ನಗರಸಭೆ ವ್ಯಾಪ್ತಿಗೆ ಬರುವ ಮಳಿಗೆಗಳನ್ನು ಖಾಲಿಮಾಡಿಸಲು ಹೋಗಿದ್ದ ನಗರಸಭೆ ಸಿಬ್ಬಂದಿಗಳಿಗೆ ಮಾರಕಾಸ್ತ್ರ ಹಿಡಿದು ಜೀವ ಬೆದರಿಕೆ ಹಾಕಿರುವ ಘಟನೆ ರಾಯಚೂರು ನಗರದ ಮಹಿಳಾ ಸಮಾಜದ ಬಳಿ ನಡೆದಿದೆ.
ಟೆಂಡರ್ ಅವಧಿ ಮುಗಿದಿದ್ದರಿಂದ ಬಾಕಿಯಿರುವ ಬಾಡಿಗೆ ಹಣ ಪಾವತಿಸಿ ಮಳಿಗೆಗಳನ್ನು ಖಾಲಿ ಮಾಡಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ನಗರಸಭೆ ಪೌರಾಯುಕ್ತರು 2023ರಲ್ಲಿ ಮಳಿಗೆಗಳ ಬಾಡಿಗೆದಾರರಿಗೆ ನೋಟಿಸ್ ನೀಡಿದ್ದರು. ಅಲ್ಲಿಂದ ಇಲ್ಲಿಯವರಗೆ ಬಾಡಿಗೆಯನ್ನೂ ಪಾವತಿಸದೇ, ಮಳಿಗೆಗಳನ್ನು ಖಾಲಿಯೂ ಮಾಡದೇ ವ್ಯಾಪಾರ ವಹಿವಾಟು ನಡೆಸುತ್ತಿದ್ದರಿಂದ ನಗರಸಭೆ ಸಿಬ್ಬಂದಿ ಇಂದು (ಫೆ.23) ಬೆಳಿಗ್ಗೆ ಮಳಿಗೆ ಖಾಲಿ ಮಾಡಿಸಲು ಮುಂದಾಗಿದ್ದಾರೆ.
ಆದರೆ, ಮಳಿಗೆಯಲ್ಲಿದ್ದ ಶಂಶುದ್ದೀನ್ ಎಂಬ ತೆಂಗಿನ ಕಾಯಿ ವ್ಯಾಪಾರಿ ಕಳೆದ 15ವರ್ಷಗಳಿಂದ ಬಾಡಿಗೆಯಲ್ಲಿದ್ದು, ಏಕಾಎಕಿ ಖಾಲಿಮಾಡುವದಿಲ್ಲ ಎಂದು ವಾಗ್ವಾದ ನಡೆಸಿ, ಸಿಬ್ಬಂದಿಗಳಿಗೆ ಮಚ್ಚು ತೋರಿಸಿ ಬೆದರಿಸಿದ್ದಾನೆ. ಘಟನೆಯಿಂದ ವಿಚಲಿತರಾದ ಸಿಬ್ಬಂದಿ ಮಳಿಗೆ ತೆರವುಗೊಳಿಸಬೇಕೆಂದು ಎಚ್ಚರಿಸಿದ್ದಾರೆ. ಸಾರ್ವಜನಿಕರು ಅನೇಕರು ಮಧ್ಯಪ್ರವೇಶಿಸಿ ಮಾರಕಾಸ್ತ್ರ ಬಿಡುವಂತೆಯೂ ಮನವಿ ಮಾಡಿದ್ದಾರೆ.
ಬೇರೊಬ್ಬರ ಹೆಸರಿನಲ್ಲಿ ಬಾಡಿಗೆ ಪಡೆದು ವ್ಯವಹಾರ ನಡೆಸುತ್ತಿದ್ದ ಎಂದು ಹೇಳಲಾಗುತ್ತಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಸಿರುವ ನಗರಸಭೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ನಗರಸಭೆ ಕಚೇರಿ ಹೊಂದಿಕೊಂಡಿರುವ ಮಳಿಗೆಗಳಿಗೆ ಬೀಗ ಹಾಕಿದ್ದಾರೆ. ನಗರದ ವಿವಿಧ ಕಡೆಗಳಲ್ಲಿರುವ ಮಳಿಗೆ ಟೆಂಡರ್ ಆಹ್ವಾನಿಸಿದ್ದು ಟೆಂಡರ್ ಮೂಲಕ ಪಡೆಯುವಂತೆ ನಗರಸಭೆ ಸಿಬ್ಬಂದಿ ಮನವಿ ಮಾಡಿದ್ದಾರೆ. ಪೊಲೀಸ್ ಬಂದೋಬಸ್ತ್‌ನಲ್ಲಿ ಮಳಿಗೆ ತೆರವು ಕಾರ್ಯ ನಡೆಸಲಾಗುತ್ತಿದೆ.
ಮಳಿಗೆದಾರರು ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು. ಏಕಾಎಕಿ ತೆರವುಗೊಳಿಸದೇ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದರು.