“ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ತಮ್ಮ ತಮ್ಮ ಶಿಕ್ಷಣ ನೀತಿಯನ್ನು ರೂಪಿಸಿಕೊಳ್ಳುವಂತಾಗಬೇಕು. ಕೇಂದ್ರ ಸರ್ಕಾರ ತಮ್ಮ ನೀತಿಗಳನ್ನು ರಾಜ್ಯಗಳ ಮೇಲೆ ಹೇರಬಾರದು” ಎಂದು ಪತ್ರಕರ್ತ ಡಿ ಎನ್ ಗುರುಪ್ರಸಾದ್ ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರ ಆಯೋಜಿಸಿರುವ ಎರಡು ದಿನಗಳ ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ, ಭಾರತದ ಸಂವಿಧಾನ ರಚನೆಯ ಅಮೃತಮಹೋತ್ಸವ ಸಮಾರಂಭದಲ್ಲಿ ʼಒಕ್ಕೂಟ ವ್ಯವಸ್ಥೆಯಲ್ಲಿನ ಅಂತರಗಳ ಸಮತೋಲನಾ ಆಯಾಮಗಳುʼ ಗೋಷ್ಠಿಯಲ್ಲಿ ಅವರು ಮಾತನಾಡಿದರು.
“22 ಭಾಷೆಗಳನ್ನು ಅಧಿಕೃತ ಭಾಷಾ ಪಟ್ಟಿಯಲ್ಲಿ ಸೇರಿಸಲಾಯಿತು. ತದನಂತರ ಎಂಟು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡಲಾಯಿತು. ಇನ್ನೂ ಅನೇಕ ಭಾಷೆಗಳು ಶಾಸ್ತ್ರೀಯ ಸ್ಥಾನಮಾನಕ್ಕೆ ಹೊರಟಿವೆ. ಆದರೆ ನಮ್ಮ ಸಂವಿಧಾನ ಸಮಾನತೆಯ ತಳಹದಿಯ ಮೇಲೆ ಇದೆ. ಎಲ್ಲ ಭಾಷೆಗಳು ಶಾಸ್ತ್ರೀಯ ಭಾಷೆಗಳೇ” ಎಂದರು.
“ಹಿಂದಿಯನ್ನು ರಾಷ್ಟ್ರಭಾಷೆ ಮಾಡಬೇಕು ಎಂಬುದನ್ನು ತಮಿಳುನಾಡು ದೊಡ್ಡಮಟ್ಟದಲ್ಲಿ ಪ್ರತಿಭಟಿಸಿತು. ಆದರೆ ಸಂವಿಧಾನದಲ್ಲಿ ಒಂದು ಆರ್ಟಿಕಲ್ ಹಿಂದಿಯನ್ನು ಪ್ರಮೋಟ್ ಮಾಡಬೇಕೆಂಬ ಅಂಶವನ್ನು ಹೊಂದಿದೆ. ಇದರ ವಿರುದ್ಧ ದಿಟ್ಟ ನಿಲುವನ್ನು ತೆಗೆದುಕೊಳ್ಳಲು ಈ ವರೆಗೂ ಆಗಿಲ್ಲ. ಹಿಂದಿಯನ್ನು ತಮಿಳುನಾಡಿನಲ್ಲಿ ಮಿನಿಮೈಸ್ ಮಾಡಿತು. ಹಿಂದಿ ಹೇರಿಕೆ ವಿರುದ್ಧ ಹೋರಾಡಿದರೂ ಕೂಡ ಸಣ್ಣಸಣ್ಣ ಭಾಷೆಗಳನ್ನು ಅದು ಒಳಗೊಂಡಿದೆಯಾ ಎಂಬುದನ್ನು ನೋಡಬೇಕಾಗುತ್ತದೆ. ಕರ್ನಾಟಕದಲ್ಲೂ ಇದು ಆಗುವ ಸಾಧ್ಯತೆ ಇದೆ. ಇಲ್ಲಿ ಯಾರೋ ತಮಿಳು, ತೆಲುಗು ಕಲಿಯಬೇಕು ಎಂದಾಗ ಆಗುತ್ತಿಲ್ಲ.
ತಮಿಳುನಾಡಿನಲ್ಲಿ ಒಂದು ಮಟ್ಟದಲ್ಲಿ ಹಿಂದಿ ಭಾಷೆ ವಿರುದ್ಧ ಹೋರಾಡಿದಾಗ ಜಾತಿ ಆಯಾಮವೂ ಇತ್ತು. ಭಾಷಾ ಚಳವಳಿ ಫ್ಯೂಡಲ್ ಸಮುದಾಯದ ಜೊತೆ ತಳುಕು ಹಾಕಿಕೊಳ್ಳಬಾರದು. ಇದು ಕರ್ನಾಟಕಕ್ಕೂ ಪಾಠ ಆಗಬೇಕು” ಎಂದರು.
“ರಾಜ್ಯ ಸರ್ಕಾರದ ಪ್ರತಿನಿಧಿಗಳು ರಾಜ್ಯಸಭೆಯಲ್ಲಿ ಚರ್ಚೆ ಮಾಡಬೇಕು. ಆಯಾ ರಾಜ್ಯಗಳ ಸಂಗತಿಗಳನ್ನು ಚರ್ಚಿಸಬೇಕು. ಈಗ ರಾಜ್ಯಗಳ ಹಿತಾಸಕ್ತಿಯನ್ನು ಕಳೆದುಕೊಂಡು ಪಕ್ಷದ ಹಿತಾಸಕ್ತಿಯನ್ನೇ ನೋಡುತ್ತಿರುವವರನ್ನು ಕಾಣುತ್ತಿದ್ದೇವೆ.
ಮೊದಲೆಲ್ಲ ಆಯಾ ರಾಜ್ಯದ ಪ್ರತಿನಿಧಿಗಳಾಗಬೇಕಾದವರು ಆಯಾ ರಾಜ್ಯದ ನಿವಾಸಿಯಾಗಿರಬೇಕು ಎಂಬ ನಿಯಮವಿತ್ತು. ಆದರೆ 2003ರಲ್ಲಿ ತಿದ್ದುಪಡಿ ತಂದು ಯಾರು ಎಲ್ಲಿಂದ ಬೇಕಾದರೂ ಆಯ್ಕೆಯಾಗಬಹುದು ಎಂಬ ನಿಯಮ ತಂದಿದ್ದಾರೆ. ಹೀಗಾಗಿ ಇಲ್ಲಿಂದ ನಿರ್ಮಲಾ ಸೀತಾರಾಮನ್ ಆಯ್ಕೆಯಾಗುತ್ತಾರೆ” ಎಂದು ಹೇಳಿದರು.
“ಡೀಲಿಮಿಟೇಷನ್ ಪ್ರಶ್ನೆ ಬಂದಾಗ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಜನಸಂಖ್ಯೆ ಇದೆ. ಇಲ್ಲಿನ ಪ್ರಾತಿನಿಧ್ಯ ಕಡಿಮೆಯಾಗುತ್ತದೆ. ಇದರ ಜೊತೆಗೆ ಯುಪಿಯಲ್ಲಿ ದಲಿತರು ಹೆಚ್ಚಿದ್ದರೆ, ಅವರಿಗೆ ಎಷ್ಟು ಸ್ಥಾನ ಸಿಗುತ್ತದೆ ಎಂಬುದನ್ನು ನೋಡಬೇಕಾಗುತ್ತದೆ.
ʼಒನ್ ನೇಷನ್ ಒನ್ ಎಲೆಕ್ಷನ್ʼ ಎನ್ನುತ್ತಿದ್ದಾರೆ. ಇದು ಒಕ್ಕೂಟ ತತ್ವದ ಮೇಲೆ ಹಲ್ಲೆಯಲ್ಲದೆ ಮತ್ತೇನೂ ಅಲ್ಲ. ಇದು ಯಾವತ್ತೂ ಆಗದಂತೆ ನೋಡಿಕೊಳ್ಳಬೇಕಿದೆ. ಈಗ ಚುನಾವಣೆ ಬರುತ್ತಿದೆ. ಬಿಜೆಪಿ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ಗೌರವ ಸಲ್ಲಿಸಲಿಲ್ಲ. ಕನಿಷ್ಠ ಪಕ್ಷ INDIA ಮೈತ್ರಿ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ, ಒಕ್ಕೂಟ ವ್ಯವಸ್ಥೆ ಕಾಪಾಡುತ್ತೇವೆ ಎಂಬುದನ್ನು ಸೇರಿಸಬೇಕು” ಎಂದು ಅವರು ಒತ್ತಾಯಿಸಿದರು.
