2 ಲಕ್ಷವನ್ನಷ್ಟೇ ನೀಡಿತು.
- ಚಿರಿಪಾಲ್ ಇಂಡಸ್ಟ್ರೀಸ್ ಲಿಮಿಟೆಡ್ : ಅಹಮದಾಬಾದ್ ಮೂಲದ ಕಂಪನಿ 2019-20ರಲ್ಲಿ ಬಿಜೆಪಿಗೆ 2.25 ಕೋಟಿ ರೂ. ನೀಡಿದೆ. ಆದರೆ ನಂತರ ಎರಡು ವರ್ಷ ದೇಣಿಗೆ ನೀಡಿರಲಿಲ್ಲ. ಜುಲೈ 2022ರಲ್ಲಿ ರೇಡ್ ನಡೆಸಿ, 10 ಕೋಟಿ ಹಣ ವಶಪಡಿಸಿಕೊಳ್ಳಲಾಯಿತು. ಅನಂತರ ಕಂಪನಿ 2022-23ರಲ್ಲಿ ಬಿಜೆಪಿಗೆ 2.61 ಕೋಟಿ ರೂ. ದೇಣಿಗೆ ನೀಡಿತು.
- ಲಲಿತಾ ಜುವೆಲರಿ : ಚೆನ್ನೈ ಮೂಲದ ಕಂಪನಿ 2021- 22ರಲ್ಲಿ ಬಿಜೆಪಿಗೆ 1 ಕೋಟಿ ರೂ. ನೀಡಿತ್ತು. ಅಘೋಷಿತ ಆದಾಯದ ಆರೋಪದ ಮೇಲೆ ಮಾರ್ಚ್ 2021ರಲ್ಲಿ ಐಟಿ ರೇಡ್ ಬಳಿಕ ಈ ದೇಣಿಗೆ ಬಿಜೆಪಿ ಹೋಯಿತು.
- ಅರಬಿಂದೋ ರಿಯಾಲ್ಟಿ ಮತ್ತು ಇನ್ಸಾಸ್ಟ್ರಕ್ಟರ್ ಪ್ರೈ. ಲಿಮಿಟೆಡ್ : ಹೈದರಾಬಾದ್ ಮೂಲದ ಫಾರ್ಮಾ ಕಂಪನಿ 2020-21ರಲ್ಲಿ ಬಿಜೆಪಿಗೆ 9 ಕೋಟಿ ರೂ. ದೇಣಿಗೆ ನೀಡಿತ್ತು. ಆದರೆ ಮುಂದಿನ ವರ್ಷದಲ್ಲಿ ಯಾವುದೇ ದೇಣಿಗೆ ನೀಡಿರಲಿಲ್ಲ. ನವೆಂಬರ್ 2022ರಲ್ಲಿ ಇಡಿ ದಾಳಿ ಆಯಿತು. ಕಂಪನಿ ನಿರ್ದೇಶಕ ಶರತ್ ಚಂದ್ರ ರೆಡ್ಡಿ ಪೆನಕಾ ಅವರನ್ನು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿಸಲಾಯಿತು. ಕಂಪನಿಯ ಅಂಗಸಂಸ್ಥೆ ಆರೋ ಇನ್ಸಾಪ್ರೈವೇಟ್ ಲಿಮಿಟೆಡ್ 2021-22ರಲ್ಲಿ ಬಿಜೆಪಿಗೆ 1 ಕೋಟಿ ರೂ. ನೀಡಿದೆ.
- ಸಿಂಟೆಕ್ಸ್ ಇಂಡಸ್ಟ್ರೀಸ್ ಲಿಮಿಟೆಡ್ : ಅಹಮದಾಬಾದ್ ಮೂಲದ ಕಂಪನಿ ಮೇಲೆ ಡಿಸೆಂಬರ್ 2017ರಲ್ಲಿ ಈಡಿ ರೇಡ್ ಅಯಿತು. 48 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಯಿತು, 2019-20ರಲ್ಲಿ ಕಂಪನಿ ಬಿಜೆಪಿಗೆ 1 ಕೋಟಿ ರೂ. ನೀಡಿತು.
- ಹಲ್ಲಿರಾಮ್ ಸ್ನಾಕ್ಸ್ ಪ್ರೈ. ಲಿಮಿಟೆಡ್ : 150 ಕೋಟಿ ರೂ. ತೆರಿಗೆ ವಂಚನೆ ಆರೋಪದ ಮೇಲೆ ಡಿಸೆಂಬರ್ 2018ರಲ್ಲಿ ಐಟಿ ದಾಳಿ. ಕಂಪನಿ 2019-20ರಲ್ಲಿ ಬಿಜೆಪಿಗೆ 31.11 ಲಕ್ಷ ಮತ್ತು 2020-21ರಲ್ಲಿ 25 ಲಕ್ಷ ರೂ.ದೇಣಿಗೆ ನೀಡಿದೆ.
- ಎಸ್‌ಪಿಎಂಎಲ್ ಓಂ ಮೆಟಲ್ಸ್ : ಜುಲೈ 2020ರಲ್ಲಿ ಐಟಿ ದಾಳಿ. ಅಣೆಕಟ್ಟು ನಿರ್ಮಾಣ ಒಪ್ಪಂದದಲ್ಲಿ ಅಕ್ರಮದ ಆರೋಪ. 2021-22ರಲ್ಲಿ ಕಂಪನಿ ಬಿಜೆಪಿಗೆ 5 ಕೋಟಿ ರೂ. ನೀಡಿತು.
- ಮಹಾಲಕ್ಷ್ಮಿ ಗ್ರೂಪ್ : ಅಸ್ಸಾಂ ಮೂಲದ ಕಂಪನಿ ವಿರುದ್ಧ ಅಕ್ರಮಗಳ ಆರೋಪ. 2011ರಲ್ಲಿ ಸಿಬಿಐ ದಾಳಿ. ಕಲ್ಲಿದ್ದಲು ವ್ಯವಹಾರದಲ್ಲಿನ ಅಕ್ರಮ ಪ್ರಕರಣಗಳ ವಿಚಾರಣೆ ಬಾಕಿ ಇದೆ. 2020-21ರಲ್ಲಿ ಬಿಜೆಪಿಗೆ ಕಂಪನಿ 2.85 ಕೋಟಿ ರೂ., 2021-2020 ರಲ್ಲಿ 7.45 ಕೋಟಿ, 2022- 23ರಲ್ಲಿ 1.49 ಕೋಟಿ ರೂ. ನೀಡಿದೆ. ಕಲ್ಲಿದ್ದಲು ಅಕ್ರಮಗಳ ಪ್ರಕರಣಗಳ ನಡುವೆಯೂ ಕಂಪನಿಗೆ ಅರುಣಾಚಲ ಪ್ರದೇಶದ ಅತಿ ದೊಡ್ಡ ಕಲ್ಲಿದ್ದಲು ಗಣಿ ಯೋಜನೆ ನೀಡಲಾಗಿದೆ.
- ಪೆಸಿಫಿಕ್ ರಫ್ತು ಕಂಪನಿ: ಉದಯಪುರ ಮೂಲದ ಕಂಪನಿ ವಿರುದ್ಧ ಅಕ್ರಮಗಳ ಆರೋಪವಿದೆ. ಆಗಸ್ಟ್ 2015ರಲ್ಲಿ ಐಟಿ ದಾಳಿ ನಡೆದಿದೆ. 2021-22ರಲ್ಲಿ ಕಂಪನಿಯ ಎರಡು ಅಂಗಸಂಸ್ಥೆಗಳ ಮೂಲಕ ಬಿಜೆಪಿಗೆ 12 ಕೋಟಿ ರೂ. ದೇಣಿಗೆ ನೀಡಲಾಗಿದೆ. ಮಾರ್ಚ್ 2022ರಲ್ಲಿ ದಾಖಲಾತಿಗಳು ಮತ್ತು ಹಣಕಾಸು ಅಕ್ರಮಗಳ ಆರೋಪದ ಮೇಲೆ ಸಿಬಿಐ ದಾಳಿ. 2022- 23ರಲ್ಲಿ ಕಂಪನಿಯಿಂದ ಬಿಜೆಪಿಗೆ 6 ಕೋಟಿ ರೂ. ದೇಣಿಗೆ. ಅನಂತರವೂ ಮತ್ತೆ ದಾಳಿ ನಡೆದಿದೆ.
- ಮೇಘಾಲಯ ಸಿಮೆಂಟ್ಸ್ ಲಿಮಿಟೆಡ್ : ಅಸ್ಸಾಂ ಮೂಲದ ಕಂಪನಿ. 2018-19ರಲ್ಲಿ ಬಿಜೆಪಿಗೆ 1.38 ಕೋಟಿ ರೂ. ದೇಣಿಗೆ ನೀಡಿದೆ. ಅದೇ ವರ್ಷ ಇನ್ನೆರಡು ಕಂಪನಿಗಳ ಜೊತೆ ಸೇರಿ ಒಂದೇ ವರ್ಷದಲ್ಲಿ ಬಿಜೆಪಿಗೆ ಒಟ್ಟು 4.27 ಕೋಟಿ ರೂ. ದೇಣಿಗೆ ನೀಡಲಾಗಿದೆ. 2019-20 ರಲ್ಲಿ ಬಿಜೆಪಿಗೆ 1.5 ಕೋಟಿ ರೂ. ಹಾಗೂ 2021ರಲ್ಲಿ 50 ಲಕ್ಷ ರೂ. ದೇಣಿಗೆ ನೀಡಲಾಗಿದೆ. ನವೆಂಬರ್ 2021ರಲ್ಲಿ ಐಟಿ ದಾಳಿ ನಡೆದಿದ್ದು, ಅದೇ ವರ್ಷ ಕಂಪನಿ ಬಿಜೆಪಿಗೆ 1.5 ಕೋಟಿ ರೂ. ನೀಡಿತು. ಮುಂದಿನ ಹಣಕಾಸು ವರ್ಷದಲ್ಲಿ 10 ಲಕ್ಷ ರೂ. ನೀಡಿತು. ಮೇಘಾಲಯ ಸಿಮೆಂಟ್ಸ್ 2019-2021ರ ಅವಧಿಯಲ್ಲಿ ಕಾಂಗ್ರೆಸ್‌ಗೆ 50 ಲಕ್ಷ ರೂ. ನೀಡಿದೆ.
- ಐಎಲ್‌ಎಬಿಎಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ : ಹೈದರಾಬಾದ್ ಮೂಲದ ಕಂಪನಿ. ಮೇ 2019ರಲ್ಲಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಆದೇಶಗಳ ಉಲ್ಲಂಘನೆ ಆರೋಪ ಕೇಳಿಬಂತು. 2004ರಲ್ಲಿ ಈ ಕಂಪನಿ ಬಿಜೆಪಿಗೆ 5 ಕೋಟಿ ರೂ. ದೇಣಿಗೆ ನೀಡಿದೆ.
- ಮೈಕ್ರೋ ಲ್ಯಾಬ್ : ಬೆಂಗಳೂರು ಮೂಲದ ಫಾರ್ಮಾಸ್ಯುಟಿಕಲ್ ಕಂಪನಿ. 2015-16ರಲ್ಲಿ ಬಿಜೆಪಿಗೆ 21 ಲಕ್ಷ ರೂ. ನೀಡಿತ್ತು. 2017-18ರಲ್ಲಿ ದೇಣಿಗೆ ಮೊತ್ತ ಸುಮಾರು 43 ಪಟ್ಟು ಹೆಚ್ಚಾಗಿತ್ತು. 9 ಕೋಟಿ ರೂ. ನೀಡಲಾಯಿತು. 2018-19ರಲ್ಲಿ 3 ಕೋಟಿ ಹಾಗೂ 2019-20ರಲ್ಲಿ 50 ಲಕ್ಷ ರೂ. ದೇಣಿಗೆ ನೀಡಿದೆ. 2020-21 ಮತ್ತು 2021-22ರಲ್ಲಿ ಬಿಜೆಪಿಗೆ ಯಾವುದೇ ದೇಣಿಗೆ ನೀಡಿರಲಿಲ್ಲ. 300 ಕೋಟಿ ರೂ. ತೆರಿಗೆ ವಂಚನೆ ಆರೋಪದ ಮೇಲೆ ಜುಲೈ 2022ರಲ್ಲಿ ಕಂಪನಿಗೆ ಸಂಬಂಧಿಸಿದ 40ಕ್ಕೂ ಹೆಚ್ಚು ಕಡೆಗಳಲ್ಲಿ ಐಟಿ ದಾಳಿ ನಡೆಯಿತು. ಅದಾದ ಬಳಿಕ ಕಂಪನಿ ಒಂದೇ ವರ್ಷದಲ್ಲಿ ಬಿಜೆಪಿಗೆ 2 ಕೋಟಿ ರೂ. ದೇಣಿಗೆ ನೀಡಿತು. ಸೆಪ್ಟೆಂಬರ್ 2022 ರಲ್ಲಿ ಕಂಪನಿಯನ್ನು ಆರೋಪ ಮುಕ್ತಗೊಳಿಸಲಾಯಿತು.
- ಸಲಾರ್ಪುರಿಯಾ ಸತ್ವ : ಬೆಂಗಳೂರು ಮೂಲದ ಕಂಪನಿ 2020-21ರಲ್ಲಿ ತನ್ನ ಎರಡು ಅಂಗಸಂಸ್ಥೆಗಳ ಮೂಲಕ ಬಿಜೆಪಿಗೆ 3 ಕೋಟಿ 60 ಲಕ್ಷ ರೂ ನೀಡಿದೆ. 2021-22 ರಲ್ಲಿ ಇದರ ಮತ್ತೊಂದು ಅಂಗಸಂಸ್ಥೆಯಿಂದ ಬಿಜೆಪಿಗೆ 4 ಕೋಟಿ ರೂ. ಹೋಗಿದೆ. ಅದೇ ವರ್ಷ ಪಾಲುದಾರಿಕೆಯಿರುವ ಮತ್ತೊಂದು ಕಂಪನಿ ಮೂಲಕ ಬಿಜೆಪಿಗೆ 50 ಲಕ್ಷ ರೂ. ದೇಣಿಗೆ ನೀಡಿದೆ. ನವೆಂಬರ್ 2022ರಲ್ಲಿ ಕಂಪನಿ ಮೇಲೆ ಇಡಿ ದಾಳಿ. 316 ಬ್ಯಾಂಕ್ ಖಾತೆಗಳ ಮುಟ್ಟುಗೋಲು. ಅದೇ ವರ್ಷದಲ್ಲಿ ಮತ್ತೆರಡು ಕಂಪನಿಗಳಿಂದ 4 ಕೋಟಿ ಹಾಗೂ 1.25 ಕೋಟಿ ಮೊತ್ತದ ಎರಡು ದೇಣಿಗೆಗಳು ಬಿಜೆಪಿಗೆ ಹೋದವು.
- ರಾಮ್ಮೋ ಗ್ರೂಪ್ : ತಮಿಳುನಾಡು ಮೂಲದ ಕಂಪನಿ. 2015ರಲ್ಲಿ ಸಿಬಿಐ ರೈಲ್ವೆ ಸರಕು ಸಾಗಣೆ ಹಗರಣದಲ್ಲಿ ಆರೋಪ ಹೊರಿಸಿತ್ತು. 2020ರಲ್ಲಿ ಕಂಪನಿ ಮೇಲೆ ಸಿಸಿಐ ದಾಳಿ ಆಯಿತು. ಮೂರು ತಿಂಗಳ ನಂತರ, ಮಾರ್ಚ್ 2021ರಲ್ಲಿ ಕಂಪನಿ ಬಿಜೆಪಿಗೆ 2 ಕೋಟಿ ರೂ. ಹಾಗೂ 2022-23ರಲ್ಲಿ ಮತ್ತೆ 50 ಲಕ್ಷ ರೂ. ದೇಣಿಗೆ ನೀಡಿತು.
- ಕೆಪಿಸಿ ಪ್ರಾಜೆಕ್ಟ್ ಲಿಮಿಟೆಡ್ : ಆಂಧ್ರ ಮೂಲದ ಕಂಪನಿ. 2021-22ರಲ್ಲಿ ಬಿಜೆಪಿಗೆ 1 ಕೋಟಿ ರೂ. ದೇಣಿಗೆ. 2022- 23ರಲ್ಲೂ ಮತ್ತೆ ಬಿಜೆಪಿಗೆ 5 ಲಕ್ಷ ರೂ. ದೇಣಿಗೆ ನೀಡಿತ್ತು. ಡಿಸೆಂಬರ್ 2023ರಲ್ಲಿ ಕಂಪನಿ ಮೇಲೆ ಐಟಿ ದಾಳಿ ನಡೆಯಿತು
- ಬ್ರಿಗೇಡ್ ಎಂಟರ್‌ಪ್ರೈಸಸ್ ಲಿಮಿಟೆಡ್ : ಬೆಂಗಳೂರಿನಲ್ಲಿರುವ ಕಂಪನಿ ಮೇಲೆ ನವೆಂಬರ್ 2017 ರಲ್ಲಿ ಐಟಿ ದಾಳಿ. 2018ರಲ್ಲಿ ಬಿಜೆಪಿಗೆ ಕಂಪನಿಯಿಂದ 1.6 ಕೋಟಿ ಮತ್ತು 2019ರಲ್ಲಿ 2 ಕೋಟಿ ದೇಣಿಗೆ ನೀಡಲಾಯಿತು.
- ಬಿಜಿಆರ್ ಮೈನಿಂಗ್ ಇನ್ನಾ: ಹೈದರಾಬಾದ್ ಮೂಲದ ಕಂಪನಿ ಮೇಲೆ 2017ರಲ್ಲಿ ಸಿಬಿಐ ಪ್ರಕರಣ ದಾಖಲಿಸಿ ಜುಲೈ 2019ರಲ್ಲಿ ಅದರ ಗಣಿಗಾರಿಕೆ ಒಪ್ಪಂದ ಕೊನೆಗೊಳಿಸಲಾಯಿತು. ಐದು ತಿಂಗಳ ನಂತರ ಕಂಪನಿಯಿಂದ ಬಿಜೆಪಿಗೆ 5 ಕೋಟಿ ರೂ. ದೇಣಿಗೆ. ಕಳೆದ ವರ್ಷ ಫೆಬ್ರವರಿಯಲ್ಲಿ ಕಂಪನಿಗೆ ಸುಮಾರು 20,400 ಕೋಟಿ ಮೌಲ್ಯದ ಗುತ್ತಿಗೆ ಸರ್ಕಾದಿಂದ ದೊರೆಯಿತು.
- ಚೆನ್ನೈ ಗ್ರೀನ್ ವುಡ್ಸ್ ಪ್ರೈ. ಲಿಮಿಟೆಡ್ : ಜುಲೈ 2021ರಲ್ಲಿ ಐಟಿ ದಾಳಿ. 2022-23ರಲ್ಲಿ ಕಂಪನಿಯಿಂದ ಬಿಜೆಪಿಗೆ 1 ಕೋಟಿ ರೂ. ದೇಣಿಗೆ.
- ಎಂಜಿಎಂ ಗ್ರೂಪ್ : ಚೆನ್ನೈ ಮೂಲದ ಕಂಪನಿ. ಡಿಸೆಂಬರ್ 2021ರಲ್ಲಿ ಈಡಿ ದಾಳಿ. 293.91 ಕೋಟಿ ಮೌಲ್ಯದ ಆಸ್ತಿ ವಶ. ಏಪ್ರಿಲ್ 2021 ರಲ್ಲಿ ಕಂಪನಿಯಿಂದ ಬಿಜೆಪಿಗೆ 1 ಕೋಟಿ ರೂ. ದೇಣಿಗೆ.
- ವಿಶಾಕಾ ಇಂಡಸ್ಟ್ರೀಸ್ : ಮಾಜಿ ಕಾಂಗ್ರೆಸ್ ನ್ಯಾ. ವಿವೇಕ್ ವೆಂಕಟಸಾಮಿ ಒಡೆತನದ ಕಂಪನಿ. 2019ರಲ್ಲಿ ಬಿಜೆಪಿ ಸೇರಿದ್ದ ಅವರು, 2023ರಲ್ಲಿ ಬಿಜೆಪಿ ತೊರೆದ ಬಳಿಕ ಇಡಿ ದಾಳಿ ನಡೆದಿದೆ. ವಿವೇಕ್ ಬಿಜೆಪಿಯಲ್ಲಿದ್ದ ವೇಳೆ ಕಂಪನಿಯಿಂದ 2020- 21ರಲ್ಲಿ ಬಿಜೆಪಿಗೆ 3 ಕೋಟಿ ಮತ್ತು 2021-22ರಲ್ಲಿ 3 ಕೋಟಿ ರೂ. ದೇಣಿಗೆ ನೀಡಿದ್ದಾರೆ.

Excellent super sir
ನಾನು ತಿನ್ನುವುದಿಲ್ಲ, ತಿನ್ನಲಿಕ್ಕೆ ಬಿಡುವುದಿಲ್ಲ. ಹೇಳುವುದು ಕಾಶಿ ಕಾಂಡ ತಿನ್ನೋದು ಮಸಿಕೆಂಡ.