ವಿಜಯಪುರದ ಲಾಲಬಹುದ್ದೂರ ಶಾಸ್ತ್ರಿ ಮಾರ್ಕೆಟ್ ಅಥವಾ ಮಿನಾಕ್ಷಿ ಚೌಕದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುವ ವಿವಿಧ ಕೋಚಿಂಗ್ ಸೆಂಟರ್‌ಗಳಿವೆ. ಅಲ್ಲಿ, ಬಡತನ ಹಿನ್ನೆಲೆಯ ಸಾವಿರಾರು ವಿದ್ಯಾರ್ಥಿ ಯುವಜನರು ಅಧ್ಯಯನ ಮಾಡುತ್ತಿದ್ದಾರೆ. ಅವರಿಗೆ ಮೂರು ಹೊತ್ತು ಊಟ ಸಿಗದೇ ಪರದಾಡುವ ಸ್ಥಿತಿ ಉಂಟಾಗಿದೆ. ಅವರಿಗೆ ಊಟದ ವ್ಯವಸ್ಥೆಗಾಗಿ ಇಂದಿರಾ ಕ್ಯಾಟೀನ್ ತೆರೆಯಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ವಿಜಯಪುರದಲ್ಲಿ ಡಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿರುವ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರಸಲ್ಲಿಸಿದ್ದಾರೆ. “ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ಮತ್ತು ಪಿ ಸಿ, ಪಿಎಸ್‌ಐ, ಎಸ್‌ಡಿಎ, ಎಫ್‌ಡಿಎ ಮತ್ತು ಹತ್ತು ಹಲವಾರು ಹುದ್ದೆಗಳ ಕನಸು ಹೊತ್ತು ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಬರುತ್ತಿರುತ್ತಾರೆ. ಇಲ್ಲಿ ಸುಮಾರು ಬಡ ವಿದ್ಯಾರ್ಥಿ ಮತ್ತು ಯುವಜನರು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಈ ಬಡ ವಿದ್ಯಾರ್ಥಿಗಳ ಹಸಿವು ನೀಗಿಸಲು ಇಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸುವುದು ಅತ್ಯಗತ್ಯ” ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಡಿವಿಪಿ ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ್, ಅಮೃತ್,ಯುವರಾಜ್, ಸಚಿನ್, ಆನಂದ, ಪ್ರಕಾಶ, ಸಂಜು, ಮಾದೇಶ್, ಸತೀಶ್ ಅಲ್ಲದೇ ನೂರಾರು ವಿದ್ಯಾರ್ಥಿ ಯುವಜನರು ಭಾಗಿಯಾಗಿದ್ದರು.