ಮುಸ್ಲಿಂ ಮಹಿಳೆಯೊಬ್ಬರು ಮಸೀದಿಯಲ್ಲಿ ನಮಾಜ್ ಮಾಡಿದ್ದಕ್ಕೆ, ಅವರ ಕುಟುಂಬಕ್ಕೆ ಗ್ರಾಮದಲ್ಲಿ ಬಹಿಷ್ಕಾರ ಹಾಕಲಾಗಿದೆ. 25 ವರ್ಷಗಳಿಂದ ಕುಟುಂಬವು ಬಹಿಷ್ಕಾರದ ಸುಳಿಗೆ ಸಿಲುಕಿದೆ ಎಂದು ಆರೋಪಿಸಲಾಗಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗುಂಡಿಗೆರೆಯಲ್ಲಿ ಮಹಿಳೆ ಜುಬೈದಾ ಅವರ ಕುಟುಂಬಕ್ಕೆ 25 ವರ್ಷಗಳ ಹಿಂದೆಯೇ ಬಹಿಷ್ಕಾರ ಹಾಕಲಾಗಿದೆ. ಇದೀಗ, ಎರಡು ದಿನಗಳ ಹಿಂದೆ ಜುಬೈದಾ ಅವರ ಪತಿ ಅಹಮ್ಮದ್ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯಲ್ಲಿ ಜುಬೈದಾ ಭಾಗವಹಿಸಲು ಶಾಫಿ ಮಸೀದಿ ಜಮಾಹತ್ ಅವಕಾಶ ನೀಡಿಲ್ಲ. ಹೀಗಾಗಿ, ಅವರ ಪುತ್ರ ರಶೀದ್ ಎಂಬವರು ಪೊಲೀಸರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಬಹಿಷ್ಕಾರ ಪ್ರಕರಣ ಬೆಳಕಿಗೆ ಬಂದಿದೆ.
30 ವರ್ಷಗಳ ಹಿಂದೆ ಜುಬೈದಾ ಅವರನ್ನು ಗುಂಡಿಗೆರೆ ಗ್ರಾಮದ ಅಹಮ್ಮದ್ ವಿವಾಹವಾಗಿದ್ದರು. ಜುಬೈದಾ ಅವರು ವಿರಾಜಪೇಟೆ ಮಸೀದಿಯಲ್ಲಿ ನಮಾಜ್ ಮಾಡಿದ್ದ ಕಾರಣಕ್ಕೆ, 25 ವರ್ಷಗಳಿಂದ ಗುಂಡಿಗೆರೆ ಗ್ರಾಮದಲ್ಲಿ ಅವರಿಗೆ ಬಹಿಷ್ಕಾರ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ನಮಾಜ್ ಮಾಡಿದ್ದಕ್ಕೆ ಬಹಿಷ್ಕರಿಸಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಮಸೀದಿಯ ಮುಖಂಡರೊಬ್ಬರು, ಎಲ್ಲದಕ್ಕೂ ನಿಯಮಗಳು ಇರುತ್ತವೆ. ಬೇರೆ ಯಾವುದೋ ಕಾರಣಕ್ಕೆ ಹೀಗಾಗಿರಬಹುದು ಎಂದಿದ್ದಾರೆ.