- ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಪ್ರಶಂಸಿಸಿದ ಎಐಸಿಸಿ ಅಧ್ಯಕ್ಷ ಖರ್ಗೆ
- ಕಾಂಗ್ರೆಸ್ ನೂತನ ಕಟ್ಟಡ ಇಂದಿರಾ ಗಾಂಧಿ ಭವನ, ಭಾರತ ಜೋಡೋ ಸಭಾಂಗಣ ಉದ್ಘಾಟನೆ
ಡಿ.ಕೆ ಶಿವಕುಮಾರ್ ಅವರು ಪಕ್ಷದ ಕೆಲಸವನ್ನು ಬಹಳ ನಿಷ್ಠೆಯಿಂದ ಮಾಡುತ್ತಾರೆ. ಹಿಡಿದ ಕೆಲಸವನ್ನು ಮಾಡಿಯೇ ತೀರುವ ಗುಣ ಅವರದ್ದು. ಪಕ್ಷದ ಎಲ್ಲ ನಾಯಕರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶಂಸಿಸಿದರು.
ಕಾಂಗ್ರೆಸ್ ನೂತನ ಕಟ್ಟಡ ಇಂದಿರಾ ಗಾಂಧಿ ಭವನ ಮತ್ತು ಭಾರತ ಜೋಡೋ ಸಭಾಂಗಣ ಉದ್ಘಾಟಿಸಿ ಅವರು ಮಾತನಾಡಿದರು. “ಇದು ವಿಶೇಷ ಮತ್ತು ಚಿಕ್ಕ ಕಾರ್ಯಕ್ರಮವಾದರೂ ಇಂದಿರಾ ಗಾಂಧಿ ಅವರ ಹೆಸರಲ್ಲಿ ಕಾಂಗ್ರೆಸ್ ಕಚೇರಿ ಕಟ್ಟಿರುವುದು ದೊಡ್ಡ ವಿಚಾರ. ದೆಹಲಿ ಕಾಂಗ್ರೆಸ್ ಕಚೇರಿ ಬಿಟ್ಟರೆ ನಂತರದ ದೊಡ್ಡ ಕಾಂಗ್ರೆಸ್ ಕಚೇರಿ ಇರುವುದು ಬೆಂಗಳೂರಿನಲ್ಲಿ” ಎಂದು ತಿಳಿಸಿದರು.
“ಡಿ.ಕೆ ಶಿವಕುಮಾರ್ ಅವರನ್ನು ರಾಜ್ಯದ ಅಧ್ಯಕ್ಷರನ್ನಾಗಿ ಮಾಡುವಾಗ ನಾನು ತಲೆ ಕೆರೆದುಕೊಳ್ಳುತ್ತಿದ್ದೆ. ಆಗ ಸೋನಿಯಾ ಗಾಂಧಿ ಅವರು ಯಾಕೆ ಎಂದು ಕೇಳಿದರು. ನಾನು ಆಗ ಈ ಆಯ್ಕೆ ಬಗ್ಗೆ ಅನುಮಾನವಿದೆ ಎಂದು ಹೇಳಿದೆ. ಆದರೆ, ಸೋನಿಯಾ ಗಾಂಧಿ ಅವರು ಎಲ್ಲವೂ ಸರಿಯಾಗಲಿದೆಯೆಂದು ಹೇಳಿದ್ದರು” ಎಂದರು.
“ಅಧ್ಯಕ್ಷರಾದ ನಂತರ ಡಿ.ಕೆ ಶಿವಕುಮಾರ್ ಅವರು ತಾವು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಿ, ಎಲ್ಲರ ಜತೆ ಸಾಗುವುದಾಗಿ ಸಾಬೀತು ಮಾಡಿ ತೋರಿಸಿದ್ದಾರೆ. ಎಲ್ಲ ನಾಯಕರ ಜತೆ ಬೆರೆತು ಕೆಲಸ ಮಾಡುತ್ತಿದ್ದಾರೆ. ಅವರು ಇದೇ ಕೆಲಸವನ್ನು ಮುಂದುವರಿಸಲಿ” ಎಂದು ಶುಭ ಕೋರಿದರು.
ಈ ಸುದ್ದಿ ಓದಿದ್ದೀರಾ? ದೇಶ ಮತ್ತು ಸಂವಿಧಾನ ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ : ರಾಹುಲ್ ಗಾಂಧಿ
‘ರಾಜ್ಯದ 150 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು’
“ನಾವು ಒಟ್ಟಾಗಿ ಕೆಲಸ ಮಾಡಿದರೆ ಕಾಂಗ್ರೆಸ್ ರಾಜ್ಯದಲ್ಲಿ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್‌ನ 4 ಗ್ಯಾರಂಟಿ ಯೋಜನೆ ಜನರಿಗೆ ತಲುಪಿಸಬೇಕು. ನಂತರ ನುಡಿದಂತೆ ನಡೆಯಬೇಕು” ಎಂದು ಕೈ ನಾಯಕರಿಗೆ ಕಿವಿಮಾತು ಹೇಳಿದರು.
“ನಾವು ಈಗಲೂ ಇಂದಿರಾ ಗಾಂಧಿ ಅವರನ್ನು ಯಾಕೆ ಸ್ಮರಿಸುತ್ತೇವೆ ಎಂದರೆ, ಅವರು ಭೂಸುಧಾರಣೆ ಕಾಯ್ದೆ, 10 ಅಂಶಗಳ ಕಾರ್ಯಕ್ರಮ ಜಾರಿ ಮಾಡಿ ಪಕ್ಷಕ್ಕೆ ಮರುಚೈತನ್ಯ ತುಂಬಿದರು. ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದರು” ಎಂದರು.
“ಇದೇ ಕಾರಣಕ್ಕೆ ದೇಶದ ಜನ ಇಂದಿರಾ ಗಾಂಧಿ ಅವರ ಜತೆ ನಿಂತರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ಇಂದಿರಾ ಅವರ ಹಾದಿಯಲ್ಲೇ ಸಾಗಬೇಕು” ಎಂದು ಹೇಳಿದರು.
“ಮೋದಿ ಅವರು ಪ್ರಜಾಪ್ರಭುತ್ವ ಮುಗಿಸಲು ಮುಂದಾಗಿದ್ದಾರೆ. ಅವರು ಸರ್ವಾಧಿಕಾರಿಯಾಗಿ ಆಡಳಿತ ನಡೆಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ಈ ಕಟ್ಟಡ ಕಟ್ಟಿರುವ ಶಿವಕುಮಾರ್ ಮತ್ತು ಇದಕ್ಕೆ ಸಹಕಾರ ನೀಡಿದ ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ಕೆ.ಜೆ ಜಾರ್ಜ್ ಅವರಿಗೆ ನಾನು ಅಭಿನಂದಿಸುತ್ತೇನೆ” ಎಂದು ತಿಳಿಸಿದರು.