‘ಇಂಡಿಯಾ’ ಒಕ್ಕೂಟದ ಸುದೀರ್ಘ ಮಾತುಕತೆಗಳ ಬಳಿಕ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್ ನಡುವೆ ಉತ್ತರ ಪ್ರದೇಶದಲ್ಲಿ 2024ರ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಕಸರತ್ತು ಮುಗಿದಿದೆ. ಮೈತ್ರಿಯಲ್ಲಿ ಸ್ಪರ್ಧಿಸಲು ಮುಂದಾಗಿರುವ ಉಭಯ ಪಕ್ಷಗಳು 80 ಸಂಸದ ಸ್ಥಾನಗಳಿರುವ ಉತ್ತರ ಪ್ರದೇಶದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ತಂತ್ರ ಹೆಣೆಯುತ್ತಿವೆ.
ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ಕಾಂಗ್ರೆಸ್‌ಗೆ 17 ಕ್ಷೇತ್ರ ಮತ್ತು ಚಂದ್ರಶೇಖರ್ ಆಜಾದ್ ನೇತೃತ್ವದ ಆಜಾದ್ ಸಮಾಜ ಪಕ್ಷಕ್ಕೆ (ಎಎಸ್‌ಪಿ) 1 ಸ್ಥಾನವನ್ನು ನೀಡಿದೆ. ಉಳಿದ 62 ಸ್ಥಾನಗಳಲ್ಲಿ ಎಸ್‌ಪಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.
ಎರಡು ಪಕ್ಷಗಳ ನಡುವಿನ ಚುನಾವಣಾ ಮೈತ್ರಿಯು 2017ರ ವಿಧಾನಸಭಾ ಚುನಾವಣೆಯ ಸಂದರ್ಭವನ್ನು ಮರುಕಳಿಸುವಂತೆ ಮಾಡಿದೆ. ಇಬ್ಬರು ನಾಯಕರು – ಅಖಿಲೇಶ್ ಯಾದವ್ ಮತ್ತು ರಾಹುಲ್ ಗಾಂಧಿ – ಬಿಜೆಪಿಯನ್ನು ಎದುರಿಸಲು 2ನೇ ಬಾರಿಗೆ ಕೈಜೋಡಿಸಿದ್ದಾರೆ.
ಚುನಾವಣಾ ಅಂಕಿಅಂಶಗಳ ವಿಶ್ಲೇಷಣೆಗಳು, ಕಾಂಗ್ರೆಸ್ ಪಾಲಿಗೆ ಬಂದಿರುವ 17 ಕ್ಷೇತ್ರಗಳ ಪೈಕಿ ಹೆಚ್ಚಿನ ಕ್ಷೇತ್ರಗಳಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಠೇವಣಿ ಕಳೆದುಕೊಂಡಿತ್ತು ಎಂಬುದನ್ನು ಸೂಚಿಸುತ್ತವೆ. ಆ ಚುನಾವಣೆಯಲ್ಲಿ ಈ 17 ಕ್ಷೇತ್ರಗಳ ಪೈಕಿ 12 ಸ್ಥಾನಗಳಲ್ಲಿ ಪಕ್ಷವು ಠೇವಣಿ ಕಳೆದುಕೊಂಡಿತ್ತು. ಅಲ್ಲದೆ, ಒಂದು ಕ್ಷೇತ್ರದಲ್ಲಿ (ಬನ್ಸ್‌ಗಾಂವ್) ತನ್ನ ಅಭ್ಯರ್ಥಿಯನ್ನೇ ಕಣಕ್ಕಿಳಿಸಿರಲಿಲ್ಲ.
2019ರ ಚುನಾವಣೆಯಲ್ಲಿ ಕಾಂಗ್ರೆಸ್ 67 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಅಲ್ಲದೆ, ಸುಮಾರು 63 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿತ್ತು. ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ರಾಯ್ ಬರೇಲಿ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಪಕ್ಷಕ್ಕೆ ಏಕೈಕ ಗೆಲುವು ತಂದುಕೊಟ್ಟಿದ್ದರು. ಇನ್ನು, ರಾಹುಲ್ ಗಾಂಧಿ ಅವರು ತಮ್ಮ ಭದ್ರಕೋಟೆಯಾಗಿದ್ದ ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋಲು ಅನುಭವಿಸಿದ್ದರು.
2024 ರ ಚುನಾವಣೆಯಲ್ಲಿ, ಉತ್ತರ ಪ್ರದೇಶದ ರಾಯ್ ಬರೇಲಿ, ಅಮೇಥಿ, ಕಾನ್ಪುರ, ಫತೇಪುರ್ ಸಿಕ್ರಿ, ಬನ್ಸ್‌ಗಾಂವ್, ಸಹರಾನ್‌ಪುರ, ಪ್ರಯಾಗ್‌ರಾಜ್, ಮಹಾರಾಜ್‌ಗಂಡ್ಜ್, ವಾರಣಾಸಿ, ಅಮ್ರೋಹಾ, ಝಾನ್ಸಿ, ಬುಲಂದ್‌ಶಹರ್, ಗಾಜಿಯಾಬಾದ್, ಮಥುರಾ, ಸೀತಾಪುರ್, ಬಾರಾಬಂಕಿ ಮತ್ತು ದೇವರಿಯಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ.
17 ಸ್ಥಾನಗಳ ಪೈಕಿ ವಾರಣಾಸಿಯು ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುತ್ತಿರುವ ಕ್ಷೇತ್ರವಾಗಿದೆ. ಆದರೆ, ಕಾಂಗ್ರೆಸ್ ತನ್ನ ‘ನಿರ್ಲಕ್ಷ್ಯ’ದಿಂದಾಗಿ ತನ್ನ ಭದ್ರಕೋಟೆ ಅಮೇಥಿಯನ್ನು ಕಳೆದ ಚುನಾವಣೆಯಲ್ಲಿ ಕಳೆದುಕೊಂಡಿತ್ತು. ಈ ಬಾರಿಯೂ, ಆ ಕ್ಷೇತ್ರದಲ್ಲಿ ಹೆಚ್ಚಿನ ನಿರೀಕ್ಷೆ ಹೊಂದಿಲ್ಲ ಎಂಬಂತೆ ಕಾಣುತ್ತಿದೆ. ಆದರೆ, ರಾಹುಲ್ ಅವರೇ ಅಲ್ಲಿ ಮತ್ತೆ ಸ್ಪರ್ಧಿಸುವ ಸಾಧ್ಯತೆಗಳು ದಟ್ಟವಾಗಿವೆ.
2019ರಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ ಉತ್ತರ ಪ್ರದೇಶದ 80 ಸ್ಥಾನಗಳಲ್ಲಿ 64 ಕ್ಷೇತ್ರಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ (ಎಸ್‌ಪಿ) ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮೈತ್ರಿಯಲ್ಲಿ 15 ಸ್ಥಾನಗಳನ್ನು ಗೆದ್ದಿದ್ದವು. ಏಕಾಂಗಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಒಂದು ಕ್ಷೇತ್ರವನ್ನು ಮಾತ್ರ ಗೆದ್ದಿತ್ತು.
ಮಾಯಾವತಿಯವರ ಬಿಎಸ್‌ಪಿ 2024ರ ಚುನಾವಣೆಯಲ್ಲಿ ಏಕಾಂಗಿ ಹೋರಾಟ ನಡೆಸಲು ನಿರ್ಧರಿಸಿದೆ. ಜಯಂತ್ ಸಿಂಗ್ ಅವರ ಆರ್‌ಎಲ್‌ಡಿ ಎನ್‌ಡಿಎ ಜೊತೆ ಸೇರಲು ಮುಂದಾಗಿದೆ. ಹೀಗಾಗಿ, ಎಸ್‌ಪಿ, ಕಾಂಗ್ರೆಸ್ ಮತ್ತು ಆಜಾದ್ ಅವರ ಎಎಸ್‌ಪಿ ಹೊಸ ಮೈತ್ರಿಯೊಂದಿಗೆ ಈ ಚುನಾವಣೆ ಎದುರಿಸಲಿವೆ.
2019 ರಲ್ಲಿ, ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿ ಮೈತ್ರಿಯು ಮುಸ್ಲಿಮರು, ಯಾದವರು, ಜಾಟ್‌ಗಳು, ದಲಿತರು ಮತ್ತು ಒಬಿಸಿಗಳ ವಿಭಾಗಗಳನ್ನು ಒಗ್ಗೂಡಿಸುವ ತಂತ್ರದ ಭಾಗವಾಗಿತ್ತು. ಆದರೂ, ಜಾಟ್, ದಲಿತ ಹಾಗೂ ಒಬಿಸಿ ಮತಗಳನ್ನು ಸೆಳೆಯುವಲ್ಲಿ ಮೈತ್ರಿ ವಿಫಲವಾಗಿತ್ತು.
ಈಗಿನ ಹೊಸ ಮೈತ್ರಿಯು ನಿಜವಾಗಿಯೂ ಇಂಡಿಯಾ ಒಕ್ಕೂಟಕ್ಕೆ ಬಲ ನೀಡುತ್ತದೆ. ಆದರೂ, ಹಿಂದಿನ ಚುನಾವಣಾ ದಾಖಲೆಗಳು ಹೆಚ್ಚಿನ ಭರವಸೆ ಇಟ್ಟುಕೊಳ್ಳುವುದು ಕಷ್ಟವೆಂದು ಹೇಳುತ್ತಿವೆ.
ಈ ಸುದ್ದಿ ಓದಿದ್ದೀರಾ?: ಕೃಷಿ ಸಚಿವರ ಸೂಚನೆಯನ್ನು ಗೌರವಿಸದ ಕುಲಪತಿ: ಕೃಷಿ ವಿವಿಗಳಿಗೇ ‘ಕಿಸಾನ್ ಸತ್ಯಾಗ್ರಹ’ ಬೇಡವಾಯಿತೇ?
ಕಾಂಗ್ರೆಸ್-ಎಸ್‌ಪಿ ನಡುವೆ ಸೀಟು ಹಂಚಿಕೆ ವಿಚಾರದಲ್ಲಿ ಎರಡೂ ಪಕ್ಷಗಳ ಕೆಲ ಮುಖಂಡರು ಅಪಸ್ವರ ಎತ್ತಿದ್ದರು. ಆದರೂ, ಪ್ರಿಯಾಂಕಾ ಗಾಂಧಿ ಅವರ ಪ್ರಯತ್ನದಿಂದಾಗಿ ಸೀಟು ಹಂಚಿಕೆ ಜಟಾಪಟಿಗೆ ತೆರೆ ಬಿದ್ದಿದ್ದು, ಸ್ಥಾನಗಳ ಹಂಚಿಕೆ ಮುಗಿದಿದೆ.
ಪ್ರಿಯಾಂಕಾ ಗಾಂಧಿ ಅವರ ಪ್ರಯತ್ನಕ್ಕೆ ಉತ್ತರ ಪ್ರದೇಶದ ಎಐಸಿಸಿ ಉಸ್ತುವಾರಿ ಅವಿನಾಶ್ ಪಾಂಡೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಬಿಜೆಪಿಯನ್ನು ಸೋಲಿಸಲು ಎಲ್ಲ ವಿರೋಧ ಪಕ್ಷಗಳನ್ನು ಒಟ್ಟಿಗೆ ತರಲು ಪ್ರಿಯಾಂಕಾ ಪ್ರಯತ್ನಿಸುತ್ತಿದ್ದಾರೆ ಎಂದು ಬುಧವಾರ ಹೇಳಿದ್ದಾರೆ.
ಇನ್ನು, ಸೋನಿಯಾ ಗಾಂಧಿ ಅವರ ಹಿಡಿತದಲ್ಲಿರುವ ರಾಯ್ ಬರೇಲಿಯಲ್ಲಿ ಪ್ರಿಯಾಂಕಾ ಗಾಂಧಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಂಬ ಮಾತುಗಳೂ ಇವೆ. ಅಲ್ಲದೆ, ಪ್ರಿಯಾಂಕಾ ಕರ್ನಾಟಕದ ಬಳ್ಳಾರಿಯಿಂದಲು ಸ್ಪರ್ಧಿಸಬಹುದು ಎಂದು ಹೇಳಲಾಗುತ್ತಿದೆ. ಸದ್ಯ, ರಾಜ್ಯಸಭೆಗೆ ಸೋನಿಯಾ ಗಾಂಧಿ ಅವರು ರಾಜಸ್ಥಾನದಿಂದ ಆಯ್ಕೆಯಾಗಿದ್ದಾರೆ. ಹೀಗಾಗಿ, ರಾಯ್ ಬರೇಲಿ ಕ್ಷೇತ್ರ ಖಾಲಿ ಉಳಿದಿದೆ. ಪ್ರಿಯಾಂಕಾ ಅಲ್ಲಿಗೆ ಹೋಗುವರೇ, ಕರ್ನಾಟಕಕ್ಕೆ ಬರುವರೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.